ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | 269 ಮಕ್ಕಳಿಗೆ ‘ಪ್ರಾಯೋಜಕತ್ವ’ ಆಸರೆ

ಏಕ ಪೋಷಕ, ಬಡ ಮಕ್ಕಳಿಗೆ ಸಹಾಯ
Published : 4 ಆಗಸ್ಟ್ 2024, 4:49 IST
Last Updated : 4 ಆಗಸ್ಟ್ 2024, 4:49 IST
ಫಾಲೋ ಮಾಡಿ
Comments

ಹಾವೇರಿ: ಏಕ ಪೋಷಕ ಹಾಗೂ ಬಡತನದಲ್ಲಿರುವ ಮಕ್ಕಳ ಬೆಳವಣಿಗೆಗೆ ಸಹಾಯವಾಗಲೆಂದು ಜಾರಿಗೆ ತಂದಿರುವ ಪ್ರಾಯೋಜಕತ್ವ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲೆಯ 269 ಮಕ್ಕಳು ಈ ಯೋಜನೆಯಡಿ ಪ್ರತಿ ತಿಂಗಳು ₹ 4,000 ಸಹಾಯ ಧನ ಪಡೆಯುತ್ತಿದ್ದಾರೆ.

ಏಕ ಪೋಷಕ (ತಂದೆ ಅಥವಾ ತಾಯಿ ಮಾತ್ರ), ಅನಾಥ, ಅನಾರೋಗ್ಯ ಪೀಡಿತ ಹಾಗೂ ಅಸಹಾಯಕ ಗುಂಪಿನ ಕುಟುಂಬದಲ್ಲಿ ಜನಿಸಿದ ಮಕ್ಕಳ ಶಿಕ್ಷಣ, ಆರೋಗ್ಯ ಸುಧಾರಣೆ ಉದ್ದೇಶದಿಂದ ಈ ಪ್ರಾಯೋಜಕತ್ವ ಯೋಜನೆ ರೂಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ.

ಯೋಜನೆಯಡಿ ಅರ್ಹರಾದ ಮಕ್ಕಳಿಗೆ ಪ್ರತಿ ತಿಂಗಳು ₹ 4,000ದಂತೆ ಮೂರು ವರ್ಷಗಳವರೆಗೆ ಅಥವಾ 18 ವರ್ಷ ವಯಸ್ಸು ತುಂಬುವವರೆಗೆ (ಯಾವುದೂ ಮೊದಲು ಅದು) ಪಾವತಿ ಮಾಡಲಾಗುತ್ತಿದೆ. ಹಣವನ್ನು ಮಕ್ಕಳ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಇದರಿಂದಾಗಿ ಅರ್ಹ ಮಕ್ಕಳಿಗೆ ಸಂಪೂರ್ಣ ಪ್ರಮಾಣದಲ್ಲಿ ಹಣ ತಲುಪುತ್ತಿದೆ. ಈ ಹಣದಿಂದ ಮಕ್ಕಳು, ತಮ್ಮ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಖರ್ಚುಗಳನ್ನು ನಿಭಾಯಿಸಿಕೊಳ್ಳುತ್ತಿದ್ದಾರೆ.

‘ನಮ್ಮದು ಬಡ ಕುಟುಂಬ. ತಾಯಿ ಮಾತ್ರ ಇದ್ದು, ಕೂಲಿ ಮಾಡಿ ನನ್ನನ್ನು ಸಾಕುತ್ತಿದ್ದಾರೆ. ದುಡಿದ ಹಣ, ಊಟಕ್ಕೆ ಸಾಕಾಗುತ್ತಿತ್ತು. ಶಾಲೆಗೆ ಹಣ ಎಲ್ಲಿಂದ ತರುವುದೆಂದು ತಾಯಿ ಯೋಚಿಸುತ್ತಿದ್ದರು. ಇದೇ ಸಮಯದಲ್ಲಿ ಪ್ರಾಯೋಜಕತ್ವ ಯೋಜನೆ ಬಗ್ಗೆ ತಿಳಿಯಿತು. ಅರ್ಜಿ ಸಲ್ಲಿಸಿದ ನಂತರ, ಪ್ರತಿ ತಿಂಗಳು ₹ 4,000 ಬರುತ್ತಿದೆ. ಅದೇ ಹಣವನ್ನು ಬಳಸಿಕೊಂಡು ನಾನು ಶಾಲೆಗೆ ಹೋಗುತ್ತಿದ್ದೇನೆ. ಶಾಲೆ ಖರ್ಚು ನೋಡಿಕೊಳ್ಳುತ್ತಿದ್ದೇನೆ. ತಾಯಿ ಯಥಾಪ್ರಕಾರ ಕೂಲಿ ಕೆಲಸ ಮಾಡಿಕೊಂಡು ಮನೆ ನಡೆಸುತ್ತಿದ್ದಾರೆ’ ಹಾವೇರಿ ತಾಲ್ಲೂಕಿನ ಬಾಲಕಿಯೊಬ್ಬರು ಹೇಳಿದರು.

ಯಾರೆಲ್ಲ ಅರ್ಹರು: 2012ರಲ್ಲಿ ಕೇಂದ್ರ ಸರ್ಕಾರ ‘ಮಿಷನ್ ವಾತ್ಸಲ್ಯ’ ಅಡಿ ಹೊಸ ಮಾರ್ಗಸೂಚಿ ಹೊರಡಿಸಿ, ಪ್ರಾಯೋಜಕತ್ವ ಯೋಜನೆಯಲ್ಲಿ ತನ್ನ ಪಾಲು ಇರುವುದಾಗಿ ತಿಳಿಸಿದೆ. ಜೊತೆಗೆ, ಪ್ರಾಯೋಜಕತ್ವ ಯೋಜನೆಯನ್ನು ಜಾರಿಗೊಳಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅನುಮೋದನಾ ಸಮಿತಿಯನ್ನೂ ರಚಿಸಿದೆ. ಅದೇ ಸಮಿತಿ ಮೂಲಕ ಇದೀಗ ಫಲಾನುಭವಿಗಳ ಆಯ್ಕೆ ಅಂತಿಮವಾಗುತ್ತಿದೆ.

ವರ್ಷದ ಹಿಂದೆಯಷ್ಟೇ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ₹ 4 ಸಾವಿರ ಬರುತ್ತಿದ್ದು ಸಹಾಯವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರೊಬ್ಬರ ಮಗ

ಏಕ ಪೋಷಕ, ಅನಾಥ, ನಿರ್ಗತಿಕ ಮಕ್ಕಳು, ಭಿಕ್ಷೆ ಬೇಡುತ್ತಿರುವ ಮಕ್ಕಳು, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು, ಬಾಲಮಂದಿರಗಳಿಂದ ನಿರ್ಗಮಿತ ಮಕ್ಕಳು, ಜೈಲು ಶಿಕ್ಷೆಗೆ ಗುರಿಯಾದ ಹಾಗೂ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಯೋಜನೆಯ ಫಲಾನುಭವಿಗಳು.

‘ಮಕ್ಕಳು ಕುಟುಂಬದ ಜೊತೆ ಬದುಕಬೇಕು. ಅವರ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಸೇವನೆಗೆ ಹಣಕಾಸಿನ ತೊಂದರೆ ಉಂಟಾಗಬಾರದೆಂದು ಪ್ರಾಯೋಜಕತ್ವ ಯೋಜನೆ ಜಾರಿಗೆ ತರಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ಮಗು ಕೌಟುಂಬಿಕ ವಾತಾವರಣದಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಅರ್ಹ ಮಕ್ಕಳು ಯೋಜನೆ ಸದುಪಯೋಗಪಡೆದುಕೊಳ್ಳಬೇಕು
ಅನ್ನಪೂರ್ಣ ಸಂಗಳದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

‘ಯಾವ ಮಕ್ಕಳು ಯೋಜನೆಗೆ ಅರ್ಹರು ಎಂಬುದನ್ನು ತೀರ್ಮಾನಿಸಲು ನಿಯಮವಿದೆ. ಮಕ್ಕಳ ಕಲ್ಯಾಣ ಸಮಿತಿ ಆದೇಶದ ನಂತರ ಅನುಮೋದನಾ ಸಮಿತಿ, ಮಗುವಿನ ಸ್ಥಿತಿ–ಗತಿ ಆಧರಿಸಿ ಫಲಾನುಭವಿ ಎಂಬುದಾಗಿ ಆಯ್ಕೆ ಮಾಡುತ್ತದೆ. ಅದೇ ಮಗುವಿಗೆ ಪ್ರತಿ ತಿಂಗಳು ಹಣ ಸಂದಾಯವಾಗುತ್ತದೆ’ ಎಂದು ಹೇಳಿದರು.

‘ಜಿಲ್ಲಾಧಿಕಾರಿ ನೇತೃತ್ವದ ಅನುಮೋದನಾ ಸಮಿತಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಎನ್‌ಜಿಒ ಹಾಗೂ ಇತರರು ಇರುತ್ತಾರೆ’ ಎಂದು ತಿಳಿಸಿದರು.

ಮಕ್ಕಳಿಗಾಗಿ ಇರುವ ಇತರೆ ಯೋಜನೆಗಳು

  • ವಿಶೇಷ ಪಾಲನಾ; ಪ್ರತಿ ತಿಂಗಳು ₹ 1000 ನೀಡಲಾಗುತ್ತಿದೆ.

  • ಮುಖ್ಯಮಂತ್ರಿ ಬಾಲಸೇವಾ; ಕೋವಿಡ್‌ ಸಂದರ್ಭದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ₹ 3500 ನೀಡಲಾಗುತ್ತಿದೆ. ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಲ್ಯಾಪ್‌ಟಾಪ್ ವಿತರಣೆ

  • ಉಪಕಾರ ಯೋಜನೆ: ಬಾಲ ಮಂದಿರದಿಂದ ನಿರ್ಗಮಿತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲೆಂದು ಪ್ರತಿ ತಿಂಗಳು ₹ 5000 ಪಾವತಿಸಲಾಗುತ್ತಿದೆ.

  • ಪಿ.ಎಂ ಫಾರ್ ಕೇರ್: ಕೋವಿಡ್‌ ಸಂದರ್ಭದಲ್ಲಿ ತಂದೆ–ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು

ಯೋಜನೆ ಬಗ್ಗೆ ತಿಳಿಯಲು ಕರೆ ಮಾಡಿ ಮಕ್ಕಳ ಸಹಾಯವಾಣಿ– 1098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT