ಭಾನುವಾರ, ಸೆಪ್ಟೆಂಬರ್ 19, 2021
26 °C
ಕೋವಿಡ್‌ ಸೇವಾ ವರದಿಯ ಕಿರು ಪುಸ್ತಕ ಬಿಡುಗಡೆ ಮಾಡಿದ ಶಾಸಕ ನೆಹರು ಓಲೇಕಾರ

ಸೇವಾ ಭಾರತಿಗೆ ಆಂಬುಲೆನ್ಸ್‌ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್‌ ಎರಡನೇ ಅಲೆಯಲ್ಲಿ ಸೇವಾಭಾರತಿ ಟ್ರಸ್ಟ್‌ ಮತ್ತು ಬಹದ್ದೂರ್‌ ದೇಸಾಯಿ ಮೋಟಾರ್ಸ್‌ ಸಹಯೋಗದಲ್ಲಿ 2661 ಸೋಂಕಿತರ ಕುಟುಂಬಕ್ಕೆ ಊಟದ ವ್ಯವಸ್ಥೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಮಾಡಿದ್ದೇವೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸೇವಾಭಾರತಿ ಟ್ರಸ್ಟ್‌ನ ಸೇವಾ ಕಾರ್ಯಗಳ ಕುರಿತ ‘ಕಿರು ಪುಸ್ತಕ’ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ನಂತರ ಶಾಸಕರ ಅನುದಾನದಲ್ಲಿ ₹15 ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಆಂಬುಲೆನ್ಸ್‌ ಅನ್ನು ಸೇವಾ ಭಾರತಿ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಗೂ ಒಂದು ಆಂಬುಲೆನ್ಸ್‌ ನೀಡಲಿದ್ದೇವೆ ಎಂದು ಓಲೇಕಾರ ಭರವಸೆ ನೀಡಿದರು.

ಸೋಂಕಿತರ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರತಿದಿನ ಗಣ್ಯ ವ್ಯಕ್ತಿಗಳೊಂದಿಗೆ ಅಡಿಯೊ–ವಿಡಿಯೊ ಸಂವಾದ, ಅವಶ್ಯಕತೆ ಇದ್ದ 1115 ಮಂದಿಗೆ ಉಪಾಹಾರಾದ ವ್ಯವಸ್ಥೆ, 215 ಮಂದಿಗೆ ವೈದ್ಯರೊಂದಿಗೆ ಆನ್‌ಲೈನ್‌ ಕನ್ಸಲ್ಟೇಷನ್‌, 120 ಪ್ರೀ ಕೋವಿಡ್‌ ಕಿಟ್‌, 450 ಪೋಸ್ಟ್‌ ಕೋವಿಡ್‌ ಕಿಟ್‌, 65 ಪಲ್ಸ್‌ ಆಕ್ಸಿ ಮೀಟರ್‌ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳಿದರು.

ಕೋವಿಡ್‌ನಂಥ ಸಂಕಷ್ಟ ಕಾಲದಲ್ಲಿ ಸಹಾಯವಾಣಿ ಆರಂಭಿಸಿ, ಆಕ್ಸಿಜನ್‌ ಸೌಲಭ್ಯವುಳ್ಳ ಹಾಸಿಗೆ, ಆಂಬುಲೆನ್ಸ್‌, ಅಂತ್ಯಸಂಸ್ಕಾರಕ್ಕೆ ನೆರವು ಹಾಗೂ ಇತರೆ ಸೌಲಭ್ಯವನ್ನು ನೀಡಿದ್ದೇವೆ. ಹೋಂ ಐಸೋಲೇಷನ್‌ನಲ್ಲಿದ್ದ 49 ಸೋಂಕಿತರಿಗೆ ಅವರ ಮನೆಗಳಿಗೆ ಹೋಗಿ ವೈದ್ಯಕೀಯ ನೆರವು ನೀಡಲಾಗಿದೆ. ಸೋಂಕಿತರ ಆತ್ಮಸ್ಥೈರ್ಯ ಹೆಚ್ಚಿಸಲು ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದೆವು. ಸೇವಾ ಭಾರತಿ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ವಿವರಿಸಿದರು.

ಬಹದ್ದೂರ್‌ ದೇಸಾಯಿ ಮೋಟಾರ್ಸ್‌ ಮಾಲೀಕ ಪವನ್‌ ದೇಸಾಯಿ ಮಾತನಾಡಿ, ‘ನಮ್ಮೊಂದಿಗೆ ಸಂಪರ್ಕದಲ್ಲಿದ್ದ ಯಾವುದೇ ಸೋಂಕಿತರು ಆಸ್ಪತ್ರೆಯ ಅವಶ್ಯಕತೆಯಿಲ್ಲದೆ, ಮನೆಯಲ್ಲೇ ಗುಣಮುಖರಾಗಿದ್ದಾರೆ. ಎಲ್ಲ ಸೇವೆಗಳು ಉಚಿತವಾಗಿ ಒದಗಿಸಿದ್ದರಿಂದ ಸೋಂಕಿತರಿಗೆ ಆರ್ಥಿಕ ಹೊರೆ ಬಿದ್ದಿಲ್ಲ’ ಎಂದರು.

‘ಬಸನಗೌಡ ಪಾಟೀಲ ಯತ್ನಾಳರು ಬಹಳ ವರ್ಷಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಊಹಾಪೋಹಗಳಿಂದ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಎಚ್ಚರ ಇರಬೇಕು. ಸಿ.ಎಂ. ಔತಣಕೂಟಕ್ಕೆ ನನಗೆ ಇದುವರೆಗೂ ಆಹ್ವಾನ ಬಂದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೇವಾ ಭಾರತಿ ಸಂಸ್ಥೆಯ ಶ್ರೀಧರ ನಾಡಿಗೇರ, ಗೋವರ್ಧನ ರಾವ್‌, ಶಂಕರ ಗುಮಾಸ್ತಿ, ಈಶ್ವರ ಹಾವನೂರ, ಡಾ.ಶಿವಾನಂದ ಕೆಂಬಾವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು