ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ನಿರುದ್ಯೋಗಿಗಳಿಗೆ ನೌಕರಿ ನೀಡುವ ಗುರಿ

ಫೆ.14ರಂದು ಉದ್ಯೋಗ ಮೇಳ: ಶಾಸಕ ನೆಹರು ಓಲೇಕಾರ ಹೇಳಿಕೆ
Last Updated 7 ಫೆಬ್ರುವರಿ 2023, 15:22 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಫೆ.14ರಂದು ನಗರದ ಪಿ.ಬಿ.ರಸ್ತೆಯಲ್ಲಿರುವ ಜೆ.ಪಿ.ರೋಟರಿ ಶಾಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ವರಿಗೂ ಉದ್ಯೋಗ ನೀಡುವ ಅಂಗವಾಗಿ ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಫೆ.14ರಂದು ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೆ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಇದುವರೆಗೆ 64 ಉದ್ಯೋಗದಾತರನ್ನು ಸಂಪರ್ಕಿಸಿದ್ದು, ಇದರಲ್ಲಿ 10 ಕಂಪನಿಯವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಈಗಾಗಲೇ ಸುಮಾರು 2 ಸಾವಿರ ಉದ್ಯೋಗಾಕಾಂಕ್ಷಿಗಳ ಮಾಹಿತಿ ಕಲೆ ಹಾಕಲಾಗಿದ್ದು, 800ಕ್ಕಿಂತಲೂ ಅಧಿಕ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಉದ್ಯೋಗ ಮೇಳದ ಮೂಲಕ ಸುಮಾರು 500 ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

‌ಪ್ರತಿವರ್ಷ ಸರ್ಕಾರ ಉದ್ಯೋಗ ಮೇಳೆ ಆಯೋಜಿಸಿ ಯುವಕ-ಯುವತಿಯರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಕೆಲಸ ಮಾಡುತ್ತಿದೆ. ಕೌಶಲ ಹೊಂದಿದ ಯುವಕ-ಯುವತಿಯರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಹಿಂದೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಅನೇಕ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿದರೂ ಕೂಡ ಅವರು ಬೆಂಗಳೂರು, ಮಂಗಳೂರು ಸೇರಿದಂತೆ ಮಹಾನಗರಗಳಿಗೆ ತೆರಳಲು ಹಿಂದೇಟು ಹಾಕಿದ್ದರಿಂದ ಭಾಗಶಃ ಉದ್ಯೋಗ ಮೇಳ ಯಶಸ್ವಿಯಾಗಿಲ್ಲ. ಈ ಹಿನ್ನೆಲೆ ಈ ಬಾರಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಯುವಕ-ಯುವತಿಯರು ಉದ್ಯೋಗ ಸಿಕ್ಕಿದರೆ ಬೇರೆ ಸ್ಥಳಗಳಿಗೆ ಹೋಗಿ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ದಿನೇಶ, ಉದ್ಯೋಗ ಮೇಳದ ವ್ಯವಸ್ಥಾಪಕ ಸಂಜಯ ಕಲಾರೆ, ನಗರಸಭೆ ಸದಸ್ಯರು ಇದ್ದರು.

ನೋಡಲ್‌ ಅಧಿಕಾರಿಗಳ ನೇಮಕ

ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾವೇರಿ ಮಾಹಿತಿ ನೀಡಿ, ಈಗಾಗಲೇ ಸಿಲ್ಕ್ ಕನೆಕ್ಟ್ ಪೋರ್ಟಲ್ ಮೂಲಕ ಉದ್ಯೋಗಾಕಾಂಕ್ಷಿಗಳ ಹಾಗೂ ಉದ್ಯೋಗದಾತರ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ಜೊತೆಗೆ ಸ್ಥಳೀಯ ಡಾಟಾ ಲಭ್ಯತೆ ಅನುಗುಣವಾಗಿ ಪ್ರತ್ಯೇಕವಾದ ಗೂಗಲ್ ಫಾರಂ ತಯಾರಿಸಲಾಗುತ್ತಿದೆ. ಅಲ್ಲದೇ ಈ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಶಿಗ್ಗಾವಿ ತಾಲೂಕಿಗೆ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯಿತಿ ಹಾವೇರಿ (ಮೊ.9740090877), ಸವಣೂರು-ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾವೇರಿ (ಮೊ.9886660847), ರಾಣೆಬೆನ್ನೂರು-ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಹಾವೇರಿ(ಮೊ.9448826871), ಬ್ಯಾಡಗಿ-ಜಂಟಿ ನಿರ್ದೇಶಕರು ನಿಡಾಕ್(ಮೊ.9845145541), ಹಿರೇಕೆರೂರು ಹಾಗೂ ರಟ್ಟೀಹಳ್ಳಿ-ಜಂಟಿ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ(ಮೊ.9448136862), ಹಾವೇರಿ-ಜಿಲ್ಲಾ ಕಾರ್ಮಿಕ ಅಧಿಕಾರಿಗಳು(ಮೊ.9448765102), ಹಾನಗಲ್ಲ-ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು(ಮೊ.9632390018) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT