ಶನಿವಾರ, ಜೂನ್ 25, 2022
21 °C
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್ ಬೇಸರ

ಎಲ್ಲರಿಗೂ ಸಿಗದ ಸಮಾನ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ದೇಶಕ್ಕೆ ಸ್ವಾತಂತ್ರ್ಯ ದೊರೆತು 73 ವರ್ಷ ಕಳೆದರೂ ಇಂದಿಗೂ ಶಿಕ್ಷಣದ ವ್ಯಾಪಾರೀಕರಣ, ಖಾಸಗೀಕರಣ ವಿದ್ಯಾರ್ಥಿ ಸಮೂಹವನ್ನು ಕಾಡುತ್ತಿದ್ದು, ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತಾಗಿದೆ ಎಂದು ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್ ಹೇಳಿದರು.

ನಗರದ ಲಯನ್ಸ್‌ ಕ್ಲಬ್‌ನಲ್ಲಿ ಎಐಡಿಎಸ್‌ಒ ಸಂಘಟನೆ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಶಯದಂತೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗುತ್ತಿಲ್ಲ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿ ರೂಪ ಹಾಸನ ಮಾತನಾಡಿ, ರೈತರ ಹೋರಾಟ ಇಡೀ ದೇಶದ ಹೋರಾಟಗಳಿಗೆ ಮಾದರಿಯಾಗಿದೆ. ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ರಂತಹ ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಎಲ್ಲರಿಗೂ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣವನ್ನು
ಖಾತ್ರಿಗೊಳಿಸಬೇಕು. ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು ಎಂಬ ಘೋಷಣೆಯೊಂದಿಗೆ ಹೋರಾಡಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಮಂಡಿಸಲಾಯಿತು. ಸರ್ಕಾರ ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ಸೌಲಭ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲ್ಪಿಸಬೇಕು, ರಾಷ್ಟ್ರೀಯ ಶಿಕ್ಷಣ ನೀತಿ 2020 ಕಾಯ್ದೆ ಕೂಡಲೇ ಹಿಂಪಡೆಯಬೇಕು, ಸರ್ಕಾರಿ ಶಾಲಾ, ಕಾಲೇಜು ಉಳಿಸಬೇಕು, ಹೊಸ ಸರ್ಕಾರಿ ಕಾಲೇಜುಗಳಿಗೆ ಉಪನ್ಯಾಸಕರ ನೇಮಿಸಬೇಕು, ಮೂಲಭೂತ ಸೌಕರ್ಯ ಒದಗಿಸಬೇಕು, ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸಬೇಕು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು.

ಎಡಿಎಸ್‌ಒನ ಸಿತಾರ ಸುಭಾಷ್, ವಿ.ಎನ್‌. ರಾಜಶೇಖರ್ ಅವರು ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನೂತನ ಜಿಲ್ಲಾ ಸಮಿತಿ ರಚಿಸಲಾಯಿತು. ಸಂಚಾಲಕಿಯಾಗಿ ಅಂಕಿತ, ಸಹ ಸಂಚಾಲಕರಾಗಿ ಚೈತ್ರ, ಹರ್ಷ, ರವಿ, ದೇವರಾಜ್, ಆಲಂ
ಆಯ್ಕೆಯಾದರು. 40 ವಿದ್ಯಾರ್ಥಿಗಳ ಸಮಿತಿ ರಚಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು