ಚನ್ನರಾಯಪಟ್ಟಣ: ತಂದೆಯಿಂದ ಬಳುವಳಿಯಾಗಿ ಬಂದ ಚಿತ್ರಕಲೆಯಲ್ಲಿ ಎಂ. ರಿತೇಶ್ ಸಾಧನೆ ಮಾಡುತ್ತಿದ್ದಾರೆ. ಚಿತ್ರಕಲೆ ಮಾತ್ರವಲ್ಲದೇ, ವಿವಿಧ ಸಲಕರಣೆಗಳನ್ನೂ ನಿರ್ಮಾಣ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಇವರ ತಂದೆ ಎಚ್.ಎಸ್. ಮಂಜುನಾಥ್, ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ. ತಾಯಿ ಎ. ಮಂಜುಳಾ ಶಿಕ್ಷಕಿಯಾಗಿದ್ದಾರೆ. 6ನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ರಚಿಸುತ್ತಿದ ಚಿತ್ರಕಲೆಯನ್ನು ಗಮನಿಸುತ್ತಿದ್ದ ರಿತೇಶ್, ಅದರಿಂದ ಪ್ರೇರಿತರಾಗಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡರು. ಸದ್ಯ ಪಿಯುಸಿ ತೇರ್ಗಡೆಯಾಗಿ ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಿದ್ದಾರೆ.
ಗಿಡ, ಮರಗಳಚಿತ್ರಣ, ಬೆಟ್ಟಗುಡ್ಡಗಳ ಸಾಲು, ಸಸ್ಯ ಶ್ಯಾಮಲೆಯ ನಡುವೆ ಇರುವ ಒಂಟಿಮನೆ, ಹರಿಯುವ ತೊರೆ, ಸಮುದ್ರದಲ್ಲಿ ದೋಣೆ ಸಾಗುವ ಪರಿ, ಕೋಟೆಗಳು, ಸೂರ್ಯನ ಚಿತ್ರ, ಪ್ರಕೃತಿಯ ಸಂಪತ್ತನ್ನು ತನ್ನ ಕುಂಚದಿಂದ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಸರ್ಕಸ್‍ನಲ್ಲಿ ಆನೆ, ರಿಂಗ್ ಮಾಸ್ಟರ್, ಹಾಸ್ಯ ಪ್ರಸಂಗಗಳ ದೃಶ್ಯಗಳು ಕಾಣಸಿಗುತ್ತವೆ.
ಸೌರ ಉಳುಮೆ ಯಂತ್ರವನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಲಾಗಿದ್ದು ರೈತರಿಗೆ ಅನುಕೂಲವಾಗಲಿದೆ. ಓದಿನೊಂದಿಗೆ ಆವಿಷ್ಕಾರ ಮುಂದುವರಿಸುತ್ತೇನೆ.ಎಂ. ರಿತೇಶ್, ವಿದ್ಯಾರ್ಥಿ
ಮೈಸೂರಿನ ನಂದಿಬೆಟ್ಟ, ಜಗತ್ತಿಗೆ ತ್ಯಾಗ, ಶಾಂತಿ, ಅಹಿಂಸೆಯ ಸಂದೇಶ ಸಾರಿದ ಶ್ರವಣಬೆಳಗೊಳದ ವಿಂಧ್ಯಗಿರಿ, ಚಂದ್ರಗಿರಿಯ ವಿಹಂಗಮ ನೋಟ, ಪ್ರಾಣಿ, ಪಕ್ಷಿಗಳು, ಅಕ್ಷರ ಕ್ರಾಂತಿ ನಡೆಸಿದ ಜ್ಯೋತಿ ಬಾ ಫುಲೆ, ಸಾವಿತ್ರಿಬಾಯಿಫುಲೆ ಚಿತ್ರ ಸೇರಿ ಮಹಾನ್ ನಾಯಕರ ಚಿತ್ರಗಳು ಸುಂದರವಾಗಿ ಮೂಡಿ ಬಂದಿವೆ. 50 ಕ್ಕೂ ಕಲಾಕೃತಿಗಳನ್ನು ರಿತೇಶ್ ರಚಿಸಿದ್ದಾರೆ.
2023ರಲ್ಲಿ ಜಪಾನ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಪ್ರದರ್ಶನದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದ್ದು. ಅಲ್ಲಿನ ಸುಕುರಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ವಿದ್ಯಾರ್ಥಿ ವೇತನ ನೀಡಿ, ವಿದ್ಯಾಭ್ಯಾಸ ನೀಡಲು ಮುಂದೆ ಬಂದಿರುವುದು ರಿತೇಶ್ ಪ್ರತಿಭೆಗೆ ಸಾಕ್ಷಿ. ಈತನ ಸಾಧನೆಯನ್ನು ಮೆಚ್ಚಿದ ಅನೇಕ ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ವಿವಿಧ ಸ್ಪರ್ಧೆಯಲ್ಲಿ 29 ಪ್ರಶಸ್ತಿ ಪಡೆದಿದ್ದಾರೆ.
ರಿತೇಶ್ ರಚಿಸಿದ ಚಿತ್ರಕಲೆ
ಸೌರ ಚಾಲಿತ ಉಳುಮೆ ಯಂತ್ರ
ಸ್ವದೇಶಿ ನಿರ್ಮಿತ ಸೌರ ಮತ್ತು ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ಉಳುಮೆ ಯಂತ್ರವನ್ನು ಆವಿಷ್ಕಾರ ರಿತೇಶ್ ಮಾಡಿದ್ದಾರೆ. ಅಂದಾಜು ₹40ಸಾವಿರ ವೆಚ್ಚದಲ್ಲಿ ತಯಾರಿಸಲಾಗಿದ್ದು ರೈತಾಪಿ ವರ್ಗದವರಿಗೆ ಅನುಕೂಲ ಇದೆ. ಈ ಯಂತ್ರದಿಂದ ಉಳುಮೆ ಮತ್ತು ಬಿತ್ತನೆ ಮಾಡಬಹುದು. ಯಂತ್ರಕ್ಕೆ ಸೌರ ಜೊತೆಗೆ ವಿದ್ಯುತ್‍ನಿಂದ ಚಾರ್ಚ್ ಮಾಡಬಹುದು. ಒಮ್ಮೆ ಚಾರ್ಚ್ ಮಾಡಿದರೆ 3 ಗಂಟೆ ಕೆಲಸ ಮಾಡುತ್ತದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಪೇಟೆಂಟ್ ದೊರಕಿದೆ. ಕಂಪನಿಗಳ ನೆರವು ಸಿಕ್ಕರೆ ಅಭಿವೃದ್ದಿ ಪಡಿಸಲು ಅನುಕೂಲವಾಗುತ್ತದೆ ಎಂಬ ಅಭಿಮತ ರಿತೇಶ್ ಅವರದ್ದು.
ವಿಜ್ಞಾನ ಪ್ರದರ್ಶನದಲ್ಲೂ ಸೈ
ದೆಹಲಿಯಲ್ಲಿ ನಡೆದ ವಿಜ್ಞಾನ ತಂತ್ರಜ್ಞಾನ ಪ್ರದರ್ಶನದಲ್ಲಿ 600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ 60 ವಿದ್ಯಾರ್ಥಿಗಳು ಆಯ್ಕೆಯಾದರು. ಆ ಪಟ್ಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ 8 ವಿದ್ಯಾರ್ಥಿಗಳ ಪೈಕಿ ರಿತೀಶ್ ಮೊದಲಿಗರಾಗಿ ಬಹುಮಾನ ಪಡೆದಿದ್ದಾರೆ. ಮಂಗಳೂರಿನ ಸುರತ್ಕಲ್‍ನಲ್ಲಿ ನಡೆದ ರಾಜ್ಯಮಟ್ಟದ ಇನ್‍ಸ್ಪೈರ್ ಪ್ರದರ್ಶನದಲ್ಲಿ ಇನ್‌ಸ್ಪೈರ್ ಪ್ರಶಸ್ತಿ ಲಭಿಸಿದೆ. ನವದೆಹಲಿಯಲ್ಲಿ 2022ರಲ್ಲಿ ಜರುಗಿದ ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ಅಂದಿನ ಕೇಂದ್ರ ಸಚಿವ ಜಿತೆಂದ್ರಸಿಂಗ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.