ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್‌ ವಸೂಲಿ: ಆಕ್ರೋಶ

Published 13 ಜೂನ್ 2024, 14:26 IST
Last Updated 13 ಜೂನ್ 2024, 14:26 IST
ಅಕ್ಷರ ಗಾತ್ರ

ಅರಸೀಕೆರೆ: ತುಮಕೂರಿನಿಂದ ಶಿವಮೊಗ್ಗದ ವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 206ರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಬಾಣಾವರ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಾತಿ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ತುಮಕೂರಿನಿಂದ ಶಿವಮೊಗ್ಗದ ವರೆಗೆ ಸುಮಾರು 200 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು, ತಾಂತ್ರಿಕ‌ ಅಡಚಣೆಯಿಂದಾಗಿ ಹಲವು ಕಡೆ ಕಾಮಗಾರಿ ಪೂರ್ಣವಾಗಿಲ್ಲ. ಹಲವು ಕಡೆ ಸೇತುವೆಗಳ ನಿರ್ಮಾಣ ಬಾಕಿ ಇವೆ ಎಂದು ಸ್ಥಳೀಯರು ದೂರಿದ್ದಾರೆ.

ಹೆದ್ದಾರಿಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಕೆಲವು ರೈತರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಕಡೆ ಅವೈಜ್ಞಾನಿಕವಾಗಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಿರುವ ಆರೋಪ ಸಹ ಇದೆ. ಹಳ್ಳಿಗಳನ್ನು ಸಂಪರ್ಕಿಸುವ ಮಾರ್ಗಕ್ಕೆ ಸರ್ವೀಸ್ ರಸ್ತೆಗಳಿಲ್ಲ ಎಂದು ಸ್ಥಳಿಯರು ಅನೇಕ ಪ್ರತಿಭಟನೆಗಳನ್ನು ಸಹ ಮಾಡಿದ್ದಾರೆ. ಟೋಲ್‌ ವಸೂಲಾತಿ ಬಗ್ಗೆ ಕೇಳಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆದೇಶ ಬಂದಿದೆ ಎಂದು ಸಿಬ್ಬಂದಿ ಆದೇಶದ ಪ್ರತಿ ತೋರಿಸುತ್ತಿದ್ದಾರೆ ಎಂದು ಮುಖಂಡ ದರ್ಶನ್ ದಾಸ್ ತಿಳಿಸಿದರು.

ಈ ಟೋಲ್‌ಗೇಟ್ ಸಿಬ್ಬಂದಿಗೆ ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ಪ್ರತಿನಿತ್ಯ ವಾಹನ ಚಾಲಕರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದೆ. ಕೆಲವೊಮ್ಮೆ ಇದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಕಾಮಗಾರಿ ಪೂರ್ಣಗೊಳಿಸದೆ ಯಾವುದೇ ಕಾರಣಕ್ಕೂ ಟೋಲ್ ವಸೂಲಿ ಮಾಡಬಾರದು, ಮಾಡಿದರೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT