ಮಂಗಳವಾರ, ಜನವರಿ 26, 2021
24 °C
ಚೀರನಹಳ್ಳಿ ಕೆರೆಯಲ್ಲಿ ದೊರೆತ ಚಿತ್ರದುರ್ಗದ ಮಹಿಳೆ ಶವ ಪ್ರಕರಣ

ಚಿತ್ರದುರ್ಗದ ಮಹಿಳೆ ಶವ ಪ್ರಕರಣ: ಪತಿ ಸೇರಿ ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ತಾಲ್ಲೂಕಿನ ಚೀರನಹಳ್ಳಿ ಗ್ರಾಮದ ಕೆರೆ ನೀರಿನಲ್ಲಿ ಪತ್ತೆಯಾದ ಚಿತ್ರದುರ್ಗ ಜಿಲ್ಲೆಯ ಬೆಲಗೂರು ಗ್ರಾಮದ ಸುಷ್ಮಿತಾ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಗ್ರಾಮಾಂತರ ವೃತ್ತದ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬೆಲಗೂರು ಗ್ರಾಮದ ಎಂ.ಇ.ನಾಗರಾಜು, ಎಂ.ಇ.ಮೋಹನ್‌, ಶೈಲ, ಈಶ್ವರರಾವ್‌, ಜಿ.ಜಯಂತಿ ಬಂಧಿತರು. ಅ.29 ರಂದು ಪತಿ ನಾಗರಾಜ್‌ ತನ್ನ ಕುಟುಂಬದವರೊಂದಿಗೆ ಸೇರಿ ಸುಷ್ಮಿತಾಳ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಕಾರಿನಲ್ಲಿ ತಂದು ಚೀರನಹಳ್ಳಿ ಕೆರೆ ನೀರಿನಲ್ಲಿ ಬಿಸಾಡಿದ್ದ. ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎಂದು ಸೋಮವಾರ ಪೊಲೀಸ್‌ ವರಿಷ್ಠಾಧಿಕಾರ ಆರ್‌.ಶ್ರೀನಿವಾಸಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ದುದ್ದ ಹೋಬಳಿ ಚೀರನಹಳ್ಳಿ ಕೆರೆಯಲ್ಲಿ ನ. 1 ರಂದು ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ವೇಳೆ ಶವ ಬೆಲಗೂರು ಗ್ರಾಮದ ಸುಷ್ಮಿತಾ ಎಂದು ಗೊತ್ತಾಯಿತು. ಈಕೆ ಆರು‌ ವರ್ಷಗಳ ಹಿಂದೆ ಅದೇ ಗ್ರಾಮದ ನಾಗರಾಜು ಎಂಬಾತನನ್ನು ಪ್ರೀತಿಸಿ ‌ಮದುವೆಯಾಗಿದ್ದಳು. ದಂಪತಿಗೆ ನಾಲ್ಕು ವರ್ಷದ ಮಗಳು ಇದ್ದಾಳೆ. ಈ ನಡುವೆ ನಾಗರಾಜು ಪಕ್ಕದ ಕೋಡಿಹಳ್ಳಿ ಗ್ರಾಮದ ಶೈಲಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಕುಟುಂಬದವರೊಂದಿಗೆ ಸೇರಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹಾಗಾಗಿ ತನ್ನ ಮಗುವಿನೊಂದಿಗೆ ವರ್ಷದ ಹಿಂದೆ
ಅರಸೀಕೆರೆಯಲ್ಲಿರುವ ತಂದೆ ಮನೆಗೆ ಬಂದು, ಸಾಯಿ ಗಾರ್ಮೆಂಟ್ಸ್ ನಲ್ಲಿ ‌ಕೆಲಸ ಮಾಡಿ ಸುಷ್ಮಿತಾ ಜೀವನ‌ ನಡೆಸುತ್ತಿದ್ದಳು ಎಂದು ವಿವರಿಸಿದರು.

ಈ ಮಧ್ಯೆ ಸುಷ್ಮಿತಾ ಜೀವನಾಂಶ ಕೋರಿ ಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಳು. ಇದರಿಂದ ಕುಪಿತಗೊಂಡ ಪತಿ ಹಾಗೂ ಆತನ‌ ಕುಟುಂಬದವರು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದರು. ಜೀವನಾಂಶದ ಕುರಿತು ಚರ್ಚಿಸಲು ಸೆ. 29 ರಂದು ಪತ್ನಿಯನ್ನು ತನ್ನ ಹಳೆಯ ಮನೆಗೆ ಕರೆಸಿಕೊಂಡು ನಾಗರಾಜು ಕೊಲೆ ಮಾಡಿದ. ನಂತರ ತನ್ನ ಸಹೋದರ ಮೋಹನ್ ಕುಮಾರ್, ಶೈಲಾ ಅವರೊಂದಿಗೆ ಶವವನ್ನು ಕಾರಿನಲ್ಲಿ‌ ತಂದು ಚೀರನಹಳ್ಳಿ ಕೆರೆಗೆ ಎಸೆದು ಪರಾರಿಯಾಗಿದ್ದರು. ಕೃತ್ಯಕ್ಕೆ ಸಹಕರಿಸಿದ ಆರೋಪಿಯ ತಂದೆ, ತಾಯಿಯನ್ನು ಬಂಧಿಸಿ, ಕಾರು ವಶಪಡಿಸಿಕೊಳ್ಳಲಾಗಿದೆ ಎಂದರು.

ಕೊಲೆ ಪ್ರಕರಣ ಪೊಲೀಸ್‌ ಇಲಾಖೆಗೆ ಸವಾಲಾಗಿತ್ತು. ಮೃತ ಮಹಿಳೆ ಗುರುತು ಪತ್ತೆಗಾಗಿ ಹಾಸನ ಪೊಲೀಸರು ಮಡಿಕೇರಿ, ಮೈಸೂರು, ಬೆಂಗಳೂರು, ಯಾದಗಿರಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಮತ್ತು ಚಿತ್ರದುರ್ಗಕ್ಕೆ ತೆರಳಿ ಮಾಹಿತಿ ಕಲೆ ಸಂಗ್ರಹಿಸಿದ್ದರು ಎಂದರು.

ಆರೋಪಿ ಪತ್ತೆಗೆ ಶ್ರಮಿಸಿದ ಸಿಪಿಐ ಪಿ.ಸುರೇಶ್‌, ದುದ್ದ ಠಾಣೆ ಪಿಎಸ್‌ಐ ಎಂ.ಸಿ.ಮಧು, ಸಿಬ್ಬಂದಿಗಳಾದ ರವಿ, ಕೃಷ್ಣೇಗೌಡ, ಮುರುಳಿ, ಸುಬ್ರಹ್ಮಣ್ಯ, ರವಿಕುಮಾರ್‌, ಜುಲ್ಫೀಕರ್‌ ಅಹಮದ್ ಬೇಗ್‌, ಕಿರಣ್‌, ಶ್ರೀಕಾಂತ್ ಅವರ ಕಾರ್ಯವನ್ನು ಪ್ರಶಂಸಿ, ವಿಶೇಷ ಬಹುಮಾನವನ್ನು ಎಸ್ಪಿ ಘೋಷಿಸಿದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು