ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಯಲ್ಲಿ ಅನ್ಯಾಯ, ನ್ಯಾಯ ಸಿಗುವವರೆಗೂ ಹೋರಾಟ: ಎಚ್‌.ಡಿ.ರೇವಣ್ಣ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
Last Updated 22 ಅಕ್ಟೋಬರ್ 2020, 12:53 IST
ಅಕ್ಷರ ಗಾತ್ರ

ಹಾಸನ: ರಾಜ್ಯದ ಎಲ್ಲಾ 59 ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ. ಮೀಸಲಾತಿ ಅನ್ಯಾಯದ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಅಡ್ವೊಕೇಟ್‌ ಜನರಲ್‌ ಕೋರ್ಟ್‌ಗೆ ಮತ್ತೊಮ್ಮೆ ಸುಳ್ಳು ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಪಕ್ಷದ ಸದಸ್ಯರು ತೀರ್ಮಾನ ಕೈಗೊಳ್ಳಲಿದ್ದಾರೆ. ಮೀಸಲಾತಿ ಅಸ್ತ್ರ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ರಾಜ್ಯದ 48 ಸ್ಥಳೀಯ ಸಂಸ್ಥೆಗಳನ್ನು ತನ್ನ ವಶಕ್ಕೆ ಪಡೆಯಲು ಹವಣಿಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಸರ್ಕಾರದ ಕೆಲ ಮುಖಂಡರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೀಸಲಾತಿ ಅಸ್ತ್ರ ಬಳಸಿ ಹಿಂಬಾಗಿಲ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುತ್ತಿದೆ. ಈ ರೀತಿ ವಾಮಮಾರ್ಗ ಅನುಸರಿಸಿ ಅಧಿಕಾರ ಪಡೆಯುವುದಾದರೆ ಚುನಾವಣೆ ಮಾಡುವ ಅವಶ್ಯಕತೆ ಏನಿದೆ? ಇದೊಂದು ಭ್ರಷ್ಟ ಹಾಗೂ ಲೂಟಿಕೋರ ಸರ್ಕಾರವಾಗಿದ್ದು, ಇದರೊಂದಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಮೀಸಲಾತಿ ವಿಚಾರದ ಬಗ್ಗೆ ಅಡ್ವೊಕೇಟ್‌ ಜನರಲ್ ದಿನನಿತ್ಯ ವಿಭಿನ್ನ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ನೀಡುತ್ತಿದ್ದಾರೆ. ಸಂಪೂರ್ಣ ಆದೇಶ ಪ್ರತಿ ಕೊಡುವಂತೆ ಕೇಳಿದರೂ ಇದುವರೆಗೂ ನೀಡುತ್ತಿಲ್ಲ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಹಾಸನ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ನಗರಾಭಿವೃದ್ಧಿ ಇಲಾಖೆಗಳು 24*7 ಕಾರ್ಯನಿರ್ವಹಿಸುತ್ತೀವೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಹಿಂದೆ ಚುನಾವಣಾ ಪ್ರಚಾರದ ವೇಳೆ ರಾಜ್ಯ ಸಮ್ಮಿಶ್ರ ಸರ್ಕಾರ ಪರ್ಸಂಟೇಜ್ ಸರ್ಕಾರ ಎಂದು ಟೀಕಿಸಿದ್ದರು. ಇದೀಗ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯಚಟುವಟಿಕೆಯನ್ನು ನೋಡಿ ಯಾವ ರೀತಿಯ ಪರ್ಸೆಂಟೇಜ್ ಸರ್ಕಾರ ಅಸ್ತಿತ್ವದಲ್ಲಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಟೀಕಿಸಿದರು.

ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರದ ಸಚಿವರು ಉಪಚುನಾವಣೆ ಪ್ರಚಾರದಲ್ಲಿ ಮುಳುಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಅವರೇ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ರಾಜ್ಯದಲ್ಲಿ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಸಾಕಷ್ಟು ಮನೆಗಳಿಗೂ ಹಾನಿಯಾಗಿದೆ. ಇಲ್ಲಿಯವರೆಗೂ ಬಿಡಿಗಾಸು ಪರಿಹಾರ ಬಂದಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ಕಳೆದ ಎಂಟು ವರ್ಷಗಳಿಂದ ತೆಂಗು ಬೆಳೆಗಾರರಿಗೆ ಪರಿಹಾರ ಕೊಟ್ಟಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ₹180 ಕೋಟಿ ಬಿಡುಗಡೆ ಮಾಡಿದ್ದರು. ಮೆಕ್ಕೆಜೋಳ ದರ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ಕೆಎಂಎಫ್‌ ಬೆಂಬಲ ಬೆಲೆ ರೈತರಿಂದ ನೇರ ಖರೀದಿ ಮಾಡುತ್ತಿಲ್ಲ. ಸಮಸ್ಯೆ ಆಲಿಸಲು, ಬಗೆಹರಿಸಲು ಯಾರಿಗೂ ಸಮಯ ಇಲ್ಲ, ಇದೆಲ್ಲ ಇನ್ನೂ ಎಷ್ಟು ದಿನಗಳ ವರೆಗೆ ಎಂಬುದನ್ನು ನೋಡೋಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT