ಸೋಮವಾರ, ಜನವರಿ 24, 2022
21 °C
ಕಾಗಿನೆಲೆ ಮತ್ತು ಹಾವೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಗ್ರಾ.ಪಂ.ಗೆ 30 ಸೇವೆ ವರ್ಗಾವಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ/ ಬ್ಯಾಡಗಿ: ‘ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಕಚೇರಿಯಲ್ಲಿರುವ 30 ಸೇವೆಗಳನ್ನು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಿಮ್ಮ ಗ್ರಾಮ ಪಂಚಾಯಿತಿಯೇ ಕೊಡುವ ಅಧಿಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.  

ನಗರದ ಶಿವಶಕ್ತಿ ಪ್ಯಾಲೇಸ್‌ ಮತ್ತು ಕಾಗಿನೆಲೆಯ ಕನಕ ಸಭಾಭವನದಲ್ಲಿ ವಿಧಾನ ಪರಿಷತ್‌ ಚುನಾವಣಾ ಪ್ರಯುಕ್ತ ಸೋಮವಾರ  ಏರ್ಪಡಿಸಿದ್ದ ‘ಜನಪ್ರತಿನಿಧಿಗಳ ಸಭೆ’ಯಲ್ಲಿ ಅವರು ಮಾತನಾಡಿದರು. ಅಧಿಕಾರದ ವಿಕೇಂದ್ರೀಕರಣದ ಜೊತೆ ಆಡಳಿತದ ವಿಕೇಂದ್ರೀಕರಣ ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದರು. 

ನವೆಂಬರ್‌ನಲ್ಲಿ ಬಿದ್ದ ಮಳೆಗೆ ₹422 ಕೋಟಿ ಪರಿಹಾರ ನೀಡಿದ್ದೇವೆ. ಕೋವಿಡ್ ಸಂದರ್ಭದಲ್ಲಿಯೂ ರೈತರ ಕೈ ಹಿಡಿಯೋ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದ ಅವಧಿ 3 ತಿಂಗಳು ಇದ್ದಾಗ 3 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದರು. ಆದರೆ ಹಣವನ್ನೇ ಇಟ್ಟಿರಲಿಲ್ಲ ಎಂದು ಕುಟುಕಿದರು. ನಾನು ಆಕಾಶ ನೋಡಿ ಆಡಳಿತ ಮಾಡ್ತಿಲ್ಲ. ಭೂಮಿ ತಾಯಿಯನ್ನು ನೋಡಿ ನಾನು ಆಡಳಿತ ಮಾಡುತ್ತಿದ್ದೇನೆ ಎಂದರು. 

ವೃದ್ಧಾಪ್ಯ ವೇತನ, ವಿಧವಾ ವೇತನದ ಮಾಸಾಶನವನ್ನು ಹೆಚ್ಚಳ ಮಾಡಿದೆ. ಅಮೃತ ಯೋಜನೆಯಲ್ಲಿ ಸಮಗ್ರ ಗ್ರಾ.ಪಂ.ಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. 5 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇನೆ. ಬರುವ ದಿನಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಸೌಲಭ್ಯ ಕಲ್ಪಿಸಲಾಗುವುದು ಎಂದರು. 

7500 ಸ್ತ್ರೀ ಶಕ್ತಿ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಯುವಕರಿಗೆ ವಿಶೇಷವಾದ ಕೌಶಲ ತರಬೇತಿ ನೀಡಿ, ಉದ್ಯೋಗ ಪಡೆದುಕೊಳ್ಳಲು ಯೋಜನೆ ರೂಪಿಸಿದ್ದೇನೆ. ನಮ್ಮ ಸರ್ಕಾರ ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು. 

ಹಾವೇರಿಯಲ್ಲಿ ಮೆಡಿಕಲ್‌ ಕಾಲೇಜು ಕಾಮಗಾರಿ ನಡೆಯುತ್ತಿದ್ದು, ಮೊದಲನೇ ಹಂತದ ಕಟ್ಟಡ ಉದ್ಘಾಟನೆಯನ್ನು ವರ್ಷದೊಳಗೆ ಮಾಡಲಾಗುವುದು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರು ಮಾಡಿ, ವರ್ಷದೊಳಗೆ ಕಾರ್ಯಗತವಾಗುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ‘ವಿಧಾನ ಪರಿಷತ್‌ನಲ್ಲಿ ಬಹುಮತ ಸಿಕ್ಕರೆ ಮಸೂದೆಗಳು ಸರಳವಾಗಿ ಪಾಸ್‌ ಆಗುತ್ತವೆ. ಹೀಗಾಗಿ, 25 ಸ್ಥಾನಗಳಲ್ಲಿ 15ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. 45 ಸಾವಿರಕ್ಕಿಂತ ಹೆಚ್ಚು ಗ್ರಾ.ಪಂ. ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದಾರೆ. ಎಂಟು ಜಿಲ್ಲೆಗಳಲ್ಲೂ ಬಿಜೆಪಿ ಪರ ಅಲೆ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ’ ಎಂದರು. 

ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್, ಮಾಜಿ ಸಚಿವ ಶಿವರಾಜ ಸಜ್ಜನರ, ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇತರ ಮುಖಂಡರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು