‘ದಾಳಿ’ಯ ಬಿಸಿಗೆ ಮಂಜೂರಾಯಿತು ಸಬ್ಸಿಡಿ!

7
ಭ್ರಷ್ಟಾಚಾರದ ವಿರುದ್ಧ ಹೋರಾಡಿ ರೈತರಿಗೆ ಸಬ್ಸಿಡಿ ಕೊಡಿಸಿದ ಸಿಂಧೂರ, ತೋರಣಗಟ್ಟಿ

‘ದಾಳಿ’ಯ ಬಿಸಿಗೆ ಮಂಜೂರಾಯಿತು ಸಬ್ಸಿಡಿ!

Published:
Updated:

ಹಾವೇರಿ: ‘ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಇಲ್ಲ’ ಎಂದು ರೈತರು ಅಲವತ್ತು ಕೊಂಡರೂ, ಸಬ್ಸಿಡಿ ಬಿಡುಗಡೆ ಮಾಡದ ಹಾನಗಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ‘ದಾಳಿ’ ಬಳಿಕ 257 ರೈತರ ₹1.06 ಕೋಟಿ ಬಿಡುಗಡೆ ಮಾಡಿದ್ದಾರೆ. ದಾಳಿ ಪ್ರಭಾವಕ್ಕೆ ಜಿಲ್ಲೆಯ ಇತರ ಕಡೆಯ ಸಬ್ಸಿಡಿ ಹಣವೂ ಲಂಚ ಇಲ್ಲದೇ ಬಿಡುಗಡೆ ಆಗುತ್ತಿದೆ.

ಪ್ರಕರಣ: ಹಾನಗಲ್‌ನ ಡೀಲರ್ ವೀರಣ್ಣ ಸಿಂಧೂರ, 2016–17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ರೈತರಿಗೆ ಸರ್ಕಾರದ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ನೀಡಿದ್ದರು. ಈ ಸಬ್ಸಿಡಿ ಬಿಡುಗಡೆ ಮಾಡಲು ಅಂದಿನ ಸಹಾಯಕ ಕೃಷಿ ನಿರ್ದೇಶಕ ಡಾ. ಜಿ.ಬಸವರಾಜ ₹2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಸತತ ಬರಗಾಲವಿದ್ದು, ಬಡ– ಪರಿಶಿಷ್ಟ ರೈತರಿಂದ ಹಣ ಸಂಗ್ರಹಿಸಿ ನೀಡಲು ಸಾಧ್ಯವಿಲ್ಲ ಎಂದು ಸಿಂಧೂರ ನಿರಾಕರಿಸಿದ್ದರು. ಆದರೆ, ಹಣ ಕೊಡದೇ ಕಡತಕ್ಕೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ಆ ಅಧಿಕಾರಿ ಪಟ್ಟು ಹಿಡಿದಿದ್ದರು.

‘ನಾನು, ಬ್ಯಾಂಕ್ ಸಾಲ ಮಾಡಿ ಡೀಲರ್‌ಶಿಪ್‌ ಪಡೆದುಕೊಂಡಿದ್ದೆ. ಸತತ ಬರದಿಂದ ರೈತರೂ ಸಂಕಷ್ಟದಲ್ಲಿದ್ದರು. ಲಂಚ ನೀಡುವುದು ಅಸಾಧ್ಯ
ವಾಗಿತ್ತು. ಇತ್ತ ಬ್ಯಾಂಕ್ ಬಡ್ಡಿ ದಿನೇ ದಿನೇ ಹೆಚ್ಚಾಗುತ್ತಿತ್ತು. ರೈತರಿಗೂ ಕೈಸಾಲ. ನಮಗೆ ದಿಕ್ಕೇ ತೋಚದಾಯಿತು’ ಎಂದು ಸಿಂಧೂರ ಆ ದಿನಗಳನ್ನು ನೆನೆದರು.

‘ಒಂದು ದಿನ, ನಾನು ಮತ್ತು ರೈತರು ಅಧಿಕಾರಿ ಕಚೇರಿಗೆ ಹೋದೆವು. ನಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಇಲ್ಲ. ದಯವಿಟ್ಟು ಸಬ್ಸಿಡಿ ಮಂಜೂರು ಮಾಡಿ. ಜೀವ ಉಳಿಸಿ ಎಂದು ಅಲವತ್ತುಕೊಂಡೆವು. ಆದರೂ, ಕ್ಯಾರೇ ಎನ್ನಲಿಲ್ಲ’ ಎನ್ನುವಾಗ ಅವರ ಕಣ್ಣಾಲಿಗಳು ತೇವಗೊಂಡವು.

ಅವರ ಮಾತನ್ನು, ಅವರೊಂದಿಗಿದ್ದ ಡೀಲರ್‌ ಸಂಜಯ್‌ ಬಾಬುಸಾಹೇಬ ತೋರಣಗಟ್ಟಿ ಮುಂದುವರಿಸಿದರು.

‘ಆ ನೋವು ಹೇಳತೀರಲಾಗದು. ಹಣ ಮಾತ್ರವಲ್ಲ ಇನ್ನಷ್ಟು ಬೇಡಿಕೆಗಳನ್ನೂ ಪೂರೈಸಬೇಕಿತ್ತು. ಆದರೆ, ಆತ್ಮಹತ್ಯೆ ನಿರ್ಧಾರ ಬಿಟ್ಟು, ಎಸಿಬಿಗೆ ದೂರು ನೀಡಲು ನಿರ್ಧರಿಸಿದೆವು’ ಎಂದು ತಿಳಿಸಿದರು.

ಕೊನೆಗೂ, ಅವರು ಹಾವೇರಿಯ ಎಸಿಬಿ ಡಿವೈಎಸ್ಪಿ ಎಸ್‌.ಕೆ. ಪ್ರಹ್ಲಾದ್ ಹಾಗೂ ಇನ್‌ಸ್ಪೆಕ್ಟರ್ ಬಿ.ಕೆ. ಹಳಬಣ್ಣನವರ ಅವರನ್ನು ಭೇಟಿಯಾಗಿ, ಜನವರಿ 10ರಂದು ದೂರು ದಾಖಲಿಸಿದರು.

ಎಸಿಬಿ ಅಧಿಕಾರಿಗಳು, ಈ ದೂರನ್ನು ರಹಸ್ಯವಾಗಿಟ್ಟುಕೊಂಡರು. ಫೆಬ್ರುವರಿ 6ರಂದು ಬಲೆ ಬೀಸಿದಾಗ, ದೂರಿನ ಹೊರತಾಗಿಯೂ 257 ರೈತರ ಸಬ್ಸಿಡಿ ಬಾಕಿ ಇರುವುದು ಅವರ ಗಮನಕ್ಕೆ ಬಂತು. ಅಲ್ಲದೆ, ಇತರ ಕಡತಗಳನ್ನೂ ಇಲಾಖೆಯು ವಾರದೊಳಗೆ ವಿಲೇವಾರಿ ಮಾಡಿತು.

ಒಂದು ದಾಳಿಯಿಂದಾಗಿ ಜಿಲ್ಲೆಯ ಹಲವಾರು ಡೀಲರ್‌ಗಳು ಹಾಗೂ ರೈತರ ಸಬ್ಸಿಡಿ ಮಂಜೂರಾಯಿತು. ಸುಮಾರು 930 ರೈತರು ಹಾಗೂ ಇತರ ಡೀಲರ್‌ಗಳು ಕರೆ ಮಾಡಿ ತಮ್ಮನ್ನು ಅಭಿನಂದಿಸಿದರು ಎಂದು ಸಿಂಧೂರ ಅವರು ಹೇಳುವಾಗ, ಭ್ರಷ್ಟಾಚಾರದ ವಿರುದ್ಧ ಹೋರಾಡಿ ಗೆದ್ದ ಖುಷಿ, ಹೆಮ್ಮೆ ಇತ್ತು.

ಲಂಚದ ವಿರುದ್ಧ #ಮೀ– ಟೂ’

ಲಂಚಬಾಕರ ವಿರುದ್ಧವೂ #ಮೀ– ಟೂ ಅಭಿಯಾನ ಶುರು ಮಾಡಬೇಕು. ಆಗ, ರೈತರ ಆತ್ಮಹತ್ಯೆ ಕಡಿಮೆಯಾಗಿ, ಸಮಾಜ ಸುಧಾರಣೆ ಕಾಣಲು ಸಾಧ್ಯ ಎನ್ನುತ್ತಾರೆ ದೂರು ನೀಡಲು ನೆರವಾದ ಹಾನಗಲ್‌ನ ಸಂಜಯ್ ಬಾಬುಸಾಹೇಬ ತೋರಣಗಟ್ಟಿ ಹಾಗೂ ದೂರುದಾರ ವೀರಣ್ಣ ಸಿಂಧೂರ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !