ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ಶಿಲ್ಪಕಲೆ ವೀಕ್ಷಣೆಗೆ ಬಿಸಿಲು ಅಡ್ಡಿ

ಬಿಸಿಲಿನ ತಾಪಕ್ಕೆ ಕಾಯ್ದು ಕೆಂಡವಾದ ಹೊಯ್ಸಳ ಸ್ಮಾರಕದ ಕಲ್ಲುಹಾಸು
ಎಚ್.ಎಸ್. ಅನಿಲ್ ಕುಮಾರ್
Published 8 ಮೇ 2024, 6:24 IST
Last Updated 8 ಮೇ 2024, 6:24 IST
ಅಕ್ಷರ ಗಾತ್ರ

ಹಳೇಬೀಡು: ಇಲ್ಲಿನ ಹೊಯ್ಸಳೇಶ್ವರ ದೇವಾಲಯದ ನಕ್ಷತ್ರಾಕಾರದ ಜಗುಲಿ ಹಾಗೂ ಜೈನ ಬಸದಿ ಆವರಣದ ಕಲ್ಲಿನ ನೆಲಹಾಸು ಬಿಸಿಲಿನ ಪ್ರಖರತೆಗೆ ಕಾಲಿಡಲು ಸಾಧ್ಯವಾಗದಂತೆ ಕಾಯುತ್ತಿದೆ. ಪ್ರವಾಸಿಗರ ನೆತ್ತಿ ಹಾಗೂ ಕಾಲು ಸುಡುತ್ತಿದೆ. ಕಲೆಯ ವೈಭವ ವೀಕ್ಷಣೆ ಬದಲು ಸುಡುವ ಕಲ್ಲುಗಳಿಂದ ರಕ್ಷಣೆ ಪಡೆಯುವುದು ಹೇಗೆ ಎನ್ನುವ ಚಿಂತೆ ಪ್ರವಾಸಿಗರನ್ನು ಕಾಡುತ್ತಿದೆ.

ಎರಡೂ ಸ್ಥಳದಲ್ಲಿ ಕಾಲಿಟ್ಟರೆ ಕಾಲು ಸುಡುತ್ತದೆ. ಹೆಚ್ಚಿನ ಸಮಯ ಓಡಾಡಿದರೆ ಚರ್ಮ ಕಿತ್ತು ಬಂದು ಗಾಯವಾಗುವುದು ಖಚಿತ. ಹೀಗಾಗಿ ಪ್ರವಾಸಿಗರು ಅವಸರದಲ್ಲೇ ವೀಕ್ಷಿಸಿ ನಿರ್ಗಮಿಸುತ್ತಿದ್ದಾರೆ.

ಎರಡೂ ದೇವಾಲಯಗಳಲ್ಲಿಯೂ ಸಮರ್ಪಕವಾಗಿ ಕಾರ್ಪೆಟ್ ಇಲ್ಲ. ಹಳೆಯ ಕಾರ್ಪೆಟ್ ಹರಿದು ಚಿಂದಿಯಾಗಿದೆ. ಒಂದೆರೆಡು ಕಡೆ ಇರುವ ಕಾರ್ಪೆಟ್, ಬಿಸಿಲಿನ ತಾಪಕ್ಕೆ ಪುಡಿಯಾಗುತ್ತಿದೆ. ಹರಿದ ಕಾರ್ಪೆಟ್ ಮೇಲೆ ಓಡಾಡುವಾಗ ಎಡವಿ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಹೊಯ್ಸಳೇಶ್ವರ ದೇವಾಲಯದಲ್ಲಿ ಪ್ರವಾಸಿಗರು ದೇವಾಲಯ ಒಳಭಾಗಕ್ಕಿಂತಲೂ ಗೋಡೆಯ ಮೇಲಿನ ಪುರಾಣ ಪುಣ್ಯ ಕಥೆಗಳ ಶಿಲ್ಪಕಲೆಯನ್ನು ವೀಕ್ಷಿಸುತ್ತಾರೆ. ದೇವಾಲಯದ ನಕ್ಷತ್ರಾಕರಾದ ಜಗುಲಿಯ ಮೇಲೆ ಪ್ರವಾಸಿಗರು ಹೆಚ್ಚು ಸಮಯ ಓಡಾಡುತ್ತಾರೆ. ಆದರೆ ಬಿಸಿಲು ಅವರ ಉತ್ಸಾಹವನ್ನು ಬತ್ತಿಸಿದೆ.

‘ಜೈನ ಬಸದಿಯಲ್ಲಿ ಹೊರಗಡೆ ವೀಕ್ಷಣೆಗೆ ಹೆಚ್ಚಿನ ಆಕರ್ಷಣೆ ಇಲ್ಲ. ಮೂರು ಬಸದಿಯ ಒಳಗಿನ ಕಂಬಗಳು ಹಾಗೂ ತೀರ್ಥಂಕರ ಮೂರ್ತಿ ವೀಕ್ಷಣೆಗೆ ಹೋಗಲು ಕಲ್ಲುಹಾಸಿನ ಮೇಲೆ ನಡೆಯಬೇಕು. ಪ್ರವಾಸಿಗರು ನಡೆದಾಡುವ ಸ್ಥಳದಲ್ಲಿ ಕಾರ್ಪೆಟ್ ವ್ಯವಸ್ಥೆ ಇಲ್ಲದೇ ತೊಂದರೆಯಾಗಿದೆ. ದೇವಾಲಯ ಒಳಪ್ರವೇಶಿಸದೇ ಪ್ರವಾಸಿಗರು ಹಿಂದಿರುಗುತ್ತಿದ್ದಾರೆ’ ಎನ್ನುತ್ತಾರೆ ಬಸ್ತಿಹಳ್ಳಿ ನಿವಾಸಿ ಧರ್ಮಣ್ಣ.

ಹಳೇಬೀಡಿನ ಬಸ್ತಿಹಳ್ಳಿಯ ಜೈನ ಬಸದಿಯಲ್ಲಿ ಹಾಕಿರುವ ಕಾರ್ಪೆಟ್ ಹಳೆಯದಾಗಿದ್ದು ಬಿಸಿಲಿನ ಶಾಖಕ್ಕೆ ಹರಿದು ಚಿಂದಿಯಾಗುತ್ತಿದೆ.
ಹಳೇಬೀಡಿನ ಬಸ್ತಿಹಳ್ಳಿಯ ಜೈನ ಬಸದಿಯಲ್ಲಿ ಹಾಕಿರುವ ಕಾರ್ಪೆಟ್ ಹಳೆಯದಾಗಿದ್ದು ಬಿಸಿಲಿನ ಶಾಖಕ್ಕೆ ಹರಿದು ಚಿಂದಿಯಾಗುತ್ತಿದೆ.

ಹೆಚ್ಚು ಸಮಯ ಕಲ್ಲುಹಾಸಿನ ಮೇಲೆ ಓಡಾಡಿದರೆ ಚರ್ಮ ಮೇಲೆ ಬೊಬ್ಬೆ ಹರಿದು ಚಿಂದಿಯಾದ ಹಳೆಯ ಕಾರ್ಪೆಟ್‌ಗಳು ಬಿಸಿಲಿನಿಂದಾಗಿ ಶಿಲ್ಪಕಲೆ ವೀಕ್ಷಿಸದೇ ವಾಪಸಾಗುವ ಪ್ರವಾಸಿಗರು

ಹೊಸ ಕಾರ್ಪೆಟ್‌ಗಳನ್ನು 2-3 ವರ್ಷಕ್ಕೊಮ್ಮೆ ಕೇಂದ್ರ ಪುರಾತತ್ವ ಇಲಾಖೆ ಪೂರೈಕೆ ಮಾಡುತ್ತದೆ. ಲಕ್ಷಾಂತರ ಮಂದಿ ಪ್ರವಾಸಿಗರು ಓಡಾಡುವುದರಿಂದ ಕಾರ್ಪೆಟ್ ತಡೆಯುತ್ತಿಲ್ಲ.

-ಪ್ರವಾಸಿಗರ ಅನುಕೂಲ ಮಾಡಿಕೊಡಿ ಜಗದೀಶ ಹಳೇಬೀಡಿನ ರೈತ

ಕಾರ್ಪೆಟ್‌ಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ ಬೇಲೂರು ಹಳೇಬೀಡು ಶ್ರವಣಬೆಳಗೂಳ ಸ್ಮಾರಕ ಸ್ಥಳಗಳಿಗೆ ಕಾರ್ಪೆಟ್ ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದೇವೆ. ಹಣ ಬಿಡುಗಡೆಗೆ ಕಾಯುತ್ತಿದ್ದೇವೆ.

-ಗೌತಮ್ ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ

ಜೂನ್ ನಂತರ ಮಳೆ ಆರಂಭವಾದರೆ ಕಾರ್ಪೆಟ್ ಅಗತ್ಯವಿಲ್ಲ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಹಾನಿರ್ದೇಶಕರ ಕಚೇರಿಗೆ ಮನವರಿಕೆ ಮಾಡಿ ಶೀಘ್ರ ಕಾರ್ಪೆಟ್ ವ್ಯವಸ್ಥೆ ಮಾಡಬೇಕು.

-ಎಚ್.ಎಲ್.ಮೋಹನ್ ಬಿಜೆಪಿ ಮುಖಂಡ ಹಳೇಬೀಡು

ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಬಂದಾಗಲೆ ಪ್ರವಾಸ ಮಾಡಬೇಕಾಗುತ್ತದೆ. ಹಳೇಬೀಡು ಬೇಲೂರು ದೇವಾಲಯಗಳು ಈಗ ವಿಶ್ವ ಮನ್ನಡೆ ಪಡೆದಿವೆ. ಹೀಗಾಗಿ ಸೌಲಭ್ಯಗಳು ಹರಿದು ಬರಬೇಕು.

-ಎನ್.ಡಿ.ಮಾನಸ ಮೈಸೂರಿನ ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT