ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ : ಹಾಸನದಲ್ಲಿ ಸರಣಿ ಪ್ರತಿಭಟನೆ

ವಿದ್ಯಾರ್ಥಿಗಳ ಮೆರವಣಿಗೆ, ಗೋಮಾಳ ಉಳಿಸಲು ಕುಡುಕುಂದಿ ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ಮನವಿ
Last Updated 19 ಜನವರಿ 2021, 12:35 IST
ಅಕ್ಷರ ಗಾತ್ರ

ಹಾಸನ: ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು,ಗೋಮಾಳದ ಒತ್ತುವರಿ ತೆರವು ಮಾಡಬೇಕುಹಾಗೂ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳು ಪ್ರತ್ಯೇಕ ಪ್ರತಿಭಟನೆ ನಡೆಸಿದವು.

ಗೋಮಾಳ ಒತ್ತುವರಿ ತೆರವು ಮಾಡಬೇಕೆಂದು ಆಗ್ರಹಿಸಿ ಕುಡುಕುಂದಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದ ಸರ್ವೆ ನಂಬರ್‌ 143, 151, 152, 153, 154, 155, 156, 157, 158, 159, 160, 161 ರಲ್ಲಿ ಇರುವ ಗೋಮಾಳವನ್ನು ಕೆಲವರು ಒತ್ತುವರಿ ಮಾಡಿ ಉಳುಮೆ ಮಾಡುತ್ತಿದ್ದಾರೆ. ಅಲ್ಲದೇ ಸರ್ಕಾರಕ್ಕೆ ಸುಳ್ಳು ದಾಖಲೆ ನೀಡಿ ಬಗರ್ ಹುಕ್ಕುಂ ಅಡಿ ಗೋಮಾಳ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮಕ್ಕೆ ಗೋಮಾಳದ ಅವಶ್ಯಕತೆಯಿದೆ. ಇದಕ್ಕೆ ಸಂಬಂಧಪಟ್ಟ ಮೂಲ ದಾಖಲಾತಿ ಒದಗಿಸಬೇಕು.
ಜಾನುವಾರುಗಳನ್ನು ಮೇಯಿಸಲು, ಕೆರೆ ನಿರ್ಮಾಣ, ಸ್ಮಶಾನ, ಕಿರು ಅರಣ್ಯ ತೋಪುಗಳಿಗೆ, ಶಾಲಾ, ಕಾಲೇಜು,
ಆಸ್ಪತ್ರೆ, ಸಮುದಾಯ ಭವನ, ನಿವೇಶನ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳಿಗೆ ಅವಶ್ಯಕವಾಗಿದೆ.
ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಮದ ಬಸವರಾಜು, ಶೇಖರ್ ಸಂತೋಷ್ ಆನಂದ್, ಪುಟ್ಟರಾಜು, ಸುರೇಶ್, ಶ್ರೀನಿವಾಸ್ ವಿಶ್ವನಾಥ್
ಇದ್ದರು.

ಎಬಿವಿಪಿ

ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು, ಎಲ್ಲಾ ಹಾಸ್ಟೆಲ್‌ಗಳನ್ನು ತೆರೆಯಬೇಕು ಹಾಗೂ ಅತಿಥಿ
ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)
ನೇತೃತ್ವದಲ್ಲಿ‌ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ನಗರದ ಹೇಮವಾವತಿ ‌ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಎನ್.ಆರ್‌.
ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಕೊರೊನಾ ಭೀತಿಯಿಂದ ಹತ್ತು ತಿಂಗಳಿಂದ ಮುಚ್ಚಿದ್ದ ಶಾಲಾ, ಕಾಲೇಜುಗಳು‌ ಪ್ರಾರಂಭಗೊಂಡು ಶೈಕ್ಷಣಿಕ
ಚಟುವಟಿಕೆಗಳು ಸಹಜ ಸ್ಥಿತಿಯತ್ತ ಮರಳಿದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಇದರಿಂದ
ವಿದ್ಯಾರ್ಥಿಗಳು ಕಂಗಾಲಾಗಿದ್ದು, ಕೂಡಲೇ ಸರ್ಕಾರ ವೇತನ ಬಿಡುಗಡೆ ಮಾಡಬೇಕು ಎಂದು ಎಪಿವಿಪಿ
ಸಂಚಾಲಕಿ ಐಶ್ವರ್ಯ ಆಗ್ರಹಿಸಿದರು.

ಅಂತಿಮ ವರ್ಷದ ಪದವಿ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭಗೊಂಡು ತಿಂಗಳು
ಕಳೆದಿದೆ. ಆದರೆ, ಕೇವಲ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ಪ್ರವೇಶ ಕಲ್ಪಿಸಲಾಗಿದೆ.
ಲಾಕ್‌ಡೌನ್‌ ನಷ್ಟದಿಂದ ಗ್ರಾಮೀಣ ಭಾಗದ ಬಹುತೇಕ ಕಡೆ ಬಸ್‌ಗಳ ಸಂಚಾರ ವಿರಳವಾಗಿದೆ. ಹಾಗಾಗಿ ಇತರೆ
ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ತೊಂದರೆ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಹಲವು ಕಾಲೇಜುಗಳಲ್ಲಿ ಕಾಯಂ ಉಪನ್ಯಾಸರ ಕೊರತೆ ಇದೆ. ಈವರೆಗೂ ಅತಿಥಿ ಉಪನ್ಯಾಸಕರನ್ನು ನೇಮಕ
ಮಾಡಿಕೊಳ್ಳದ ಕಾರಣ ಹಲವು ವಿಭಾಗಗಳಲ್ಲಿ ತಗರಗತಿಗಳೇ ನಡೆಯುತ್ತಿಲ್ಲ. ಬೇಡಿಕೆಗೆ ಸರ್ಕಾರ
ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಬಿವಿಪಿ ವಿಭಾಗ ಸಂಚಾಲಕ ಭರತ್, ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ, ಜಿಲ್ಲಾ ಸಂಚಾಲಕರಾದ ಅರುಣ್‌,
ಮನೋಜ್‌, ಸಂಪತ್‌, ಬೊಮ್ಮಣ್ಣ, ವಿದ್ಯಾರ್ಥಿಗಳಾದ ವಿನಯ್, ಕಾವ್ಯ, ಬಿಂದು, ವನಜಾಕ್ಷಿ ಇದ್ದರು.

ಗಣಿಗಾರಿಕೆ

ಶಾಂತಿಗ್ರಾಮ ಹೋಬಳಿಯ ಚಿಗಳ್ಳಿ ಗ್ರಾಮದ ಸರ್ವೆ 38ರಲ್ಲಿ ಕಾನೂನು ಪ್ರಕಾರ ನಡೆಯುತ್ತಿರುವ ಗಣಿಗಾರಿಕೆಗೆ ರಕ್ಷಣೆ ನೀಡಬೇಕು ಎಂದು ಕಲ್ಲುಗಣಿ ಮಾಲೀಕರು ಹಾಗೂ ಚಿಗಳ್ಳಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಕೆಂಪೇಗೌಡ, ರಾಮೇಗೌಡ, ಜಗದೀಶ್‌ ಹಾಗೂ ನಾನೂ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 20 ವರ್ಷ ಅನುಮತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದೇವೆ. ಈ ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಚಿಗಳ್ಳಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿದೆ. ತಹಶೀಲ್ದಾರ್‌ ಹಾಗೂ ಅರಣ್ಯ ಇಲಾಖೆ ಎನ್‌.ಒ.ಸಿ ನೀಡಿದೆ. ಜೊತೆಗೆ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲಿಸಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಆದರೂ ಗ್ರಾಮದ ಕೆಲವರು ಸುಳ್ಳು ಆರೋಪ ಮಾಡಿ ವಿವಿಧ ಇಲಾಖೆಗಳಿಗೆ ಅರ್ಜಿ ನೀಡಿದ್ದಾರೆ’ಎಂದು ಗಣಿ ಮಾಲೀಕ ಜನಾರ್ದನ್‌ ಆರೋಪಿಸಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಾದ ಮಂಜೇಗೌಡ ಮತ್ತು ಗೌಡಪ್ಪ ಅವರು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಗಣಿಗಾರಿಕೆ ಆಕ್ರಮವಾಗಿ ನಡೆಯುತ್ತಿದೆ ಎಂದು ದೂರು ನೀಡಿದ್ದಾರೆ’ ಎಂದು ಆರೋಪಿಸಿದರು.

‘ಚಿಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 10 ವರ್ಷಗಳಿಂದ ಹಾಲು ಕಳ್ಳತನ ಮಾಡಿ ಸುರೇಶ್‌, ಮಂಜೇಗೌಡ, ಶುಭ, ಚಿಗಳ್ಳಿ ಗೌಡಪ್ಪ, ಕಮಲಮ್ಮ ಪ್ರದೀಪ ಅವರು ಸುಮಾರು ₹40 ಲಕ್ಷ ಅವ್ಯವಹಾರ ನಡೆಸಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಬೆಳಕಿಗೆ ತಂದ ಕಾರಣ ದ್ವೇಷದಿಂದ ದೂರು ನೀಡಲಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗಣಿ ಮಾಲೀಕರಾದ ಕೆಂಪೇಗೌಡ, ರಾಮೇಗೌಡ, ಜಗದೀಶ್‌, ಚಿಗಳ್ಳಿ ಗ್ರಾಮಸ್ಥರಾದ, ಶೇಖರ, ಗೌರಮ್ಮ, ಅನುಸೂಯ, ಶಿವಣ್ಣ, ಸಾವಿತ್ರಮ್ಮ, ರೇಣುಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT