ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ | ಬರದ ಹೊಡೆತಕ್ಕೆ ಬರಿದಾದ ರಾಗಿ ಕಣಜ

ಪೂಜಾರು ರಮೇಶ್
Published 8 ನವೆಂಬರ್ 2023, 5:01 IST
Last Updated 8 ನವೆಂಬರ್ 2023, 5:01 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನಲ್ಲಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ, ಈ ವರ್ಷ ಸಕಾಲಕ್ಕೆ ಮಳೆ ಬಾರದೇ ಬರದ ಹೊಡೆತ ಎದುರಿಸುವಂತಾಗಿದೆ. ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದ್ದು, ಜಾನುವಾರುಗಳ ಮೇವುಗೂ ತೊಂದರೆ ಎದುರಿಸಬೇಕಾಗಿದೆ.

ತಾಲ್ಲೂಕಿನಲ್ಲಿ ಜನವರಿಯಿಂದ ಅಕ್ಟೋಬರ್‌ವರೆಗೆ ವಾಡಿಕೆಯ ಪ್ರಕಾರ 53.6 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ 45.3 ಸೆಂ.ಮೀ ಮಳೆಯಾಗಿದ್ದು, ಶೇ 20 ರಷ್ಟು ಕೊರತೆಯಾಗಿದೆ ಜೂನ್, ಅಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆ ಸಂಪೂರ್ಣ ಕೊರತೆಯಾಗಿದ್ದು, ಬೆಳೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಪ್ರಮುಖ ಬೆಳೆಗಳಾದ ರಾಗಿ, ಜೋಳ, ಅವರೆ, ಹುರುಳಿ, ಸಾವೆ, ತೊಗರಿ ಸೇರಿ 59,292 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಕಸಬಾ ಹೋಬಳಿಯ 9,500 ಹೆಕ್ಟೇರ್‌, ಬಾಣಾವರ ಹೋಬಳಿಯ 6,572 ಹೆಕ್ಟೇರ್‌, ಗಂಡಸಿ ಹೋಬಳಿಯ 8,610 ಹೆಕ್ಟೇರ್‌, ಜಾವಗಲ್ ಹೋಬಳಿಯ 8,200 ಹಾಗೂ ಕಣಕಟ್ಟೆ ಹೋಬಳಿಯ 8,100 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ವಾಡಿಕೆಯಂತೆ ಮಳೆ ಆಗಿದ್ದರೆ, ರೈತರು ಉತ್ತಮ ಆದಾಯ ಪಡೆಯಬಹುದಾಗಿತ್ತು. ಆದರೆ, ಮಳೆಯೇ ಇಲ್ಲದೇ ಬಹುತೇಕ ಬೆಳೆಗಳು ಒಣಗಲಾರಂಭಿಸಿವೆ. ಇದರಿಂದಾಗಿ ಫಸಲು ಕೈಗೆ ಸಿಗದಂತಾಗಿದ್ದು, ರೈತರು ವರ್ಷವಿಡೀ ಆದಾಯವಿಲ್ಲದೇ ನಷ್ಟದಲ್ಲಿ ಜೀವನ ನಡೆಸುವುದು ಅನಿವಾರ್ಯವಾಗಿದೆ.

ತಾಲ್ಲೂಕಿನಲ್ಲಿ ರಾಗಿ 38,651 ಹೆಕ್ಟೇರ್, ಮುಸುಕಿನ ಜೋಳ 5,068 ಹೆಕ್ಟೇರ್, ಅವರೆ 115 ಹೆಕ್ಟೇರ್, ಹುರುಳಿ 85 ಹೆಕ್ಟೇರ್, ತೊಗರಿ 65 ಹೆಕ್ಟೇರ್, ಸಾವೆ 50 ಹೆಕ್ಟೇರ್ ಸೇರಿದಂತೆ ಒಟ್ಟು 44,034 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆಯ ಸಮೀಕ್ಷೆ ಹೇಳುತ್ತಿದೆ.

ಕಳೆದ ವರ್ಷ ಸುರಿದ ಮಳೆಯಲ್ಲಿ ತುಂಬಿದ ಕೆರೆಕಟ್ಟೆಗಳು, ಈ ಬಾರಿ ಮಳೆ ಕೊರತೆಯಿಂದಾಗಿ ಹಂತ ಹಂತವಾಗಿ ಖಾಲಿ ಆಗತೊಡಗಿವೆ. ಅಂತರ್ಜಲ ಪಾತಾಳಕ್ಕೆ ಕುಸಿಯುವ ಆತಂಕ ಎದುರಾಗಿದೆ. ಮಳೆರಾಯ ಕೃಪೆ ತೋರದಿದ್ದರೆ, ಮುಂದಿನ ದಿನಗಳಲ್ಲಿ ರೈತಾಪಿ ಜನ ಕೃಷಿ ಮಾಡಲು ಯೋಚನೆ ಮಾಡುವಂತಹ ಪರಿಸ್ಥಿತಿ ತಲೆದೋರುತ್ತದೆ ಎಂದು ರೈತರು ಹೇಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ವಾರ್ಷಿಕ ಪ್ರಮುಖ ಬೆಳೆಯಾದ ತೆಂಗಿನ ಮೇಲೂ ಪರಿಣಾಮ ಬೀರಿದೆ. ಹಲವು ರೋಗಗಳಿಗೆ ತೆಂಗಿನ ಗಿಡಗಳು ತುತ್ತಾಗುತ್ತಿದ್ದು, ಈ ವರ್ಷ ರೈತನ ಬದುಕು ಚಿಂತಾಜನಕವಾಗಿದೆ.

ರಾಜ್ಯ ಸರ್ಕಾರ ಅರಸೀಕೆರೆ ತಾಲ್ಲೂಕನ್ನು ತೀವ್ರ ಬರಪೀಡಿತ ಪಟ್ಟಿಯಲ್ಲಿ ಸೇರಿಸಿದೆ. ಆದರೆ, ಇದುವರೆಗೆ ಸರ್ಕಾರದಿಂದ ಬರ ಪರಿಹಾರ ಕಾಮಗಾರಿ, ಬೆಳೆ ನಷ್ಟ ಪರಿಹಾರ ಸಿಗದೇ ಇರುವುದು ರೈತರನ್ನು ಕಂಗೆಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಸ್ತವ ಸ್ಥಿತಿ ತಿಳಿಸಿ ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ವಿಮೆ ಮಾಡಿಸಿರುವ ರೈತರಿಗೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಬರ ಪರಿಹಾರ ನೀಡಲಿದೆ.
ಕೆ.ಎಂ. ಶಿವಲಿಂಗೇಗೌಡ, ಶಾಸಕ
ಶೇ 20 ರಷ್ಟು ಮುಂಗಾರು ಮಳೆ ಮಳೆಯ ಕೊರತೆಯಿಂದ ಶೇ 73 ರಷ್ಟು ಬೆಳೆ ನಷ್ಟವಾಗಿದೆ. ತಾಲ್ಲೂಕಿನ 30990 ರೈತರು ಬೆಳೆ ವಿಮೆ ಮಾಡಿಸಿದ್ದಾರೆ.
ಎ.ಪಿ. ಶಿವಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಮಳೆ ಅಭಾವದಿಂದ ಬೆಳೆ ಇಲ್ಲದೇ ರೈತರು ಮಾಡಿದ ಸಾಲ ತೀರಿಸಲಾಗುತ್ತಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳು ಅಧ್ಯಯನದಲ್ಲೇ ಕಾಲಹರಣ ಮಾಡದೇ ರೈತರ ಬೆಳೆ ಪರಿಹಾರ ನಷ್ಟ ನೀಡಬೇಕು.
ಕನಕೆಂಚೆನಳ್ಳಿ ಪ್ರಸನ್ನಕುಮಾರ್, ರಾಜ್ಯ ರೈತ ಸಂಘದ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT