ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳ ಬಿತ್ತಲು ಹೋದವರು ಮಸಣ ಸೇರಿದರು..!

ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಮುಳುಗಿದ ಬದುಕು
Last Updated 1 ಜೂನ್ 2019, 20:42 IST
ಅಕ್ಷರ ಗಾತ್ರ

ಹೊಳೆನರಸೀಪುರ: ವರ್ಷಧಾರೆಯಿಂದ ಸಂತಸಗೊಂಡ ರೈತ ಕುಟುಂಬವೊಂದು ಹೊಲದಲ್ಲಿ ಜೋಳ ಬಿತ್ತಲು ಎತ್ತಿನ ಗಾಡಿಯಲ್ಲಿ ಶನಿವಾರ ತೆರಳುತ್ತಿದ್ದಾಗ; ತಾಲ್ಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದ ಕೆರೆಯಂಗಳದಲ್ಲಿನ ದೊಡ್ಡ ಗುಂಡಿಯೊಂದಕ್ಕೆ ಉರುಳಿ ಬಿದ್ದು ಜಲ ಸಮಾಧಿಯಾಗಿದೆ.

ಜೋಳ ಬಿತ್ತನೆಯನ್ನು ಕಣ್ತುಂಬಿಕೊಳ್ಳಲು ಹಠ ಮಾಡಿ ತಾತನ ಗಾಡಿಯೇರಿದ ಮೈಸೂರಿನ ಮೊಮ್ಮಕ್ಕಳಿಬ್ಬರೂ; ಜಲ ಸಮಾಧಿಯಾಗಿದ್ದು, ಕುಟುಂಬ ವರ್ಗ, ಸಂಬಂಧಿಕರ ಆಕ್ರಂದನ ಉದ್ದೂರು ಹೊಸಹಳ್ಳಿಯಲ್ಲಿ ಮುಗಿಲು ಮುಟ್ಟಿತ್ತು.

ತಾಲ್ಲೂಕಿನ ಉದ್ದೂರು ಹೊಸಹಳ್ಳಿಯ ರೈತ ರಾಜೇಗೌಡ (65), ತಮ್ಮ ಪತ್ನಿ ಶಾರದಮ್ಮ (55) ಜತೆ ಜೋಳ ಬಿತ್ತಲು ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೊರಟ್ಟಿದ್ದರು. ಇದೇ ಸಂದರ್ಭ ಬೇಸಿಗೆ ರಜೆ ಕಳೆಯಲಿಕ್ಕಾಗಿ ಮೈಸೂರಿನಿಂದ ಊರಿಗೆ ಬಂದಿದ್ದ ರಾಜೇಗೌಡರ ಅಣ್ಣನ ಮೊಮ್ಮಕ್ಕಳಾದ ರುಚಿತಾ (7), ದ್ವಿತಿತಾ (4) ಸಹ ಹಠ ಮಾಡಿ ಎತ್ತಿನ ಗಾಡಿ ಏರಿದ್ದರು.

ಹೊಲಕ್ಕೆ ಸಮೀಪದ ದಾರಿ ಎಂದು ರಾಜೇಗೌಡ ಕೆರೆಯಂಗಳದೊಳಗೆ ಎತ್ತಿನ ಗಾಡಿ ಹೊಡೆದುಕೊಂಡು ಹೋಗುತ್ತಿದ್ದರು. ಗಾಡಿ ಜಾಡಿನಲ್ಲಿ ಸಾಗುತ್ತಿದ್ದ ಸಂದರ್ಭ, ಈಚೆಗೆ ಸುರಿದ ಮಳೆಯಿಂದ ನೀರು ತುಂಬಿದ ಬೃಹತ್ ಹೊಂಡದೊಳಗೆ ಗಾಡಿ ಉರುಳಿಬಿದ್ದಿದೆ. ನಾಲ್ವರು ಗಾಡಿಯ ಕೆಳಗೆ ಸಿಲುಕಿಕೊಂಡು, ಜಲ ಸಮಾಧಿಯಾಗಿದ್ದಾರೆ.

ಬದುಕಿಗಾಗಿ ಇಳಿ ವಯಸ್ಸಿನಲ್ಲೂ ಜೋಳ ಬಿತ್ತಲು ಹೊಲಕ್ಕೆ ತೆರಳುವಾಗ ದುರಂತ ನಡೆದಿದ್ದಕ್ಕೆ ಗ್ರಾಮಸ್ಥರು ಕಂಬನಿ ಮಿಡಿದರು. ಮಕ್ಕಳ ಸಾವಿಗೂ ಊರವರು ಸೇರಿದಂತೆ, ಆಜುಬಾಜಿನ ಗ್ರಾಮಸ್ಥರು ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT