ಶನಿವಾರ, ನವೆಂಬರ್ 28, 2020
18 °C

1,100 ಕೆರೆಗಳ ಸರ್ವೆ ಪೂರ್ಣ: ಸಚಿವ ಜೆ.ಸಿ. ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿರುವ 6,400 ಕೆರೆಗಳ ಪೈಕಿಗಳ 1,100 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟ
ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಉತ್ತಮ ಮಳೆಯಿಂದಾಗಿ ಈ ಬಾರಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ 170 ಕೆರೆ ಪೈಕಿ 64 ಭರ್ತಿಯಾಗಿದ್ದು, 50 ಭಾಗಶಃ, 26 ಕೆರೆ ಖಾಲಿ ಖಾಲಿಯಾಗಿದೆ ಎಂದು ತಿಳಿಸಿದರು. 

ಹಳೇಬೀಡು ದ್ವಾರಸಮುದ್ರ ಕೆರೆ ಏರಿ ಅಪಾಯದಲ್ಲಿರುವ ಕಾರಣ ತಾತ್ಕಾಲಿಕ ರಿಪೇರಿ ಕಾರ್ಯ ಕೈಗೊಳ್ಳಲಾಗುವುದು. ಕೆರೆಯಲ್ಲಿ ನೀರು ಕಡಿಮೆಯಾಗದ ಹೊರತು ಏನು ಮಾಡುವಂತಿಲ್ಲ. ನೀರು ಖಾಲಿಯಾಗಬೇಕಾದರೆ 3–4 ತಿಂಗಳು ಕಾಯಬೇಕು. ಹಾಗಾಗಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ತಜ್ಞರು ಬಂದು ಸಲಹೆ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಮಳೆಯಿಂದಾಗಿ ವಿವಿಧ ತಾಲ್ಲೂಕುಗಳಲ್ಲಿ ಹತ್ತು ಕೆರೆಗಳಿಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯ ಇನ್ನೂ ಆರಂಭಿಸಿಲ್ಲ. ಕ್ರಿಯಾ ಯೋಜನೆ, ಟೆಂಡರ್‌ ಪ್ರಕ್ರಿಯೆ, ಹಣಕಾಸು ಇಲಾಖೆ ಒಪ್ಪಿಗೆ ಪಡೆಯಲು ಮೂರು ತಿಂಗಳು ಬೇಕಾಗಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಟಲ್‌ ಭೂ ಜಲ, ವಿಶ್ವಬ್ಯಾಂಕ್‌ ಮೆಚ್ಚುಗೆ: ಅಂತರ್ಜಲ ಹಾಗೂ ರೈತರ ಆದಾಯ ಹೆಚ್ಚಿಸುವ ಕೇಂದ್ರ ಸರ್ಕಾರದ ಅಟಲ್‌ ಭೂ ಜಲ ಯೋಜನೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ. ಚಿಕ್ಕನಾಯಕನಹಳ್ಳಿ ಕೆರೆಯನ್ನು ಪೈಲಟ್‌ ಯೋಜನೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ಕೆರೆ ಸಹ ಈ ಯೋಜನೆಗೆ ಒಳಪಟ್ಟಿದೆ. ಅಂತರ್ಜಲ ಮಟ್ಟ ಕುಸಿದಿರುವ ಕೆರೆಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ನೀರು ಉಳಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ಕೇಂದ್ರ ಸ್ಪಷ್ಟ ಮಾರ್ಗಸೂಚಿ ಹೊರಡಿಸದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಕೇಂದ್ರ ₹ 80 ಕೋಟಿ ಅನುದಾನ ನೀಡಿದರೆ, ಕೆಲಸ ಮುಂದೆ ಸಾಗುತ್ತದೆ. ಇದು ವಿಸ್ತಾರವಾದ ಯೋಜನೆಯಾಗಿದ್ದು, ಪ್ರತಿ ಕೊಳವೆಬಾವಿಯ ಆಳ, ನೀರಿನ ಮಟ್ಟ ತಿಳಿಯಬೇಕಿದೆ. ಇದಕ್ಕೆ ಸಿಬ್ಬಂದಿ ಕೊರತೆ ಇದೆ. ಎಂದು ಸಚಿವರು ವಿವರಿಸಿದರು.

 ಗೋಷ್ಠಿಯಲ್ಲಿ ಶಾಸಕರಾದ ಕೆ.ಎಸ್‌.ಲಿಂಗೇಶ್‌, ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಎಚ್‌.ಕೆ.ಕುಮಾರಸ್ವಾಮಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.