ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪಗಿರಿ: ಎಣ್ಣೆ ಶಾಲೆ ಉತ್ಸವ ಸಂಭ್ರಮ

Published 22 ಡಿಸೆಂಬರ್ 2023, 6:11 IST
Last Updated 22 ಡಿಸೆಂಬರ್ 2023, 6:11 IST
ಅಕ್ಷರ ಗಾತ್ರ

ಹಳೇಬೀಡು: ಸಮೀಪದ ಪುಷ್ಪಗಿರಿಯ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಹೋತ್ಸವದಲ್ಲಿ ವಿವಿಧ ಉತ್ಸವಗಳು ಮುಗಿದಿದ್ದು, ನಂತರ ನಡೆಯುವ ಎಣ್ಣೆಶಾಲೆ ಆಚರಣೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.

ಹತ್ತಿ ಬಟ್ಟೆಯ ಸೀರೆಯನ್ನು ಎಣ್ಣೆಯಲ್ಲಿ ನೆನೆಸಿ, ದೊಡ್ಡ ಪಂಜಿನಂತೆ ಉರಿಸುವ ಪ್ರಕ್ರಿಯೆ ಯನ್ನು ಅಮಾವಾಸ್ಯೆಯ ಮರುದಿನ ನಸುಕಿನಲ್ಲಿ ಆಚರಿಸಲಾಗುತ್ತಿದ್ದು, ಇದಕ್ಕೆ ಎಣ್ಣೆಶಾಲೆ ಉತ್ಸವ ಎಂದು ಕರೆಯಲಾಗುತ್ತಿದೆ.

ಈ ಆಚರಣೆಗೆ ನೂರು ವರ್ಷಗಳ ಇತಿಹಾಸವಿದೆ. 

ಕಾರ್ತಿಕ ಮಾಸ ನಂತರ ಧನುರ್ಮಾಸ ಆರಂಭದಲ್ಲಿ ನಡೆಸುವ ಈ ಉತ್ಸವ ಎಂದರೆ ಸುತ್ತಮುತ್ತಲ 101ಹಳ್ಳಿಗಳ ಭಕ್ತರಿಗೆ ವಿಶೇಷ ಭಕ್ತಿ ಭಾವ ಇಂದಿಗೂ ಇದೆ. ಈ ದೇಗುಲದಲ್ಲಿ ಲೋಹದ ವಿವಿಧ ವಾಹನಗಳಲ್ಲಿ ರಾತ್ರಿಯಿಡಿ ಉತ್ಸವ ನಡೆಸಿದ ನಂತರ, ಅಡ್ಡೆಯಲ್ಲಿ ಪಾರ್ವತಿ, ಪರಮೇಶ್ವರ ಮೂರ್ತಿಯನ್ನು ದೇವಾಲಯದ ಪ್ರಾಂಗಣಕ್ಕೆ ಕರೆತರಲಾಗುತ್ತದೆ. ಆಗಮಿಕರ ಮಂತ್ರಘೋಷದೊಂದಿಗೆ ಪೂಜಾ ವಿಧಾನ ನಡೆಸಿದ ನಂತರ ಎಣ್ಣೆಶಾಲೆ ಆರಂಭವಾಗುತ್ತದೆ. 

ಹತ್ತಿಬಟ್ಟೆಯಿಂದ ತಯಾರಿಸಿದ ಉದ್ದವಾದ ಸೀರೆಯನ್ನು ಶುದ್ದವಾದ ಎಣ್ಣೆಯಲ್ಲಿ ನೆನೆಸಿ ನಂತರ ನೀಳವಾದ ಮರದ ಗಳಕ್ಕೆ ಎಣ್ಣೆ ಸೀರೆಯನ್ನು ಸುತ್ತಲಾಗುತ್ತದೆ. ಸೀರೆ ದೊಡ್ಡ ಪಂಜಿನಂತೆ ಬೆಂಕಿಯಲ್ಲಿ ಜ್ವಲಿಸ ಲಾಗುತ್ತದೆ. ಬೆಂಕಿಯಲ್ಲಿ ಸೀರೆ ಉರಿಯಲು ಆರಂಭಿಸಿದಾಕ್ಷಣ ಭಕ್ತರು ಕೈಮುಗಿದು ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಇಲ್ಲಿ ಒಂದು ಸೀರೆ ಹಾಗೂ ಎಣ್ಣೆಯೇ ಭಕ್ತಿಯ ಕೇಂದ್ರಬಿದುವಾಗಿರುವುದು ವಿಶೇಷ.  

ಸೀರೆ ಸಂಪೂರ್ಣವಾಗಿ ದಹಿಸು ವವರೆಗೂ ಭಕ್ತರು ಜಾಗಬಿಟ್ಟು ಕದಲದೇ, ವೀಕ್ಷಿಸುತ್ತಾರೆ.  ಎಣ್ಣೆಶಾಲೆ ಆಚರಣೆಯಲ್ಲಿ ಭಾಗವಹಿಸಿದ ನಂತರ ಗರ್ಭಗುಡಿಯ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ದರ್ಶನ ಪಡೆದರೆ ಮನಸ್ಸು ಪ್ರಪುಲ್ಲವಾಗಿ ಮಾನಸಿಕ ನೆಮ್ಮದಿ ದೊರಕುತ್ತದೆ ಎಂಬುದು ನಂಬಿಕೆ ಎಂದು ದೇವಾಲಯದ ದಾಸೋಹ ಸಮಿತಿ ಅಧ್ಯಕ್ಷ ಎಚ್.ಮಲ್ಲಾಪುರದ ಸೋಮಸುಂದರ್ ಹೇಳಿದರು. 

 ಸೀರೆ ದಹಿಸಿದ ನಂತರ ಭಸ್ಮ ಸುಟ್ಟು ಕೆಳಗೆ ಬೀಳುವ ಸಂದರ್ಭದಲ್ಲಿ ಬಾಳೆ ಗಿಡದ ಪಟ್ಟೆಯಲ್ಲಿ  ಹಿಡಿದು ಪಾತ್ರೆಯಲ್ಲಿ ಸಂಗ್ರಹಿಸುತ್ತಾರೆ. ಇಲ್ಲಿ ಸೀರೆಯ ಭಸ್ಮವನ್ನೇ ಪ್ರಸಾದ ಎಂದು ಕರೆಯಲಾಗುತ್ತದೆ. ಭಕ್ತರು ಮುಗಿಬಿದ್ದು ಈ ಭಸ್ಮವನ್ನೇ ಪ್ರಸಾದವಾಗಿ ಪಡೆಯುತ್ತಾರೆ. ಇದನ್ನೇ ಕಟ್ಟೆಸೋಮನಹಳ್ಳಿಯ ಬಾಲಲೋಚನಾ ಸ್ವಾಮಿ ಮಠ ಸೇರಿದಂತೆ ಪುಷ್ಪಗಿರಿ ಸುತ್ತಲಿನ ವಿವಿಧ ದೇವಾಲಯಕ್ಕೆ ಕಳಿಸಲಾಗುತ್ತದೆ. ದೇವಾಲಯಕ್ಕೆ ಸಂಬಂಧಿಸಿದ 101 ಹಳ್ಳಿಗೂ ಭಸ್ಮದ ಪ್ರಸಾದ ವಿತರಿಸಲಾಗುತ್ತದೆ ಎಂದು ದಾಸೋಹ ಸಮಿತಿ ಕಾರ್ಯದರ್ಶಿ ಸಂಗಮ್
ವಿವರಿಸುತ್ತಾರೆ.

ಕಾರ್ತಿಕ ಮಾಸದ ಅಮಾವಾಸ್ಯೆ ನಂತರ ಪಾಡ್ಯದ ದಿನ ಬೆಳಿಗ್ಗೆ ಪರಿಶುದ್ದ ಸಮಯದಲ್ಲಿ ಎಣ್ಣೆಶಾಲೆ ನಡೆಯುತ್ತದೆ. ಈ ಆಚರಣೆಗೆ ನೂರಾರು ವರ್ಷದ ಇತಿಹಾಸವಿದೆ ಎಂದು ಪುಷ್ಪಗಿರಿ ಕ್ಷೇತ್ರದ ಭಕ್ತ ಮಿಲ್ ಮಲ್ಲಣ್ಣ ತಮ್ಮ ಅನುಭವ ಹಂಚಿಕೊಂಡರು.

ಭಸ್ಮದಿಂದ ಸೋಂಕು ನಿವಾರಣೆ
ಎಣ್ಣೆಶಾಲೆ ಆಚರಣೆಯಿಂದ ಬರುವ ಭಸ್ಮವನ್ನು ಮನೆಗೆ ತೆಗೆದುಕೊಂಡ ಹೋಗಿ ಪೂಜಿಸುತ್ತಾರೆ. ಭರ್ತಿಯಾಗಿ ತುಳುಕುವಂತೆ ತುಂಬಿಸಿದ ಬಿಂದಿಗೆ ನೀರಿನಿಂದ ಕೈಕಾಲು, ಮುಖ ತೊಳೆದು ಹಣೆಯಲ್ಲಿ ಭಸ್ಮ ಧರಿಸಿದರೆ ರೋಗಗಳು ಸುಳಿಯುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಲ್ಲಿಯೂ ಸೋಂಕಿನ ರೋಗಗಳಿಗೆ ಭಸ್ಮ ಲೇಪನ ಒಳ್ಳೆಯದು ಎಂಬ ವಿಶ್ವಾಸ ಭಕ್ತರಲ್ಲಿದೆ. ಮಂತ್ರಘೋಷದೊಂದಿಗೆ ಎಣ್ಣೆಯ ಸಮ್ಮಿಲನದೊಂದಿಗೆ ಸೀರೆ ದಹಿಸಿದಾಗ ಕಾಣುವ ಜ್ವಾಲೆ ಭಕ್ತಿಯ ಪರಾಕಾಷ್ಠೆ ಹೆಚ್ಚಾಗಿರುತ್ತದೆ. ಅದೊಂದು ಅದ್ಬುತ ಕ್ಷಣ ಎಂಬ ಮಾತು ಭಕ್ತರಿಂದ ಕೇಳಿ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT