ಶುಕ್ರವಾರ, ನವೆಂಬರ್ 27, 2020
19 °C

ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮೀಸಲು ತಂತ್ರಗಾರಿಕೆ ಮೂಲಕ ನಗರಸಭೆ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಆಸೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಗುರುವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಅವಕಾಶ ಕಲ್ಪಿಸಿದೆ. ಆದರೆ ಚುನಾವಣಾ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂಬ ಷರತ್ತು ವಿಧಿಸಿದೆ.

ಇದರಿಂದಾಗಿ ಬಿಜೆಪಿಗೆ ಅಲ್ಪ ಹಿನ್ನಡೆಯಾಗಿದ್ದು, ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 34ನೇ ವಾರ್ಡ್‌ನಿಂದ ಗೆದ್ದಿರುವ ಮೋಹನ್ ಒಬ್ಬರೇ ನಾಮಪತ್ರ ಸಲ್ಲಿಸಲು ಅರ್ಹರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ಐವರು ಆಕಾಂಕ್ಷಿಗಳಾಗಿದ್ದಾರೆ.

ಮೀಸಲಾತಿ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಜೆಡಿಎಸ್ ಬೆಂಬಲಿತ ಹಾಸನ ನಗರಸಭೆ ಸದಸ್ಯರು ದಾಖಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಹೈ ಕೋರ್ಟ್‍ನ ಏಕ ಸದಸ್ಯ ಪೀಠ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಏಕ ಸದಸ್ಯ ನ್ಯಾಯಪೀಠದ ತಡೆಯಾಜ್ಞೆ ವಿರುದ್ದ ದ್ವಿ ಸದಸ್ಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.  ತಡೆಯಾಜ್ಞೆ ತೆರವುಗೊಳಿಸಿ ನ.2 ರೊಳಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಬೇಕೆಂದು ಕೋರ್ಟ್‌ ನಿರ್ದೇಶನ ನೀಡಿತ್ತು.

ಹೈ ಕೋರ್ಟ್ ದ್ವಿಸದಸ್ಯ ನ್ಯಾಯ ಪೀಠದ ತೀರ್ಪನ್ನು ಪ್ರಶ್ನಿಸಿ ಜೆಡಿಎಸ್ ಬೆಂಬಲಿಗರು ಸುಪ್ರೀಂ ಕೋರ್ಟ್‍ನಲ್ಲಿ ರಜಾ ಕಾಲದ ವಿಶೇಷ ಅರ್ಜಿ ( ಎಸ್‍ಎಲ್‍ಪಿ) ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ , ಹೈ ಕೋರ್ಟ್‍ನ ಏಕ ಸದಸ್ಯ ನ್ಯಾಯಪೀಠ ಹಾಗೂ ದ್ವಿಸದಸ್ಯ ನ್ಯಾಯಪೀಠದ ನಿರ್ದೇಶನಗಳನ್ನು ಗಮನಿಸಿದ್ದು, ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಬಹುದು. ಆದರೆ ಫಲಿತಾಂಶ ಘೋಷಣೆ ಮಾಡುವಂತಿಲ್ಲ. ಹೈ ಕೋರ್ಟ್‌ನ ಏಕ ಸದಸ್ಯ
ನ್ಯಾಯ ಪೀಠದ ಅಂತಿಮ ತೀರ್ಪು ಪ್ರಕಟವಾಗುವವರೆಗೂ ಫಲಿತಾಂಶ ಪ್ರಕಟಿಸಕೂಡದು ಎಂದು ಬುಧವಾರ ಸುಪ್ರೀಂ
ಕೋರ್ಟ್ ನಿರ್ದೇಶನ ನೀಡಿದೆ. ಏಕ ಸದಸ್ಯ ಪೀಠವು ತನ್ನ ಮುಂದಿರುವ ರಿಟ್ ಅರ್ಜಿಯನ್ನು ತಿಂಗಳೊಳಗಾಗಿ ಇತ್ಯರ್ಥ
ಪಡಿಸಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ವಿವಾದದ ಮೂಲ: ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ , ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗುಂಪಿನ ಮಹಿಳೆಗೆ ಮೀಸಲಾಗಿದೆ. ಬಹುಮತ ಹೊಂದಿರುವ ಜೆಡಿಎಸ್‍ನಲ್ಲಿ ಪರಿಶಿಷ್ಟ ಪಂಗಡದ ಸದಸ್ಯರಿಲ್ಲ. ಆದರೆ ಬಿಜೆಪಿಯಲ್ಲಿ ಒಬ್ಬ ಪರಿಶಿಷ್ಟ ಪಂಗಡದ ಸದಸ್ಯರಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯದ ಬಿಜೆಪಿ ಸರ್ಕಾರ ಹಾಸನ ನಗರಸಭೆ ಅಧಿಕಾರ ಹಿಡಿಯಲು ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನವನ್ನು ಮೀಸಲಾತಿ ನಿಗದಿಪಡಿಸಿದೆ.

ಸರ್ಕಾರವೇ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ
ಮೀಸಲಿರಿಸಲಾಗಿದೆ ಎಂದು ಹಾಸನ ನಗರಸಭೆ ಜೆಡಿಎಸ್ ಸದಸ್ಯ ಎಚ್.ವಿ.ಚಂದ್ರೇಗೌಡ ಮತ್ತು ಇತರರು ಹೈ ಕೋರ್ಟ್ ಮೆಟ್ಟಿಲೇರಿದ್ದರು.

ಈ ರಿಟ್ ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಹೈ ಕೋರ್ಟ್ ಏಕ ಸದಸ್ಯ ಪೀಠ ಅ.8 ರಂದು ನಿಗದಿಯಾಗಿದ್ದ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಆನಂತರ ದಿ ಸದಸ್ಯ ನ್ಯಾಯ ಪೀಠ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಅ.29 ಕ್ಕೆ ಚುನಾವಣೆ ನಿಗದಿಯಾಗಿತ್ತು. ಈಗ ಈ ವಿವಾದ ಈಗ ಸುಪ್ರೀಂ ಕೋರ್ಟ್‍ವರೆಗೂ ಹೋಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಅ.29 ರಂದು ಚುನಾವಣೆ ನಡೆದರೂ ಗೊಂದಲ ಪರಿಹಾರಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.