ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು: ಭತ್ತದ ಗದ್ದೆಗಳಲ್ಲಿ ಕಾಡಾನೆಗಳ ದಾಂದಲೆ

ಅತಿವೃಷ್ಟಿಯಿಂದ ನಲುಗಿದ್ದ ರೈತರಿಗೆ ಈಗ ಗಜಪಡೆಯ ಉಪಟಳ
Published : 28 ಆಗಸ್ಟ್ 2024, 5:13 IST
Last Updated : 28 ಆಗಸ್ಟ್ 2024, 5:13 IST
ಫಾಲೋ ಮಾಡಿ
Comments

ಆಲೂರು: ಪ್ರಸಕ್ತ ಸಾಲಿನಲ್ಲಿ ಎರಡು ಪಟ್ಟು ಮಳೆಯಾಗಿ ಹವಾಮಾನ ವೈಪರೀತ್ಯದಿಂದ ನಷ್ಟಕ್ಕೊಳಗಾಗಿದ್ದು ಒಂದೆಡೆಯಾದರೆ, ಕಾಡಾನೆಗಳ ಹಾವಳಿಯಿಂದ ಬೆಳೆ ಹಾಳಾಗುತ್ತಿರುವುದರಿಂದ ರೈತರು ಸಂಪೂರ್ಣ ನಲುಗಿ ಹೋಗಿದ್ದಾರೆ.

ಸುಮಾರು 20 ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಕಾಫಿ ತೋಟದಲ್ಲಿ ಬೀಜಗಳು ನೆಲಕ್ಕೆ ಉದುರಿ ಗಿಡಗಳು ಬರಿದಾದವು. ಮೆಣಸು, ಮುಸುಕಿನ ಜೋಳ ತೇವಾಂಶದಿಂದ ಹಳದಿ ಬಣ್ಣಕ್ಕೆ ತಿರುಗಿದ್ದು, ಗಿಡಗಳು ಒಣಗಿ ನಿಂತಿವೆ. ಶುಂಠಿ ಬೆಳೆಯೂ ತೇವಾಂಶದಿಂದ ರೋಗಗ್ರಸ್ತವಾಗಿದೆ. ಒಂದು ತಿಂಗಳಿನಿಂದ ಮಳೆಯೊಂದಿಗೆ ತಂಪಾದ ವಾತಾವರಣ ಇರುವುದರಿಂದ ಭೂಮಿಗೆ ಸೂರ್ಯನ ಕಿರಣ ತಾಗದಂತಾಗಿದ್ದು, ಬೆಳೆಗಳಿಗೆ ದಿನದಿಂದ ರೋಗ ಹೆಚ್ಚುತ್ತಿದೆ.

ಸಮೃದ್ಧಿಯಾಗಿ ಮಳೆಯಾದ್ದರಿಂದ ಗದ್ದೆಗಳಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದು, ಭತ್ತದ ಸಸಿ ಮಡಿಲು ಮಾಡಿದರು. ಕಾಡಾನೆಗಳು ಸಸಿ ಮಡಿಲನ್ನೂ ತುಳಿದು ನಾಶ ಮಾಡಿದವು. ಅಳಿದುಳಿದ ಸಸಿಯನ್ನು ಗದ್ದೆಗಳಿಗೆ ನೆಟ್ಟು ಪೋಷಿಸುತ್ತಿದ್ದರು. ಆದರೆ ಸೋಮವಾರ ರಾತ್ರಿ ಸುಮಾರು ಒಂಬತ್ತು ಕಾಡಾನೆಗಳು ಅಂಕಿಹಳ್ಳಿಪೇಟೆ ಗ್ರಾಮದ ಎ.ಕೆ. ಪೋಷಿತಕುಮಾರ್ ಅವರು ನಾಟಿ ಮಾಡಿದ್ದ ಗದ್ದೆಗಳಿಗೆ ಒಮ್ಮೆಲೆ ನುಗ್ಗಿದ್ದು, ನಾಟಿ ಮಾಡಿದ ಸಸಿ ಮತ್ತು ಬದುಗಳನ್ನು ತುಳಿದು ದಾಂದಲೆ ಮಾಡಿವೆ. ಬೆಳೆಯೊಂದಿಗೆ ಬದುಗಳೂ ನಾಶವಾಗಿವೆ.

ಕಾಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು ಒಂದಲ್ಲ ಒಂದು ರೀತಿಯ ತೊಂದರೆಗೆ ಸಿಲುಕುತ್ತಿದ್ದಾರೆ. ಕಾಡಾನೆಗಳು ರಾತ್ರಿ ವೇಳೆಯಲ್ಲಿ ಹಿಂಡು ಹಿಂಡಾಗಿ ಗದ್ದೆಗಳಿಗೆ ನುಗ್ಗಿ ದಾಂದಲೆ ಮಾಡುತ್ತಿವೆ. ಹಗಲು ವೇಳೆಯಲ್ಲಿ ಸಮೀಪದ ಕಾಫಿ ತೋಟದಲ್ಲಿ ತಂಗುತ್ತಿರುವುದರಿಂದ, ಜನಸಾಮಾನ್ಯರು ಮನೆಗಳಿಂದ ಹೊರ ಬರಲು ಭಯಭೀತರಾಗಿದ್ದಾರೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಕಾರ್ಮಿಕರು ತೋಟ, ಗದ್ದೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಕಾಲಕ್ಕೆ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಶಾಲಾ– ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

‘ಅರಣ್ಯ ಇಲಾಖೆ ಸಿಬ್ಬಂದಿಯೂ ಪ್ರಯತ್ನ ಮಾಡಿ, ಕಾಡಾನೆಗಳನ್ನು ಓಡಿಸಿದರೂ ಹಾವಳಿಯಂತೂ ತಪ್ಪುತ್ತಿಲ್ಲ. ಸರ್ಕಾರ ಕೂಡಲೇ ಕಾಡಾನೆಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನೀರಿನಿಂದಾಗಿ ನಾಡಿಗೆ ಲಗ್ಗೆ

ಈ ವರ್ಷ ಧಾರಾಕಾರ ಮಳೆಯಿಂದ ಹೇಮಾವತಿ ಜಲಾಶಯ ಭರ್ತಿಯಾಗಿದ್ದು ಎಲ್ಲೆಡೆಯೂ ಹಿನ್ನೀರು ಆವರಿಸಿದೆ. ಆನೆಗಳು ವಾಸಿಸುವ ಸ್ಥಳಗಳಲ್ಲಿ ನೀರು ಇರುವುದರಿಂದ ಆನೆಗಳು ನಾಡಿನತ್ತ ಲಗ್ಗೆ ಹಾಕುತ್ತಿವೆ ಎನ್ನುತ್ತಿದ್ದಾರೆ ರೈತರು. ಹೇಮಾವತಿ ಜಲಾಶಯದ ಹಿನ್ನೀರು ಹೆಚ್ಚಿದಂತೆ ಆನೆಗಳ ವಾಸಸ್ಥಾನವೂ ಬದಲಾಗುತ್ತದೆ. ಹಾಗಾಗಿ ಆನೆಗಳೆಲ್ಲವೂ ಹಿನ್ನೀರಿನಿಂದ ಮೇಲ್ಭಾಗಕ್ಕೆ ಬರುತ್ತವೆ. ಆಗ ಕಾಫಿ ತೋಟಗಳು ಭತ್ತದ ಗದ್ದೆಗಳಿಗೆ ನುಗ್ಗುತ್ತಿವೆ. ಮಳೆ ಕಡಿಮೆ ಆಗುವವರೆಗೆ ಅಲ್ಲಿಯೇ ಅವು ವಾಸ ಮಾಡುತ್ತಿವೆ. ಹೀಗಾಗಿ ಇದೀಗ ಮಳೆ ನಿಂತರೂ ಮಲೆನಾಡಿನಲ್ಲಿ ಆನೆಗಳ ಉಪಟಳ ಅಧಿಕವಾಗುತ್ತಿದೆ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.

ಸ್ಥಳದಲ್ಲೇ ಪರಿಹಾರ ವಿತರಿಸಿ

‘ಈ ವರ್ಷ ಎರಡು ಪಟ್ಟು ಮಳೆಯಾಗಿ ಕಾಫಿ ಬೀಜ ಉದುರಿ ನಷ್ಟವಾಯಿತು. ಹತ್ತು ದಿನಗಳ ಹಿಂದೆ ಗದ್ದೆಗಳಲ್ಲಿ ಭತ್ತದ ಸಸಿ ನಾಟಿ ಮಾಡಿದ್ದೆವು. ರಾತ್ರಿ ಸುಮಾರು ಒಂಬತ್ತು ಕಾಡಾನೆಗಳು ಒಂದೂವರೆ ಎಕರೆ ಗದ್ದೆಗಳನ್ನು ತುಳಿದು ಸಸಿಗಳನ್ನು ನಾಶ ಮಾಡಿವೆ’ ಎಂದು ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ ಎ.ಕೆ. ಪೋಷಿತ್‌ಕುಮಾರ್‌ ತಿಳಿಸಿದ್ದಾರೆ. ‘ಹಗಲು ವೇಳೆಯಲ್ಲಿ ಕಾಫಿ ತೋಟದೊಳಗೆ ಗಿಡಗಳನ್ನು ನಾಶ ಮಾಡುತ್ತಿವೆ. ಬೆಳೆಗೆ ಖರ್ಚಾಗಿರುವ ಶೇ 75 ರಷ್ಟು ಹಣವನ್ನಾದರೂ ಪರಿಹಾರ ರೂಪದಲ್ಲಿ ನೀಡಿ ರೈತರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು. ಘಟನೆ ನಡೆದ ಸ್ಥಳದಲ್ಲಿ ಪರಿಹಾರ ಕೊಡುವ ವ್ಯವಸ್ಥೆ ಆಗಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT