ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಲಲ್ಲಿ ಹೂಳು, ಕೋಡಿ ಹಾಳು

Last Updated 10 ಜೂನ್ 2012, 9:25 IST
ಅಕ್ಷರ ಗಾತ್ರ

ಕೊಣನೂರು: ಮಲ್ಲಿಪಟ್ಟಣ ಹೋಬಳಿಯ ಹೆಣ್ಣೂರು ಕೊಂಗಳಲೆ ಗ್ರಾಮದ ಚೈತ್ರಾಬಾಲಾ ಕೆರೆಗೆ ಅಭಿವೃದ್ದಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ವಿನಿಯೋಗಿಸ ಲಾಗಿದೆ. ಆದರೆ, ಕೆರೆಯ ಚಿತ್ರಣ ಮಾತ್ರ ಬದಲಾಗಿಲ್ಲ.

ನೂರಾರು ಎಕರೆ ಜಮೀನಿಗೆ ನೀರುಣಿಸುವ ಕೆರೆ ಅಭಿವೃದ್ದಿಗಾಗಿ ಸಣ್ಣ ನೀರಾವರಿ ಇಲಾಖೆ 2008- 09ರಲ್ಲಿ ನಬಾರ್ಡ್ ಯೋಜನೆಯಡಿ ರೂ. 38.50 ಲಕ್ಷ ಅನುದಾನ ಖರ್ಚು ಮಾಡಿದೆ. ಆದರೆ ಕೆರೆ ಒಡಲಲ್ಲಿ ಹೇರಳವಾಗಿ ತುಂಬಿರುವ ಹೂಳು ಹಾಗೆಯೇ ಉಳಿದಿದೆ. 450 ಮೀಟರ್ ಉದ್ದದ ಕಿರಿದಾದ ಏರಿಯನ್ನು ಅಗಲಗೊಳಿಸಿಲ್ಲ. ಎರಡು ಕಡೆ ಕೋಡಿ ಹಾಳಾಗಿದ್ದು, ಸಿಮೆಂಟ್ ಲೈನಿಂಗ್ ಕಿತ್ತು ಬಂದಿದೆ. ಇದು ಒಟ್ಟಾರೆ ಕೆರೆ ಅಭಿವೃದ್ದಿ ಕಾಮಗಾರಿಯ ಸ್ವರೂಪವನ್ನು ಬಿಚ್ಚಿಡುತ್ತದೆ.

ಕೆರೆಯ ಅಚ್ಚುಕಟ್ಟು 64.40 ಹೆಕ್ಟೇರ್. 24.68 ಎಂ.ಸಿ.ಎಫ್.ಟಿ. ನೀರಿನ ಶೇಖರಣಾ ಸಾಮರ್ಥ್ಯ ಹೊಂದಿರುವ ಕೆರೆಯು ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ಸುತ್ತಲಿನ ಭಾಗದ ನೂರಾರು ಎಕೆರೆ ಭೂ ಪ್ರದೇಶದಲ್ಲಿ ಬೆಳೆಯುವ ಬತ್ತದ ಬೆಳೆಗೆ ನೀರು ಒದಗಿಸುತ್ತಿದೆ.

ಈ ಕೆರೆ ಮಳೆಗಾಲದಲ್ಲಿ ತುಂಬಿದರೆ ವರ್ಷಪೂರ್ತಿ ಬತ್ತುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ದನ ಕರುಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಒತ್ತುವರಿಗೆ ಒಳಗಾಗಿರುವ ಕೆರೆ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕೆರೆ ಅಂಗಳದಲ್ಲಿ ಆಂಧ್ರಕಳ್ಳಿ ಆವರಿಸಿಕೊಂಡಿದೆ. ಸರಿಯಾಗಿ ಹೂಳು ತೆಗೆಯದೇ ವರ್ಷದಿಂದ ವರ್ಷಕ್ಕೆ ತನ್ನ ಮೂಲ ಶೇಖರಣಾ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಎಂಬುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಕೆರೆ ಮೂಲಕ ಹಾದು ಹೋಗಿರುವ 1 ಕಿ.ಮೀ. ಉದ್ದದ ಎಡ ಮತ್ತು 2 ಕಿ.ಮೀ. ಉದ್ದದ ಬಲದಂಡೆ ನಾಲೆ ಗಿಡಗಂಟಿಗಳಿಂದ ಮುಚ್ಚಿ ಹೋಗಿದ್ದು ಏರಿ ಮೇಲೆ ರೈತರು ಓಡಾಡಲು ಕಷ್ಟವಾಗಿದೆ. ಎಡಭಾಗ ಕೋಡಿಯಲ್ಲಿ ಹರಿದು ಹೋಗುವ ನೀರು ಮುಂದೆ ಸಿಗುವ ಕಲ್ಯಾಣಿಗೆ ಸೇರುತ್ತದೆ. ಬಲಭಾಗದ ಹಳ್ಳದ ಕಟ್ಟೆಗೆ ತಡೆಗೋಡೆ ಹಾಕಿ ಎತ್ತರಿಸಿದರೆ ನೀರು ಪೋಲಾಗುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಗ್ರಾಮಸ್ಥರು.

ಎಲ್ಲಕ್ಕಿಂತ ಹೆಚ್ಚಾಗಿ ಕೆರೆ ಕೋಡಿಯನ್ನು ಸರಿಪಡಿಸಿ ಮೇಲು ಸೇತುವೆ ನಿರ್ಮಿಸುವ ಮೂಲಕ ರೈತರು ಎತ್ತಿನ ಬಂಡಿಯನ್ನು ಆಚೀಚೆ ದಾಟಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಜನರ ಬಹು ದಿನದ ಬೇಡಿಕೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT