ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ | ಪಟ್ಲ ಬೆಟ್ಟಕ್ಕೆ ಬರಲು ಚಾರಣಿಗರ ಪರದಾಟ

ಇಲಾಖೆಗಳ ನಡುವೆ ಸಮನ್ವಯದ ಕೊರತೆ: ಪ್ರವಾಸೋದ್ಯಮಕ್ಕೆ ಸಿಗದ ಉತ್ತೇಜನ
Published 30 ಜೂನ್ 2024, 15:22 IST
Last Updated 30 ಜೂನ್ 2024, 15:22 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಗಡಿಯಲ್ಲಿ ಇರುವ ಪಟ್ಲಬೆಟ್ಟ ಚಾರಣಿಗರ ಅಚ್ಚುಮುಚ್ಚಿನ ತಾಣ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೇವಲ ಸ್ಥಳೀಯರಿಗೆ, ಚಾರಣದ ಹವ್ಯಾಸವಿದ್ದ ಪರಿಸರವಾದಿಗಳಿಗೆ ಮಾತ್ರವೇ ಪರಿಚಿತವಾಗಿದ್ದ ಈ ಸ್ಥಳ, ಸಾಮಾಜಿಕ ಜಾಲತಾಣದ ಮೂಲಕ ಬಹುತೇಕ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಪರಿವರ್ತನೆ ಆಗಿದೆ.

ಪಟ್ಲಬೆಟ್ಟದ 15 ಎಕರೆ ಪ್ರದೇಶ ಪ್ರವಾಸೋದ್ಯಮ ಇಲಾಖೆಗೆ ಸೇರಿದ್ದರೆ, ಸುತ್ತಲಿನ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಆರಂಭದಲ್ಲಿ ಅರಣ್ಯ ಇಲಾಖೆ ಕಾನೂನು ಅನ್ವಯಿಸಲು ಹೋಗದೇ, ಪರಿಸರ ಪ್ರವಾಸ ಇಷ್ಟಪಡುವ ಜನರ ಮುಕ್ತ ಓಡಾಟಕ್ಕೆ ಅವಕಾಶ ನೀಡಿತ್ತು. ಪಟ್ಲಬೆಟ್ಟದ ಸೌಂದರ್ಯ ಕಂಡು ರಾಜ್ಯ, ದೇಶದ ವಿವಿಧೆಡೆಗಳಿಂದ ಸಾವಿರಾರು ಜನರು ಇಲ್ಲಿಗೆ ಬರಲು ಆರಂಭಿಸಿದ ನಂತರ ಸಂಚಾರ ಸಮಸ್ಯೆ ತಲೆದೋರಿತು.

ಕಡಿದಾದ ಕಚ್ಚಾ ರಸ್ತೆ ಮಾತ್ರವೇ ಇರುವುದರಿಂದ ಸಾಮಾನ್ಯ ವಾಹನಗಳು ಬೆಟ್ಟಕ್ಕೆ ಹೋಗುವುದು ಸಾಧ್ಯವಿರಲಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವು ಸ್ಥಳೀಯರು ಜೀಪು, ಪಿಕ್‌ಅಪ್‌ ವಾಹನಗಳಲ್ಲಿ ಜನರನ್ನು ಬೆಟ್ಟಕ್ಕೆ ಕರೆದೊಯ್ದು, ವಾಪಸ್‌ ಕರೆತಂದು ಬಿಡುವ ಬಾಡಿಗೆ ವ್ಯವಹಾರ ಆರಂಭಿಸಿದರು. ಅದು ಲಾಭದಾಯಕವೂ ಆಯಿತು. ಬಾಡಿಗೆ ವಾಹನದಲ್ಲಿಯೇ ಸಂಚರಿಸಬೇಕು ಎನ್ನುವ ನಿಯಮಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರವಾಸಿಗರ ಮೇಲೆ ಕೆಲ ದಿನಗಳ ಹಿಂದೆ ಹಲ್ಲೆ ಮಾಡಲಾಗಿದ್ದು, ಯಸಳೂರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಪಟ್ಲಬೆಟ್ಟಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು. ಶೀಘ್ರ ಎರಡೂ ಇಲಾಖೆ ಅಧಿಕಾರಿಗಳ ಸಭೆ ಕರೆದು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಸಿಮೆಂಟ್‌ ಮಂಜು, ಶಾಸಕ

ದಾರಿ‌ ಬಂದ್ ಮಾಡಿದ ಅರಣ್ಯ ಇಲಾಖೆ: ಭೂಕುಸಿತದ ಅಪಾಯ ಇರುವುದರಿಂದ ಮಳೆಗಾಲದಲ್ಲಿ ಪಟ್ಲಬೆಟ್ಟಕ್ಕೆ ಹೋಗುವ ದಾರಿಯನ್ನು ಬಂದ್‌ ಮಾಡಲಾಗುತ್ತದೆ. ಇದೀಗ ಪ್ರವಾಸಿಗರ ಮೇಲಿನ ಹಲ್ಲೆ ಘಟನೆಯ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಜೆಸಿಬಿ ಬಳಸಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟ್ರಂಚ್‌ ನಿರ್ಮಾಣ ಮಾಡಿದ್ದಾರೆ. ಇನ್ನು ಮುಂದೆ ಯಾವುದೇ ವಾಹನಗಳು ಪಟ್ಲಬೆಟ್ಟಕ್ಕೆ ಹೋಗುವುದು ಸಾಧ್ಯವಿಲ್ಲದಂತಾಗಿದೆ.

ಸಚಿವರ ಸೂಚನೆಯಂತೆ ಸ್ಥಳ ಪರಿಶೀಲಿಸಿ ವರದಿ ನೀಡಲಾಗಿದೆ. ಶೀಘ್ರ ಎರಡೂ ಇಲಾಖೆಗಳ ಅಧಿಕಾರಿಗಳು ಸೇರಿ ಸ್ಥಳದ ಜಂಟಿ ಸರ್ವೆ ನಡೆಸಲಾಗುವುದು.
ಸೌರಭ್‌ಕುಮಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

ಮೂಲಸೌಕರ್ಯ ಒದಗಿಸದ ಇಲಾಖೆಗಳು: ಒಂದೆಡೆ ಬೆಟ್ಟದ ಮೇಲಿನ 15 ಎಕರೆ ಪ್ರದೇಶವನ್ನು 2015ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ, ಸುತ್ತಲಿನ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದೆ. ಹೀಗಾಗಿ ಎರಡೂ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಪಟ್ಲಬೆಟ್ಟದಲ್ಲಿ ಮೂಲಸೌಕರ್ಯದ ಕೊರತೆ ಎದುರಾಗಿದೆ.

ಎರಡೂ ಇಲಾಖೆಗಳ ಅಧಿಕಾರಿಗಳು ಒಂದೆಡೆ ಕುಳಿತು, ಬೆಟ್ಟದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸೂಕ್ತ ಕಾರ್ಯಯೋಜನೆ ರೂಪಿಸಬೇಕು. ಜೊತೆಗೆ ಬರುವ ಪ್ರವಾಸಿಗರ ಅನುಕೂಲಕ್ಕೆ ಮೂಲಸೌಕರ್ಯ ಕಲ್ಪಿಸಬೇಕು. ಪ್ರವಾಸೋದ್ಯಮ ಇಲಾಖೆಗೆ ಸೇರಿದ ಬೆಟ್ಟದ ಮೇಲೆ ಪ್ರಕೃತಿ ಸೌಂದರ್ಯ ಸವಿಯಲು ಅಗತ್ಯ ಸೌಕರ್ಯ ಕಲ್ಪಿಸಬೇಕು ಎನ್ನುವುದು ಪ್ರವಾಸಿಗರ ಒತ್ತಾಯ.

ಅರಣ್ಯ ಸಚಿವರ ಸೂಚನೆಗೆ ಆಕ್ಷೇಪ

ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆ ಪತ್ರ ಬರೆದಿದ್ದು ಪಟ್ಲಬೆಟ್ಟಕ್ಕೆ ಹೋಗಲು ದಾರಿ ಮಾಡಲಾಗಿದ್ದು ಇದಕ್ಕಾಗಿ ಮರ ಕಡಿಯಲಾಗಿದೆಯೇ ಎಂಬುದರ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಅನುಮತಿ ಇಲ್ಲದೇ ರಸ್ತೆ ನಿರ್ಮಿಸಿದ್ದರೆ ತಪ್ಪಿತಸ್ಥರು ಹಾಗೂ ಕರ್ತವ್ಯಲೋಪ ಎಸಗಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಗೆ ಇದೂ ಉದಾಹರಣೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ‘ಸರ್ಕಾರವೇ ಇಲ್ಲಿ ರಸ್ತೆ ನಿರ್ಮಿಸಿ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡಬೇಕು. ಆದರೆ ಅರಣ್ಯ ಸಚಿವರು ಈ ರೀತಿ ಪತ್ರ ಬರೆದಿದ್ದು ರಸ್ತೆಯೇ ಇಲ್ಲದೇ ಪ್ರವಾಸಿಗರು ಬೆಟ್ಟಕ್ಕೆ ಹೋಗುವುದಾದರೂ ಹೇಗೆ’ ಎನ್ನುತ್ತಾರೆ ಸ್ಥಳೀಯ ಚಾರಣಿಗ ಜಗದೀಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT