ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಯ್ಲಿನ ವೇಳೆ ಅರಳಿದ ಕಾಫಿ ಹೂವು

ಅಕಾಲಿಕ ಮಳೆಯ ಪರಿಣಾಮ: ರೈತರಿಗೆ ನಷ್ಟದ ಭೀತಿ
ಜಿ. ಚಂದ್ರಶೇಖರ್
Published 24 ಜನವರಿ 2024, 5:29 IST
Last Updated 24 ಜನವರಿ 2024, 5:29 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಇತ್ತೀಚೆಗೆ ಸುರಿದ ಆಕಾಲಿಕ ಮಳೆ, ಕಾಫಿ ಬೆಳೆಗಾರರ ಆರ್ಥಿಕ ಬುದುಕಿಗೆ ಬರೆ ಹಾಕಿದೆ. ಮಳೆಗೆ ಕಾಫಿ ಗಿಡಗಳು ಹೂವು ಬಿಟ್ಟಿದ್ದು, ಇಳುವರಿ ಮೇಲೆ ಹೊಡೆತ ಬಿದ್ದು ನಷ್ಟ ಉಂಟು ಮಾಡಿದೆ.

ಮಲೆನಾಡು ಹೋಬಳಿಯಾದ ಮಲ್ಲಿಪಟ್ಟಣ ಭಾಗದಲ್ಲಿ ಹೆಚ್ಚಾಗಿ ಬೆಳೆಗಾರರು ಕಾಫಿಯನ್ನೇ ಅವಲಂಬಿಸಿದ್ದಾರೆ. ಹೋಬಳಿ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಾಫಿ ಬೆಳೆಗೆ ಆಕಾಲಿಕ ಮಳೆ ಕಂಟಕವಾಗಿ ಪರಿಣಮಿಸಿದೆ.

ಮಳೆಯಿಂದಾಗಿ ಈಗಾಗಲೇ ಕಾಫಿ ಗಿಡಗಳಲ್ಲಿ ಹೂ ಕಾಣಿಸಿಕೊಂಡಿದೆ. ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕಾಫಿ ಹಣ್ಣುಗಳ ಕಟಾವು ಕಾರ್ಯ ನಡೆಯುತ್ತದೆ. ಮುಂಗಾರುಪೂರ್ವ ಮಳೆಗೆ ಗಿಡಗಳಲ್ಲಿ ಮಾರ್ಚ್‌ ಇಲ್ಲವೇ ಏಪ್ರಿಲ್ ತಿಂಗಳಿನಲ್ಲಿ ಹೂ ಬಿಡಬೇಕು. ಆದರೆ ಈ ಬಾರಿ ಬಿದ್ದ ಆಕಾಲಿಕ ಮಳೆಗೆ ಗಿಡಗಳಲ್ಲಿ ಜನವರಿ ತಿಂಗಳಲ್ಲೇ ಹೂ ಬಿಟ್ಟಿವೆ. ಬೆಳೆಗಾರರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಹಣ್ಣು ಕಟಾವು ಮಾಡುವ ವೇಳೆ ಗಿಡಗಳಲ್ಲಿ ಬಿಟ್ಟಿರುವ ಹೂವುಗಳು ನೆಲಕ್ಕೆ ಉದುರುತ್ತಿವೆ ಎಂದು ಬೆಳೆಗಾರರು ಅವಲತ್ತುಕೊಂಡಿದ್ದಾರೆ.

ಕಾಫಿ ಬೆಳೆ ಎರಡು ವರ್ಷಗಳಿಗೊಮ್ಮೆ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ. ಈ ಬಾರಿ ಇಳುವರಿ ಸಾಧಾರಣವಾಗಿದೆ. ಮುಂದಿನ ವರ್ಷ ಅಧಿಕ ಇಳುವರಿ ಸಿಗಬೇಕಿತ್ತು. ದುರದೃಷ್ಟವಶಾತ್ ಅಕಾಲಿಕ ಮಳೆಯಿಂದಾಗಿ ಈಗಾಗಲೇ ಗಿಡಗಳಲ್ಲಿ ಬೆಳೆದಿದ್ದ ಹೂವುಗಳು ಉದುರುತ್ತಿದ್ದು, ಕೆಲವು ಕಡೆ ಬಾಡಿ ಹೋಗುತ್ತಿವೆ. ಪರಿಣಾಮವಾಗಿ ಶೇ 50ರಷ್ಟು ಕಾಫಿ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ ಎನ್ನುತ್ತಾರೆ ಬೆಳೆಗಾರ ಎಂ.ಆರ್. ರಂಗಸ್ವಾಮಿ.

ಈ ಬಾರಿ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಬಂದಿದೆ. 50 ಕೆ.ಜಿ. ತೂಕದ ರೋಬಸ್ಟ್‌ವಹಾಗೂ ಅರೇಬಿಕಾ ಕಾಫಿ ಬೀಜ ಗರಿಷ್ಠ ದರ ₹ 11ಸಾವಿರದಿಂದ ₹ 14 ಸಾವಿರ ಗಡಿ ತಲುಪಿದೆ. ಕಾಳು ಬಿಡಿಸದ ಕಾಫಿ ದರ ₹ 7 ಸಾವಿರದಿಂದ ₹ 9 ಸಾವಿರಕ್ಕೆ ಮಾರಾಟವಾಗುತ್ತಿದೆ. ಅಕಾಲಿಕ ಮಳೆ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮಾರುಕಟ್ಟೆಯ ಲಾಭ ಬೆಳೆಗಾರರಿಗೆ ದಕ್ಕದಾಗಿದೆ. ಕಾಫಿ ಬೆಳೆಯಿಂದ ಉತ್ತಮ ಆದಾಯ ಕಂಡುಕೊಳ್ಳಬೇಕು ಎನ್ನುವ ಆಸೆಗೆ ಆಕಾಲಿಕ ಮಳೆ ತಣ್ಣೀರೆರಚಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

- ‘ನಷ್ಟ ಪರಿಹಾರ ಒದಗಿಸಿ’

ಕಾಫಿ ಬೆಳೆಗಾರರು ಒಂದಿಲ್ಲೊಂದು ಸಮಸ್ಯೆ ಎದುರಿಸಿಯೇ ಬದುಕುವಂತಾಗಿದೆ. ಇದೀಗ ಅಕಾಲಿಕವಾಗಿ ಸುರಿದ ಮಳೆಯಿಂದ ಮುಂದಿನ ವರ್ಷದ ಕಾಫಿ ಬೆಳೆ ಸಂಪೂರ್ಣ ನೆಲಕಚ್ಚುವ ಆತಂಕ ಎದುರಾಗಿದೆ ಎಂದು ಮದಲಾಪುರದ ಬೆಳೆಗಾರ ಎಂ.ಆರ್. ರಂಗಸ್ವಾಮಿ ಹೇಳುತ್ತಾರೆ. ಗಿಡಗಳಲ್ಲಿ ಹೂವು ಬಿಟ್ಟಿದ್ದು ಹಣ್ಣುಗಳನ್ನು ಕಟಾವು ಮಾಡುವಾಗ ನೆಲಕ್ಕೆ ಉದುರಿ ಮಣ್ಣು ಪಾಲಾಗುತ್ತಿವೆ. ಕೆಲವು ಕಡೆ ಹೂವುಗಳು ಒಣಗಿ ಹೋಗುತ್ತಿದೆ. ಆಕಾಲಿಕ ಮಳೆ ಪರಿಣಾಮ ಇಳುವರಿ ಕುಂಠಿತವಾಗಲಿದೆ. ಆಕಾಲಿಕ ಮಳೆಯಿಂದ ಉಂಟಾದ ಬೆಳೆ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT