ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿಗೆ ಖರೀದಿ ಭರಾಟೆ ಜೋರು

ಮಾರುಕಟ್ಟೆಯಲ್ಲಿ ಗ್ರಾಹಕರ ಸಂದಣಿ; ಹೊಸ ಬಟ್ಟೆ ಕೊಳ್ಳಲು ಮುಗಿ ಬಿದ್ದ ಜನರು
Last Updated 2 ಏಪ್ರಿಲ್ 2022, 1:57 IST
ಅಕ್ಷರ ಗಾತ್ರ

ಹಾಸನ: ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಶುಕ್ರವಾರ ಜೋರಾಗಿತ್ತು. ನಗರದ ಪ್ರಮುಖ ರಸ್ತೆಗಳಷ್ಟೇ ಅಲ್ಲದೆ, ಪಾದಚಾರಿ ಮಾರ್ಗಗಳಲ್ಲೂ ಜನವೋ ಜನ.

ಬಟ್ಟೆ, ಹಣ್ಣು, ತರಕಾರಿ ಹಾಗೂ ದಿನಸಿ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬೇವು, ಮಾವಿನ ಸೊಪ್ಪು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಸ್ತೂರ ಬಾ ರಸ್ತೆ, ಕಟ್ಟಿನ ಕೆರೆ ಮಾರುಕಟ್ಟೆ, ಹಳೇ ಬಸ್‌ ನಿಲ್ದಾಣ ರಸ್ತೆ, ಎ.ವಿ.ಕೆಕಾಲೇಜು ರಸ್ತೆಗಳಲ್ಲಿ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ಹಬ್ಬದಸಾಮಗ್ರಿಗಳನ್ನು ಮಾರಿದರು. ಮಾವು ಮತ್ತು ಬೇವಿನ ಸೊಪ್ಪು, ಮಲ್ಲಿಗೆ ಹೂವು, ಸೇವಂತಿಗೆ ಹೂವು,ಬಾಳೆಎಲೆ ಸೇರಿದಂತೆ ವಿವಿಧ ಹಣ್ಣುಗಳ ವ್ಯಾಪಾರ ಭರಾಟೆಜೋರಾಗಿತ್ತು.

ಹೂವಿನ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಬಾಳೆ ಹಣ್ಣು, ಕಲ್ಲಂಗಡಿ, ಕಿತ್ತಳೆ ಹಣ್ಣು, ಸೇಬು, ದಾಳಿಂಬೆ, ಮೂಸಂಬಿ ಖರೀದಿ ಹೆಚ್ಚಿತ್ತು.ಬಾಳೆ ಹಣ್ಣು ದರ ಕೆ.ಜಿ ₹80ಕ್ಕೇರಿದೆ. ಸೇಬು ₹160, ದಾಳಿಂಬೆ ₹160, ದ್ರಾಕ್ಷಿ ಕೆ.ಜಿ ₹80ರಂತೆ ಮಾರಾಟವಾಯಿತು.

ಮಾವು, ಬೇವಿನ ಸೊಪ್ಪು ಕಟ್ಟಿಗೆ ₹10ರಂತೆ ಮಾರಾಟ ವಾದವು. ಸೇವಂತಿಗೆ ಹೂವು ಮಾರು ₹80ರಿಂದ ₹100, ಮಲ್ಲಿಗೆ,ಕನಕಾಂಬರ ₹100 ಹಾಗೂ ತುಳಸಿ ಹಾರ ಮಾರು ₹40ರಿಂದ₹50ಕ್ಕೆ ಮಾರಾಟವಾಯಿತು.

ಬೀದಿಬದಿ ವ್ಯಾಪಾರಿಗಳು ಕಡಿಮೆ ಬೆಲೆಗೆ ಬಟ್ಟೆಗಳನ್ನು ಮಾರುತ್ತಿದ್ದ ದೃಶ್ಯ ಕಂಡುಬಂತು. ಗ್ರಾಹಕರು ಚೌಕಾಸಿ ಮಾಡಿತಮಗಿಷ್ಟವಾದ ಜೀನ್ಸ್ ಪ್ಯಾಂಟ್, ಶರ್ಟ್, ಟಿ–ಶರ್ಟ್‌ ಖರೀದಿಸಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಆತಂಕದಿಂದಲೇ ಹಬ್ಬಆಚರಿಸಿದ್ದ ಜನರು ಈ ಬಾರಿ ನೋವು ಮರೆತು ಸಂಭ್ರಮದಿಂದ ಆಚರಿಸಲುಉತ್ಸುಕರಾಗಿದ್ದಾರೆ.

ಸಂಜೆ ವೇಳೆಗೆ ಮಾರುಕಟ್ಟೆಗೆ ಕಾಲಿಡುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಹಳೇ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂತು. ಎನ್‌.ಆರ್‌.ವೃತ್ತದಿಂದ ಹೇಮಾವತಿ ಪ್ರತಿಮೆವರೆಗೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ರಸ್ತೆಯ ಮಾರ್ಗದುದ್ದಕ್ಕೂ ಸವಾರರಿಗೆ ಸಂಚಾರ ದಟ್ಟಣೆ ಕಿರಿಕಿರಿ ಉಂಟಾಯಿತು.

‘ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಬಾಳೆಹಣ್ಣುದರ ಕೆ.ಜಿ.ಗೆ ₹20 ಹೆಚ್ಚಾಗಿದೆ. ಕಲ್ಲಂಗಡಿ ಕೆ.ಜಿ. ₹20ರಂತೆ ಮಾರಾಟ ಮಾಡಲಾಗುತ್ತಿದೆ. ಉಳಿದ ಹಣ್ಣುಗಳ ದರ ಯಥಾಸ್ಥಿತಿ ಇದೆ’ ಎಂದು ಹಣ್ಣಿನ ವ್ಯಾಪಾರಿ ಶ್ಯಾಮ್ ತಿಳಿಸಿದರು.

‘ಕೋವಿಡ್‌ನಿಂದಾಗಿ ಎರಡು ವರ್ಷ ಹೇಳಿಕೊಳ್ಳುವಂತಹ ವ್ಯಾಪಾರ ಇರಲಿಲ್ಲ. ಈ ವರ್ಷ ಜನರು ಬಟ್ಟೆ ಖರೀದಿಸಲು ಅಂಗಡಿಗೆ ಭೇಟಿ ನೀಡುತ್ತಿದ್ದಾರೆ. ಹಬ್ಬದ ಮುನ್ನಾ ದಿನವಾದ ಶುಕ್ರವಾರ, ಹಬ್ಬದ ದಿನ, ಭಾನುವಾರ ಹೆಚ್ಚಿನ ವ್ಯಾಪಾರವಾಗಲಿದೆ’ ಎಂದು ಬಟ್ಟೆ ಅಂಗಡಿ ವ್ಯಾಪಾರಿ ಅರ್ಮನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT