ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಬಂತು 2 ಸಾವಿರ ಟನ್ ರಸಗೊಬ್ಬರ

ವದಂತಿ ಸೃಷ್ಟಿಸಿದ ಮಾಫಿಯಾ; ಬಿಜೆಪಿ ಕಾರ್ಯಕರ್ತರ ಆರೋಪ‍
Last Updated 2 ಆಗಸ್ಟ್ 2019, 13:18 IST
ಅಕ್ಷರ ಗಾತ್ರ

ಹಾವೇರಿ: ‘ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್’ (ಆರ್‌ಸಿಎಫ್) ಕಂಪನಿಯಿಂದ ಹಾವೇರಿ ಜಿಲ್ಲೆಗೆ ಶುಕ್ರವಾರ ಎರಡು ಸಾವಿರ ಟನ್ ರಸಗೊಬ್ಬರ ಸರಬರಾಜಾಗಿದೆ. ಮತ್ತೊಂದೆಡೆ, ‘ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಗೊಬ್ಬರದ ಕೊರತೆ ವದಂತಿ ಸೃಷ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುವ ಮಾಫಿಯಾ ಜಿಲ್ಲೆಯಲ್ಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕ ಆರೋಪಿಸಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಕೃಷಿ ಇಲಾಖೆ ಜಂಟಿ ಆಯುಕ್ತ ಬಿ.ಮಂಜುನಾಥ್, ‘ಹುಬ್ಬಳ್ಳಿಯಿಂದ ಬೆಳಿಗ್ಗೆಯೇ ರೈಲಿನಲ್ಲಿ‌‌ ಗೊಬ್ಬರದ ಮೂಟೆಗಳನ್ನು ತರಿಸಲಾಗಿದೆ. ನಂತರ ಲಾರಿಗಳಿಗೆ ಲೋಡ್ ಮಾಡಿ ಗೋದಾಮಿಗೆ ಸಾಗಿಸಿದ್ದೇವೆ. ಶನಿವಾರ ಇನ್ನೂ 3,600 ಟನ್ ಗೊಬ್ಬರ ಬರಲಿದೆ. ಅಗತ್ಯವಿರುವ ಸಹಕಾರ ಸಂಘಗಳು ಹಾಗೂ ಖಾಸಗಿ ವ್ಯಾಪಾರಸ್ಥರಿಗೆ ಹಂತ ಹಂತವಾಗಿ ಪೂರೈಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ 660 ಜನ ಖಾಸಗಿ ಮಾರಾಟಗಾರರ ಹಾಗೂ 238 ಸಹಕಾರ ಸಂಘಗಳ ಮೂಲಕ ರೈತರಿಗೆ ಗೊಬ್ಬರ ವಿತರಿಸಲಾಗುತ್ತಿದೆ. ಶುಕ್ರವಾರ ಮತ್ತು ಶನಿವಾರ 6 ಸಾವಿರ ಟನ್ ಗೊಬ್ಬರವನ್ನು ರೈತರಿಗೆ ವಿತರಣೆ ಮಾಡುವ ಗುರಿ ಹೊಂದಿದ್ದೇವೆ. ಆ.4 ರಿಂದ ಆ.10ರವರೆಗೆ 10,800 ಟನ್ ಯೂರಿಯಾ ಸರಬರಾಜು ಮಾಡಲಿದ್ದೇವೆ’ಎಂದು ಮಾಹಿತಿ ನೀಡಿದರು.

‘ಒಟ್ಟಾರೆ 50 ಸಾವಿರ ಟನ್‌ಗಿಂತಲೂ ಹೆಚ್ಚು ಗೊಬ್ಬರ ಲಭ್ಯವಿರಲಿದೆ. ಹೀಗಾಗಿ, ಯಾವುದೇ ಹಂತದಲ್ಲೂ ರೈತರಿಗೆ ತೊಂದರೆ ಆಗುವುದಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗೋದಾಮುಗಳ ಪರಿಶೀಲನೆ ನಡೆಸಿದ್ದೇವೆ. ಅಕ್ರಮವಾಗಿ ಗೊಬ್ಬರ ಮಾರಾಟ ಮಾಡಿದರೆ ಅವರ ಪರವಾನಗಿ ರದ್ದುಪಡಿಸುವುದಾಗಿಯೂ ಎಚ್ಚರಿಕೆ ನೀಡಿದ್ದೇವೆ’ ಎಂದರು.

ಬಿಜೆಪಿ ಆಕ್ರೋಶ: ‘ಜಿಲ್ಲೆಯಲ್ಲಿ ಗೊಬ್ಬರ ದಾಸ್ತಾನು ಇದ್ದರೂ, ವದಂತಿ ಸೃಷ್ಟಿಸಿ ರೈತರನ್ನು ಆತಂಕಕ್ಕೆ ದೂಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

‘2008ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದ ಎಂಟೇ ದಿನಗಳಲ್ಲಿ ಇಂಥದ್ದೇ ಪರಿಸ್ಥಿತಿಸೃಷ್ಟಿಸಲಾಗಿತ್ತು. ಅಂದಿನ ಘಟನೆಯಿಂದಾಗಿ ಇತಿಹಾಸ ಪುಟಗಳಲ್ಲಿ ಹಾವೇರಿ ಜಿಲ್ಲೆಯ ಹೆಸರು ಕಪ್ಪು ಚುಕ್ಕೆಯಾಗಿ ಉಳಿಯಿತು. ಈಗ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಂತಹುದೇ ಸನ್ನಿವೇಶ ಸೃಷ್ಟಿಸಲು ಹೊರಟಿವೆ. ಕೆಲ ರಸಗೊಬ್ಬರ ವ್ಯಾಪಾರಸ್ಥರೂ ಹಣದಾಸೆಗೆ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ,‘ಈ ಬಾರಿ ಮುಂಗಾರು ತಡವಾಗಿದ್ದರಿಂದ ಬಿತ್ತನೆ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಕುಸಿದಿತ್ತು. ಆದರೆ, ಕಳೆದ 15 ದಿನಗಳಿಂದ ಮಳೆ ಸುರಿಯುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ರೈತರು ಗೊಬ್ಬರ ಖರೀದಿಗೆಮುಗಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಸಗೊಬ್ಬರ ಮಾರಾಟದ ಮಾಫಿಯಾ, ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಹೊರಟಿದೆ’ ಎಂದರು.

‘ರಾಜ್ಯ ಮಾರಾಟ ಮಂಡಳದಲ್ಲಿ 20,600 ಚೀಲ ರಸಗೊಬ್ಬರ ಲಭ್ಯವಿದೆ. ಈಗಾಗಲೇ 30 ಸಾವಿರ ಚೀಲ ಯಾದಗಿರಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಹಾವೇರಿಗೆ ಬಂದಿದೆ. ಈ ಎಲ್ಲ ವಿವರಗಳನ್ನು ಕೃಷಿ ಅಧಿಕಾರುಗಳು ಅಂಕಿ ಅಂಶದ ಸಮೇತ ಮಾಹಿತಿ ಕೊಟ್ಟಿದ್ದಾರೆ.ಆದರೂ, ಕೆಲವರು ಗೊಬ್ಬರವನ್ನು ಗೋದಾಮುಗಳಲ್ಲಿ ರಹಸ್ಯವಾಗಿಟ್ಟು ಅಭಾವ ಸೃಷ್ಟಿಸಿದ್ದಾರೆ’ ಎಂದು ದೂರಿದರು.

‘ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ’

‘ಜಿಲ್ಲೆಯಲ್ಲಿ ಹಬ್ಬಿರುವ ವದಂತಿ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಅಗತ್ಯವಿದ್ದಲ್ಲಿ ಇನ್ನಷ್ಟು ರಸಗೊಬ್ಬರ ಪೂರೈಕೆ ಮಾಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ’ ಎಂದು ಕಲಕೋಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT