ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜನ- ಜಾನುವಾರು ರಕ್ಷಣೆಗೆ ಮುಂದಾಗಿ

ಅತಿವೃಷ್ಟಿ ಮತ್ತು ಪ್ರವಾಹ: ಜಿಲ್ಲಾಡಳಿತಗಳೊಂದಿಗೆ ಸಿ.ಎಂ. ವಿಡಿಯೊ ಸಂವಾದ
Last Updated 19 ಜೂನ್ 2021, 13:43 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗುವ ಹಾನಿ ಕಡಿಮೆಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳು ಪ್ರಯತ್ನಗಳನ್ನು ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ತಂಡಗಳನ್ನು ರಚಿಸಿ ಜನ- ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಿ’ ಎಂದು ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದರು.

ಪ್ರವಾಹ ಸಿದ್ಧತೆ ಕುರಿತಂತೆ ಹಾವೇರಿ ಸೇರಿದಂತೆ ರಾಜ್ಯದ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಶನಿವಾರ ನಡೆದ ‘ವಿಡಿಯೊ ಸಂವಾದ’ದಲ್ಲಿ ಅವರು ಮಾತನಾಡಿದರು.

ತಾತ್ಕಾಲಿಕ ಪುರ್ನವಸತಿ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಸ್ಥಾಪನೆ, ದೂರವಾಣಿ ಸಂಪರ್ಕ ಸುಸ್ಥಿರತೆ ಬಗ್ಗೆ ಕ್ರಮವಹಿಸಬೇಕು. ಪ್ರವಾಹ ಸಂದರ್ಭದಲ್ಲಿ ಅಗತ್ಯ ಮೂಲಸೌಕರ್ಯ, ಕಾಳಜಿ ಕೇಂದ್ರ, ವೈದ್ಯಕೀಯ ಸೌಲಭ್ಯದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ 1,710 ಪ್ರವಾಹಪೀಡಿತ ಗ್ರಾಮಗಳನ್ನು ಗುರುತಿಸಲಾಗಿದೆ. ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಅಗತ್ಯ ಸಂದರ್ಭದಲ್ಲಿ ಜಿಲ್ಲೆಗಳ ನೆರವಿಗಾಗಿ ಕಳುಹಿಸಿಕೊಡಲಾಗುವುದು. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮೊದಲಿನಂತೆ ಪೂರ್ಣ ಹಾಗೂ ಭಾಗಶಃ ಮನೆಹಾನಿಗೆ ಸಹಾಯಧನ ವ್ಯವಸ್ಥೆ ಮುಂದುವರಿಸಲಾಗಿದೆ ಎಂದರು.

141 ಗ್ರಾಮ ಗುರುತು:ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ, ಕುಮದ್ವತಿ ನದಿ ಪಾತ್ರದ ಗ್ರಾಮಗಳು ಒಳಗೊಂಡಂತೆ 141 ಗ್ರಾಮಗಳನ್ನು ಪ್ರವಾಹಪೀಡಿತ ಎಂದು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಮುಂಚಿತವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸಿಕೊಳ್ಳಲಾಗುವುದು. ಈಗಾಗಲೇ ಎಂಟು ಗೋಶಾಲೆಗಳನ್ನು ತೆರೆಯಲು ಕಟ್ಟಡಗಳನ್ನು ಸಹ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದರು.

28 ಮನೆಗಳಿಗೆ ಭಾಗಶಃ ಹಾನಿ

ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆಗಿಂತ ಪ್ರತಿಶತ ಶೇ 53.07ರಷ್ಟು ಮಳೆ ಹೆಚ್ಚು ದಾಖಲಾಗಿದೆ. ಮುಂಗಾರಿನಲ್ಲಿ (ಜೂನ್ 1ರಿಂದ 18ರವರೆಗೆ) ಶೇ 22.05ರಷ್ಟು ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆಗೆ 28 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಐದು ಹೆಕ್ಟೇರ್ ತೋಟಗಾರಿಕೆ ಕ್ಷೇತ್ರ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದರು.

ಅಗತ್ಯ ಸಂದರ್ಭದಲ್ಲಿ ಆಡಳಿತ ನೆರವಿಗಾಗಿ ಜಿಲ್ಲೆಯಲ್ಲಿ ವಿಪತ್ತು ಸಂದರ್ಭದ ನೆರವಿಗಾಗಿ 20-ಎನ್.ಜಿ.ಒ, 149 ಸ್ವಯಂ ಸೇವಕರು, 31 ಹಾವು ಹಿಡಿಯುವವರು ಹಾಗೂ 76 ಈಜುಗಾರರನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಎಸ್ಪಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ್, ಜಿಲ್ಲಾ ಯೋಜನಾ ನಿರ್ದೇಶಕ ವಿರಕ್ತಿಮಠ, ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT