ಭಾನುವಾರ, ಫೆಬ್ರವರಿ 23, 2020
19 °C
ಅಕ್ಕಿಆಲೂರಿನಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕವೇ ಇಲ್ಲ; ಪ್ರತಿ ವಾರ್ಡ್‌ ಸಭೆಯಲ್ಲೂ ಕಸ ಸಮಸ್ಯೆಯ ಸದ್ದು

ಎಲ್ಲೆಂದರಲ್ಲಿ ಕಸದ ರಾಶಿ: ಸಾಂಕ್ರಾಮಿಕ ರೋಗದ ಭೀತಿ

ಸುರೇಖಾ ಪೂಜಾರ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ಅವಿಭಜಿತ ಧಾರವಾಡ ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯ್ತಿಗಳಲ್ಲಿ ಒಂದೆನಿಸಿರುವ ಅಕ್ಕಿಆಲೂರಿನಲ್ಲಿ ನಿತ್ಯ ಹತ್ತಾರು ಟನ್‌ಗಳಷ್ಟು ತ್ಯಾಜ್ಯ ಸಂಗ್ರಹಗೊಳ್ಳುತ್ತಿದೆ. ಆದರೂ ಕೂಡ ಗ್ರಾಮ ಪಂಚಾಯ್ತಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕ್ರಮ ಅನುಸರಿಸುತ್ತಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.

ಪ್ರತಿದಿನ ಊರು ಬೆಳೆಯುತ್ತಿದ್ದು, 3,400ಕ್ಕೂ ಹೆಚ್ಚು ಮನೆಗಳವೆ. ಅಲ್ಲದೆ, ಇಲ್ಲಿನ ಜನಸಂಖ್ಯೆ 20 ಸಾವಿರದ ಗಡಿ ದಾಟಿದೆ. ಅದೇ ರೀತಿ ನಿತ್ಯ ತ್ಯಾಜ್ಯ ಸಂಗ್ರಹವೂ ಹೆಚ್ಚುತ್ತಿದೆ. ಎಲ್ಲ ಪ್ರದೇಶದಿಂದ ನಿತ್ಯ ಕನಿಷ್ಠ 10 ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ.

ಮೊದಲು ತ್ಯಾಜ್ಯ ಸಂಗ್ರಹಿಸಲು ಎತ್ತಿನಬಂಡಿ ಬಳಕೆ ಮಾಡಲಾಗುತ್ತಿತ್ತು. ಆದರೆ, ಈಗ ತ್ಯಾಜ್ಯ ಶೇಖರಣೆ ಪ್ರಮಾಣ ಹೆಚ್ಚಾಗಿರುವುದರಿಂದ ಎತ್ತಿನ ಬಂಡಿ ಬದಲಿಗೆ ಟ್ರಾಕ್ಟರ್‌ ಬಳಸಲಾಗುತ್ತಿದೆ. ಪ್ರಮುಖ ಸಾರ್ವಜನಿಕ ಸ್ಥಳ, ರಸ್ತೆ, ಬೀದಿ, ಬಡಾವಣೆಗಳಲ್ಲಿ ಟ್ರಾಕ್ಟರ್‌ ಮೂಲಕ ಸಂಚರಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ ಸಂಗ್ರಹಗೊಂಡ ಸೂಕ್ತ ವಿಲೇವಾರಿಯಾಗುತ್ತಿಲ್ಲ. 

ಪ್ರತಿ ಮಂಗಳವಾರಕ್ಕೊಮ್ಮೆ ಇಲ್ಲಿ ವಾರದ ಸಂತೆ ನಡೆಯುತ್ತಿದ್ದು, ಸಂತೆಯ ಮರುದಿನ 25 ಟನ್‍ಗಳಿಗೂ ಹೆಚ್ಚು ತ್ಯಾಜ್ಯ ಸಂಗ್ರಹಗೊಳ್ಳುತ್ತದೆ. ಇದುವರೆಗೂ ಸಹ ಇಲ್ಲಿ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಕಾರ್ಯ ನಡೆಯದೇ ಇರುವುದು ‘ಸ್ವಚ್ಛ ಭಾರತ ಅಭಿಯಾನ’ ವಿಫಲವಾಗಿರುವುದಕ್ಕೆ ಕೈಗನ್ನಡಿಯಾಗಿದೆ.

ಘನತ್ಯಾಜ್ಯ ನಿರ್ವಹಣಾ ಘಟಕವೇ ಇಲ್ಲ!

ಟ್ರಾಕ್ಟರ್‌ ಮೂಲಕ ತ್ಯಾಜ್ಯ ಸಂಗ್ರಹಿಸುವ ಗ್ರಾಮ ಪಂಚಾಯ್ತಿ ಸಿಬ್ಬಂದಿ ಅದನ್ನು ಕಲ್ಲಾಪುರ ರಸ್ತೆಯ ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪಕ್ಕದಲ್ಲಿ ಎಸೆದು ಕೈತೊಳೆದುಕೊಳ್ಳುತ್ತಿದ್ದಾರೆ.

10-15 ವರ್ಷಗಳ ಅವಧಿಯಲ್ಲಿ ತ್ಯಾಜ್ಯ ಸಂಗ್ರಹ ಪ್ರಮಾಣ ಅಧಿಕಗೊಂಡಿದ್ದರೂ ಕೂಡ ಅಧಿಕಾರಿಗಳು, ಜನಪ್ರತಿನಿಧಿಗಳು ಘನತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಘಟಕದ ಅವಶ್ಯವನ್ನು ಮನಗಾಣದಿರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೈಜ್ಞಾನಿಕ ಘಟಕದ ಬಗ್ಗೆ ಸ್ವಲ್ಪವೂ ಆಲೋಚನೆ ಮಾಡದಿರುವುದು ವಿಪರ್ಯಾಸ ಎನ್ನುತ್ತಾರೆ ನಿವಾಸಿ ರವಿ ಹಿರೇಮಠ.  

ಜಾಗದ ಸಮಸ್ಯೆ

ಕಸ ವಿಲೇವಾರಿಗೆ ಘಟಕ ಸ್ಥಾಪಿಸಲು ಇಲ್ಲಿ ಜಾಗದ ಸಮಸ್ಯೆ ಕಾಡುತ್ತಿದೆ. ಇದುವರೆಗೂ ಕೂಡ ಸೂಕ್ತ ಜಾಗ ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪಂಚಾಯ್ತಿ ಆಡಳಿತ ಮಂಡಳಿ ಸಭೆಯಲ್ಲಿ ಸೂಕ್ತ ಸ್ಥಳಾವಕಾಶಕ್ಕೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಕೂಡ ಮನವಿಗೆ ಸ್ಪಂದನೆ ದೊರೆತಿಲ್ಲ. ಜಾಗದ ಸಮಸ್ಯೆ ಮುಂದಿಟ್ಟುಕೊಂಡು ಘಟಕ ಸ್ಥಾಪನೆಗೆ ಪಂಚಾಯ್ತಿ ಹಿಂದೇಟು ಹಾಕುತ್ತಿದೆ ಎಂಬುದು ಪರಶುರಾಮ್‌ ತೇರದಾಳ ಸೇರಿದಂತೆ ಹಲವು ಮುಖಂಡರ ಆರೋಪ. 

ಸಾಂಕ್ರಾಮಿಕ ರೋಗಗಳಿಗೆ ರಹದಾರಿ

ಘನ ಮತ್ತು ದ್ರವ ರೂಪದ ತ್ಯಾಜ್ಯ, ಪ್ರಾಣಿಗಳ ಮೃತದೇಹಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅಪಾಯ ತಪ್ಪಿದ್ದಲ್ಲ. ಘನ ಮತ್ತು ದ್ರವ ರೂಪದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವ ಅಗತ್ಯವನ್ನು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಮನಗಾಣಬೇಕಿದೆ. ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದು ಹರಡುವುದರಿಂದ ದುರ್ವಾಸನೆ ಬೀರಿ ಸೊಳ್ಳೆ, ನೊಣಗಳ ಕಾಟ ಅಧಿಕಗೊಳ್ಳುವ ಭೀತಿ ಇದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ. 

ತ್ಯಾಜ್ಯ ಎಸೆಯಲು ಪರ್ಯಾಯ ಸ್ಥಳ ಆವಿಷ್ಕರಿಸುವ ಬದಲಿಗೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಘಟಕ ಸ್ಥಾಪಿಸುವ ಅಗತ್ಯತೆಯ ಬಗ್ಗೆ ಗಂಭೀರ ಆಲೋಚನೆ ನಡೆಸಬೇಕಿದೆ. ಜನವಸತಿಯಿಂದ ದೂರ ಇರುವ ನಿರ್ಜನ ಪ್ರದೇಶ ಗುರುತಿಸಿ ಆ ಸ್ಥಳದಲ್ಲಿ ಘಟಕ ಸ್ಥಾಪಿಸಿ, ಅಲ್ಲಿ ತ್ಯಾಜ್ಯ ವಿಲೇವಾರಿಗೆ ಮುಂದಾದರೆ ಜನ ನಿಟ್ಟುಸಿರು ಬಿಡಲಿದ್ದಾರೆ.

ಆದಾಯಕ್ಕೂ ಮಾರ್ಗ

ರಾಜ್ಯದ ಕೆಲ ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳು ವೈಜ್ಞಾನಿಕ ವಿಧಾನದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಅದರಿಂದ ಸಾಕಷ್ಟು ಆದಾಯ ಗಳಿಸುತ್ತಿವೆ. ಅಂಥ ವಿಧಾನ ಅನುಷ್ಠಾನಗೊಳಿಸುವಲ್ಲಿ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಆಲೋಚಿಸ ಬೇಕಿದೆ. ಪ್ರತಿ ಬಾರಿ ಇಲ್ಲಿ ವಾರ್ಡ್‌ ಸಭೆ, ಗ್ರಾಮ ಸಭೆಗಳು ನಡೆದಾಗಲೆಲ್ಲಾ ತ್ಯಾಜ್ಯ ವಿಲೇವಾರಿ ಸದ್ದು ಮಾಡುತ್ತಿದ್ದರೂ ಕೂಡ ಜವಾಬ್ದಾರಿ ಸ್ಥಾನದಲ್ಲಿರುವರು ಮಾತ್ರ ಕಿವಿಗೊಡದಿರುವುದು ನೋವಿನ ಸಂಗತಿ ಎನ್ನುತ್ತಾರೆ ನಿವಾಸಿ ಶಿವಕುಮಾರ ಪಾಟೀಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು