ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಿಗೆ ಲಸಿಕೆ ನೀಡಲು ವಾರದ ಗಡುವು

ಕೊಳಚೆ ಪ್ರದೇಶದಲ್ಲಿ ವಾರಕ್ಕೊಮ್ಮೆ ಸ್ಯಾನಿಟೈಸ್‌ ಮಾಡಿ: ಡಿ.ಸಿ ಸೂಚನೆ
Last Updated 7 ಸೆಪ್ಟೆಂಬರ್ 2021, 13:01 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿರುವ ಗರ್ಭಿಣಿಯರಿಗೆ ಶೇಕಡಾ 100ರಷ್ಟು ಕೋವಿಡ್ ಲಸಿಕೆಯನ್ನು ಆದ್ಯತೆ ಮೇರೆಗೆ ಹಾಕಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಶಿಶು ಮತ್ತು ತಾಯಿ ಮರಣ ಪ್ರಗತಿ ಪರಿಶೀಲನೆ ಹಾಗೂ ನ್ಯೂಮೋನಿಯಾ ಲಸಿಕೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಎಲ್ಲಾ ಗರ್ಭಿಣಿಯರಿಗೆ ಮುಂದಿನ ಒಂದು ವಾರದೊಳಗೆ ಸಂಪೂರ್ಣ ಲಸಿಕೆ ನೀಡುವಂತೆನಿರ್ದೇಶನ ನೀಡಿದರು.

ತೀವ್ರ ಸಮಸ್ಯೆ ಉಂಟಾಗಿರುವ ಗರ್ಭಿಣಿಯರನ್ನು ಗುರುತಿಸಿ ಪಟ್ಟಿ ಮಾಡಿ, ಅವರ ಆರೋಗ್ಯದ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡುತ್ತಿರಬೇಕು. ಯಾವುದೇ ಸಮಯದಲ್ಲಿ ಆಸ್ಪತ್ರೆಗೆ ಬಂದರೂ ತಕ್ಷಣ ಅವರಿಗೆ ಚಿಕಿತ್ಸೆ ದೊರೆಯುವಂತಾಗಬೇಕು. ಮಾನಸಿಕ ಖಿನ್ನತೆಗೆ ಒಳಗಾಗಿರುವವರಿಗೆ ಸ್ತ್ರೀರೋಗ ತಜ್ಞರಿಂದ ಸಮಾಲೋಚನೆ ನಡೆಸಿ, ಸೂಕ್ತ ತರಬೇತಿ ನೀಡಿ ಎಂದು ಅವರು ಹೇಳಿದರು.

ಅಗತ್ಯವಿದ್ದಲ್ಲಿ ಲಸಿಕೆ ನೀಡಲು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಆರ್.ಎಫ್.ನಲ್ಲಿ ಅಗತ್ಯವಿದ್ದಲ್ಲಿ ವಾಹನ ಬಳಸಿಕೊಳ್ಳಬೇಕು.ಕೊಳಚೆ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಸ್ಯಾನಿಟೈಸರ್ ಮಾಡುವುದರ ಜೊತೆಗೆ ಅವರಲ್ಲಿ ಸ್ವಚ್ಚತೆಕಾಪಾಡಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದರು.

ಕೇರಳದಿಂದ ಜಿಲ್ಲೆಗೆ ಬರುವ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧಾಶ್ರಮಗಳಿಗೆ ಪ್ರತಿ 15 ದಿನಕ್ಕೊಮ್ಮೆ ತೆರಳಿ ಕೋವಿಡ್ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದ ಅವರು, ಪ್ರತಿ ಬುಧವಾರ ನಡೆಯುವ ಲಸಿಕಾ ಮೇಳದಲ್ಲಿ 50 ಸಾವಿರ ಲಸಿಕೆ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ರೋಗ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದರು.

ಆರೋಗ್ಯ ಕಾರ್ಯಕರ್ತೆಯರು ತಾಲ್ಲೂಕುವಾರು ಶಿಶು ಮತ್ತು ತಾಯಿ ಮರಣ ಪ್ರಮಾಣ ಪರಿಶೀಲನೆ ನಡೆಸಬೇಕು. ಮರಣ ಪ್ರಮಾಣ ಕಡಿಮೆಗೊಳಿಸುವಂತೆ ವೈದ್ಯರಿಗೆ ಸಲಹೆ, ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಪ್ರಸವ ವೇಳೆಯಲ್ಲಿ ತಾಯಿ ಮತ್ತು ನವಜಾತ ಶಿಶು ಮರಣ ಹಾಗೂ ಬಾಣಂತಿಯರ ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾಳಜಿವಹಿಸಬೇಕು. ಗರ್ಭಿಣಿಯರಲ್ಲಿ ಅನಿಯಂತ್ರಿತ ರಕ್ತದೊತ್ತಡ, ರಕ್ತಸ್ರಾವ ತೊಂದರೆ ಕಂಡು ಬಂದರೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ರಕ್ತಪರೀಕ್ಷೆಗೊಳಪಡಿಸಬೇಕು ಎಂದರು.

ಆಶಾ ಕಾರ್ಯಕರ್ತೆಯರು ಎಲ್ಲಾ ಗರ್ಭಿಣಿ, ಬಾಣಂತಿಯರ ಮನೆ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುವುದರ ಜೊತೆಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌, ಆರ್ ಸಿಎಚ್ ಅಧಿಕಾರಿ ಡಾ.ಕಾಂತರಾಜ್, ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಧಿಕಾರಿ ಮಂಜುಳಾ, ಸ್ತ್ರೀ ರೋಗ ತಜ್ಞೆ ಡಾ.ಭಾರತಿ ರಾಜಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT