ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆ: ಪ್ರವಾಸೋದ್ಯಮ ಏನು, ಎತ್ತ?

ಪ್ರವಾಸಿಗರ ಸೆಳೆಯಲು ಯಗಚಿ, ಜನಿವಾರ ಕೆರೆಯಲ್ಲಿ ಯೋಜನೆ
Last Updated 1 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹಾಸನ: ಜೋರು ಮಳೆಗೆ ಜಲಾಶಯಗಳು ಹಾಗೂ ಕೆರೆಕಟ್ಟೆ ಮೈದುಂಬಿಕೊಂಡು ನಳನಳಿಸುತ್ತಿವೆ. ಹೀಗೆ ಸಂಗ್ರಹವಾಗಿರುವ ಜಲಾಶಯಗಳ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆ ಆಯೋಜಿಸುವ ಮೂಲಕಕ್ರೀಡಾಪಟುಗಳು, ಪ್ರವಾಸಿಗರು, ಸಾಹಸ ಪ್ರಿಯರನ್ನು ಸೆಳೆಯಲಾಗುತ್ತಿದೆ.

ಶ್ರವಣಬೆಳಗೊಳದ ಜನಿವಾರ ಕೆರೆ ಹಾಗೂ ಬೇಲೂರಿನ ತಾಲ್ಲೂಕಿನ ಯಗಚಿ ಹಿನ್ನೀರಿನ ನಾನಾ ರೀತಿಯ ಸಾಹಸ ಕ್ರೀಡೆಯಲ್ಲಿ ಮಕ್ಕಳು,ಮಹಿಳೆಯರು ಹಾಗೂ ಪ್ರವಾಸಿಗರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.‌

ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ಕ್ಯಾಪ್ಚರ್ ಮೂಮೆಂಟ್ ಸಂಸ್ಥೆ ಚಿಕ್ಕಮಗಳೂರು ರಸ್ತೆಯಲ್ಲಿರುವ ಯಗಚಿ ಜಲಾಶಯದ ಹಿನ್ನೀರಿನಲ್ಲಿ ಆರಂಭಿಸಿರುವ ಕೇಂದ್ರದಲ್ಲಿ ಸಾಹಸಮಯಆಟಗಳು ಎಲ್ಲರನ್ನು ಸೆಳೆಯುತ್ತಿದೆ. ಜಲಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಸುರಕ್ಷತೆಗಾಗಿ ಸುರಕ್ಷ ಕವಚ (ಲೈಫ್‌ ಜಾಕೆಟ್‌) ಹಾಕಲಾಗುತ್ತದೆ. ಇಲ್ಲಿನ ಕೇಂದ್ರಗಳಲ್ಲಿ ಸಾಹಸ ಕ್ರೀಡೆಯ ದುಬಾರಿ ವೆಚ್ಚದ ಉಪಕರಣಗಳೂ ಇವೆ.

ನೀರನ್ನು ಸೀಳಿಕೊಂಡು ಅಬ್ಬರಿಸುತ್ತಾ ಮುನ್ನುಗ್ಗುವ ಜೆಟ್‌ಸ್ಕೀ ರೈಡ್‌, ಮೈನವಿರೇಳಿಸುವ ರಾಫ್ಟಿಂಗ್‌,ದೇಹ ಒದ್ದೆಯಾಗಿಸುವ ಬನಾನ ರೈಡ್‌, ರೋಚಕತೆ ತುಂಬುವ ಸ್ಪೀಡ್‌ ಬೋಟ್‌, ಮೈಜುಮ್ಮೆನಿಸುವಕಯಾಕಿಂಗ್‌ ನಲ್ಲಿ ಆಟವಾಡಬಹುದು.

ವಾಟರ್ ಬೈಕ್, ಬನಾನ ಬೋಟ್, ಸ್ಪೀಡ್ ಬೋಟ್ ನಲ್ಲಿ ಸಾಗುತ್ತಿದ್ದರೆ ರೋಮಾಂಚನದ ಅನುಭವ ನೀಡುತ್ತದೆ. ಜೆಟ್‌ ಸ್ಕೀ ಓಡಿಸಲು ಮಾರ್ಗದರ್ಶಕರು ಇದ್ದಾರೆ. ಸ್ಪೀಡ್‌ ಬೋಟ್‌ ಹಾಗೂ ಬನಾನರೈಡ್‌ನಲ್ಲಿ ಆರು ಮಂದಿ ಕುಳಿತು ಪ್ರಯಾಣಿಸಬಹುದು. ವಿವಿಧ ರೀತಿಯ ಬೋಟಿಂಗ್‌ಗಳಿಗೆ ₹100ರಿಂದ ₹500 ದರವಿದೆ.

ಜನಿವಾರ ಕೆರೆಯಲ್ಲಿ 355 ಎಕರೆ ಪ್ರದೇಶವನ್ನು ಕ್ರೀಡಾ ಚಟುವಟಿಕೆಗೆ ಬಳಸಿಕೊಳ್ಳಲಾಗಿದೆ. ಸ್ಪೀಡ್ಬೋಟ್ ನಲ್ಲಿ ನೀರಾಟ, ವಾಟರ್ ಜೆಟ್ ಬೈಕ್ ನಲ್ಲಿ ಶರವೇಗದಲ್ಲಿ ಸಾಗುವ ಎದೆ ನಡುಗಿಸುವ ಆಟ,ವೇಗವಾಗಿ ಸುಳಿದಾಡುತ್ತ ನೀರಿನಲ್ಲಿ ಸಾಹಸದಾಟ ರೋಚಕವಾಗಿದೆ.

‘ಜಲಕ್ರೀಡೆ ರೋಚಕ ಅನುಭವದ ಜತೆಗೆ ಖುಷಿನೀಡಿತು. ಲೈಫ್‌ ಜಾಕೆಟ್‌ ಧರಿಸಿದ ಕಾರಣ ಭಯವಾಗಲಿಲ್ಲ. ಸಮುದ್ರದ ಬೋಟಿಂಗ್‌ಗಿಂತ ಹಿನ್ನೀರಿನ ಬೋಟಿಂಗ್ ಹೆಚ್ಚು ಆನಂದ ನೀಡುತ್ತದೆ. ಇಲ್ಲಿನಪ್ರಶಾಂತವಾದ ವಾತಾವರಣದಿಂದ ಮನಸ್ಸು ಹಗುರವಾಯಿತು’ ಎಂದು ಶಿವಮೊಗ್ಗದ ಪ್ರವಾಸಿರೋಹನ್‌ ತಿಳಿಸಿದರು.

‘ಜಲಸಾಹಸ ಕ್ರೀಡೆಗೆ ₹3 ಕೋಟಿ ಬಂಡವಾಳ ಹಾಕಲಾಗಿದೆ. ಲಾಕ್‌ಡೌನ್‌ನಿಂದಾಗಿ ಒಂದೂವರೆ ವರ್ಷ ಬಂದ್‌ ಮಾಡಿದ ಪರಣಾಮ ₹1 .5 ಕೋಟಿ ಉಪಕರಣಗಳು ಹಾಳಾದವು.ಪ್ಯಾರಾಸೇಲಿಂಗ್ ಬಿಟ್ಟು ಇತರೆ ಕ್ರೀಡೆಗಳಲ್ಲಿ ಆಟವಾಡಬಹುದು. ಶಾಲಾ, ಕಾಲೇಜು ವಿದ್ಯಾರ್ಥಿಗಳುರಿಯಾಯಿತಿ ಇದೆ. ಪ್ರವೇಶ ಶುಲ್ಕ ಇಲ್ಲ. ವಾಹನ ನಿಲುಗಡೆ, ವಸ್ತ್ರ ಬದಲಿಸಲು ಕೊಠಡಿ, ಸ್ನಾನದ ಕೊಠಡಿ, ಉಪಾಹಾರ ಕೇಂದ್ರ ಇದೆ. ಸಂಪರ್ಕ ರಸ್ತೆ ಹದಗೆಟ್ಟಿದ್ದು, ಡಾಂಬರೀಕರಣ ಮಾಡಬೇಕು’ ಎಂದು ಕ್ಯಾಪ್ಚರ್‌ ಮೂವೆಮೆಂಟ್‌ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಮನವಿ ಮಾಡಿದರು.

‘2018ರಲ್ಲಿ ನಡೆದ ಬಾಹುಬಲಿ ಮಹಾಮಸ್ತಕಾಭಿಷೇಕದ ವೇಳೆ ಜನಿವಾರ ಕೆರೆಯಲ್ಲಿ ಜಲಸಹಾಸ ಕ್ರೀಡೆ ಆರಂಭಿಸಲಾಯಿತು. ಐದು ವರ್ಷದ ಅವಧಿಗೆ ಗುತ್ತಿಗೆ ನೀಡಿದ್ದು, ಕೋವಿಡ್‌ನಿಂದಾಗಿ ಆರುತಿಂಗಳ ಬಂದ್ ಮಾಡಿದ ಪರಿಣಾಮ ಸಾಕಷ್ಟು ನಷ್ಟವಾಯಿತು. ವಾರಾಂತ್ಯವೂ ಪ್ರವಾಸಿಗರುಬರುತ್ತಿಲ್ಲ. ಆರಂಭದಲ್ಲಿ ₹50 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗಿತ್ತು. ಈಗ ವಿದ್ಯುತ್ಸೌಲಭ್ಯ ಇಲ್ಲ. ಪ್ರವಾಸೋದ್ಯಮ ಇಲಾಖೆ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದು ಬಾಹುಬಲಿಜಲಸಹಾಸ ಕೇಂದ್ರದ ವ್ಯವಸ್ಥಾಪಕ ಗೌತಮ್ ಆಗ್ರಹಿಸಿದರು.

**

ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಹೋಟೆಲ್‌ ವ್ಯವಸ್ಥೆ ಇಲ್ಲ. ವಸ್ತ್ರ ಬದಲಿಸಲು ಕೊಠಡಿಗಳಿಲ್ಲ. ಪೂರ್ಣ ಪ್ರಮಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
-ಗೌತಮ್‌, ವ್ಯವಸ್ಥಾಪಕ, ಬಾಹುಬಲಿ ಜಲಸಹಾಸ ಕೇಂದ್ರ, ಜನಿವಾರ ಕೆರೆ

**

ಲಾಕ್‌ಡೌನ್ ತೆರವು ಬಳಿಕ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲದೆ, ಹೊರ ಜಿಲ್ಲೆ ಹಾಗೂ ರಾಜ್ಯದ ವಾಟರ್ ಗೇಮ್ ಸಾಹಸಿಗರು, ಮಹಿಳೆಯರು, ಮಕ್ಕಳು ಬರುತ್ತಿದ್ದಾರೆ.
-ಕೃಷ್ಣ, ಕ್ಯಾಪ್ಚರ್‌ ಮೂವ್‌ಮೆಂಟ್‌ ಸಂಸ್ಥೆ ಮುಖ್ಯಸ್ಥ, ಯಗಚಿ

**

ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ಆದರೆ, ಸರಿಯಾದ ಮೂಲ ಸೌಲಭ್ಯ ಕಲ್ಪಿಸದ ಕಾರಣ
ಜನಿವಾರ ಕೆರೆ ಜಲಸಹಾಸ ಕೇಂದ್ರಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ.
-ಹೊನ್ನೇಗೌಡ, ಶ್ರವಣಬೆಳಗೊಳ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT