ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್‌ ನಿರ್ಮೂಲನೆಗೆ ಸಂಕಲ್ಪ ಮಾಡಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ
Last Updated 1 ಡಿಸೆಂಬರ್ 2020, 14:27 IST
ಅಕ್ಷರ ಗಾತ್ರ

ಹಾವೇರಿ: ‘ಪೋಲಿಯೊ ಮುಕ್ತ ಭಾರತದ ಮಾದರಿಯಲ್ಲಿ ನಿರಂತರ ಪರಿಶ್ರಮದಿಂದ ‘ಏಡ್ಸ್ ಮುಕ್ತ ಭಾರತ’ ಮಾಡಲು ಸಾಧ್ಯ. ಯುವಜನತೆಗೆ ಹಾಗೂ ಸಮುದಾಯದಲ್ಲಿ ಏಡ್ಸ್ ಕುರಿತು ತಿಳಿವಳಿಕೆ ನೀಡುವ ಮೂಲಕ ಏಡ್ಸ್ ಹರಡುವುದನ್ನು ತಡೆಗಟ್ಟಬಹುದು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಸ್ಪತ್ರೆ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಹಾಗೂ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘18 ವರ್ಷಗಳ ಏಡ್ಸ್ ವರದಿ ನೋಡಿದರೆ ಈಗ ಇಳಿಮುಖವಾಗಿದೆ. ಏಡ್ಸ್ ಸೋಂಕಿತರಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸಮಾಜದಲ್ಲಿ ಏಡ್ಸ್ ಬಗ್ಗೆ ತಿಳಿವಳಿಕೆ ಕಡಿಮೆ ಇರುವುದರಿಂದ ಏಡ್ಸ್ ಹರಡುವುದನ್ನು ತಡೆಯುವುದು ಅಸಾಧ್ಯವಾಗಿದೆ. ಸಾರ್ವಜನಿಕರಿಗೆ ಮನದಟ್ಟಾಗುವಂತೆ ಜಾಗೃತಿ ಮೂಡಿಸುವ ಮೂಲಕ ಏಡ್ಸ್ ನಿರ್ಮೂಲನೆಗೆ ನಾವು ನೀವು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಎಚ್.ಐ.ವಿ.ಸೋಂಕಿತ ಸಂಖ್ಯೆ 2015ಕ್ಕೆ ಹೋಲಿಸಿದರೆ ಶೇ 31ರಷ್ಟು ಕಡಿಮೆಯಾಗಿದೆ. ಎಚ್.ಐ.ವಿ.ಸೋಂಕಿತರ ಪ್ರಮಾಣ ಶೇ 99ರಷ್ಟು ಕಡಿಮೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಅನೇಕ ಸವಾಲುಗಳ ನಡುವೆ ಸಾಕಷ್ಟು ಸಾಧನೆ ಮಾಡಲಾಗಿದೆ. 2030ರ ವೇಳೆಗೆ ಏಡ್ಸ್ ನಿರ್ಮೂಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಗುರಿ ಹಾಕಿಕೊಂಡಿದೆ’ ಎಂದು ಹೇಳಿದರು.

ನಿಮ್ಮ ಮನೆ ಬಾಗಿಲಿಗೆ ಬರುವ ಆಶಾ, ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸಹಕರಿಸಿ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.

ಎಚ್.ಐ.ವಿ.ಏಡ್ಸ್ ತಡೆಗೆ ಶ್ರಮಿಸಿದ ಆರೋಗ್ಯ ಇಲಾಖೆಯ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ರಕ್ತನಿಧಿ ಘಟಕದ ಅಧಿಕಾರಿ ಬಸವರಾಜ, ವಿನಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT