ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಫಲ– ಪುಷ್ಪ ಪ್ರದರ್ಶನ: ಅರ್ಜುನನಿಗೆ ಪುಷ್ಪ ನಮನ

Published 25 ಜನವರಿ 2024, 14:22 IST
Last Updated 25 ಜನವರಿ 2024, 14:22 IST
ಅಕ್ಷರ ಗಾತ್ರ

ಹಾಸನ: ಗಣರಾಜ್ಯೋತ್ಸವದ ಅಂಗವಾಗಿ ನಗರದ ಬಿ.ಎಂ. ರಸ್ತೆ ಪಕ್ಕದಲ್ಲಿರುವ ಸಿಲ್ವರ್ ಜುಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ಜ.26 ರಿಂದ ಮೂರು ದಿನಗಳ ಕಾಲ ಫಲ– ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಮಂಗಳಾ ತಿಳಿಸಿದರು.

ನಗರದ ಸಿಲ್ವರ್ ಜುಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಜನವರಿ 26ರಂದು ಫಲಪುಷ್ಪ ಪ್ರದರ್ಶನ ಉದ್ಘಾಟನೆ ಹಾಗೂ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಅವರ ಪುತ್ಥಳಿ ಅನಾವರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನೆರವೇರಿಸಲಿದ್ದಾರೆ, ಸ್ಥಳೀಯ ಶಾಸಕ ಸ್ವರೂಪ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

8 ಬಾರಿ ಮೈಸೂರು ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತು ನಾಡಿನ ಕೀರ್ತಿ ಹೆಚ್ಚಿಸಿದ್ದ. ಪುಂಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಅರ್ಜುನ ಆನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆನೆಯ ಮಾದರಿಗೆ ವಿವಿಧ ಅಲಂಕಾರಿಕ ಪುಷ್ಪಗಳಿಂದ ಸಿಂಗರಿಸಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.

ವಿಶೇಷವಾಗಿ ಮಾನವನ ಸಾರಿಗೆ ವ್ಯವಸ್ಥೆಯೇ ಆಧುನಿಕತೆ ಅನ್ವೇಷಣೆಯನ್ನು ಪ್ರತಿಬಿಂಬಿಸುವ ಸೈಕಲ್, ಎತ್ತಿನ ಗಾಡಿ, ಬಸ್‌, ರೈಲು ಹಾಗೂ ವಿಮಾನದ ಮಾದರಿಗಳಿಗೆ ಪುಷ್ಪಗಳಿಂದ ಸಿಂಗರಿಸಿ ಪ್ರದರ್ಶಿಸಲಾಗುವುದು. ಏಷ್ಯನ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು, ಹೆಸರಾಂತ ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ಹರಿಹರ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಚಿತ್ರಗಳನ್ನು ವಿವಿಧ ಹಣ್ಣು ಮತ್ತು ತರಕಾರಿಗಳಲ್ಲಿ ಕೆತ್ತನೆ ಮಾಡಿರುವುದನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ತಿಳಿಸಿದರು.

ಸುಸ್ಥಿರ ವ್ಯವಸಾಯಕ್ಕೆ ಅನುಸರಿಸಬೇಕಾಗಿರುವ ಸಮಗ್ರ ಕೃಷಿ ಪದ್ಧತಿ ಮಾದರಿ, ಕೈತೋಟ, ತಾರಸಿ ತೋಟಗಳ ಪ್ರಾತ್ಯಕ್ಷಿಕೆಯೂ ಪ್ರದರ್ಶನದಲ್ಲಿ ಇರಲಿದೆ ಎಂದರು.

ವಿವಿಧ ಬಗೆಯ ಲಕ್ಷಾಂತರ ಹೂಗಳಿಂದ ಅಲಂಕೃತಗೊಂಡಿರುವ ನವಿಲು, ಪೆಂಗ್ವಿನ್ ಕುಟುಂಬ, ಬಣ್ಣದ ಚಿಟ್ಟೆ, ಹೃದಯ ಮಾದರಿ ಸೇರಿದಂತೆ ಇತರೆ ಮಾದರಿಗಳಿಗೆ ಪುಷ್ಪದಿಂದ ಅಲಂಕಾರ ಮಾಡಲಾಗುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯಲಿದೆ ಎಂದರು.

ರೈತರು ಬೆಳೆದ ಉತ್ತಮ ಗುಣಮಟ್ಟದ ತೋಟಗಾರಿಕಾ ಉತ್ಪನ್ನಗಳಿಗೆ ಸ್ಪರ್ಧೆ ಹಾಗೂ ಪ್ರದರ್ಶನ ಏರ್ಪಡಿಸಿದ್ದು, ವಿಜೇತರಿಗ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲು ಉದ್ದೇಶಿಸಲಾಗಿದೆ. ಸಾರ್ವಜನಿಕರಿಗೆ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಮನೆಯಂಗಳದಲ್ಲಿ ಅಲಂಕಾರಿಕ ತೋಟಗಳ ನಿರ್ವಹಣೆ, ಲಾನ್, ಗುಲಾಬಿ ತೋಟ ನಿರ್ವಹಣೆ, ಟೆರೆಸ್ ಗಾರ್ಡನಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಜನವರಿ 28 ರಂದು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ವಿವಿಧ ಇಲಾಖೆಗಳ, ಸಂಘ– ಸಂಸ್ಥೆಗಳ ಖಾಸಗಿ ಪ್ರದರ್ಶನ ಮಾರಾಟ ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಹರ್ಷಿಯ, ಸುಜಾತಾ, ಎಚ್‌.ಪಿ. ಮೋಹನ್, ಸುಪ್ರಜಾ ಉಪಸ್ಥಿತರಿದ್ದರು.

ಪ್ರದರ್ಶನದ ಅಂಗವಾಗಿ ಮೂರು ದಿನ ಸಂಜೆ 6 ರಿಂದ 8.30ರವರೆಗೆ ವಿವಿಧ ಕಲಾತಂಡಗಳು ಮತ್ತು ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
– ಮಂಗಳಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT