ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತ ವಿರೋಧಿ: ರೈತ ಸಂಘಗಳ ಆಕ್ರೋಶ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ: ಬೆಳೆವಿಮೆ ನ್ಯೂನತೆ ಸರಿಪಡಿಸಲು ಆಗ್ರಹ
Last Updated 21 ಜುಲೈ 2020, 9:57 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ. ಇಂಥ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಪ್ರತಿಭಟನಾ ಜಾಥಾ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ನಮ್ಮ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ರೈತ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಶ್ರೀಮಂತರು ಮತ್ತು ಬಂಡವಾಳಶಾಹಿಗಳಿಗೆ ಕೆಂಪು ಹಾಸಿಗೆ ಹಾಸಿ, ಬಡರೈತರನ್ನು ಗುಲಾಮರನ್ನಾಗಿಸಲು ಅನುವು ಮಾಡಿಕೊಡಲಾಗಿದೆ. ಆದ್ದರಿಂದ ಸುಗ್ರೀವಾಜ್ಞೆ ತಂದಿರುವುದನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ವಿದ್ಯುತ್‌ ವಿತರಣೆಯನ್ನು ಖಾಸಗಿಯವರಿಗೆ ಕೊಡಲು ಹುನ್ನಾರ ನಡೆಸಲಾಗಿದೆ. ಜಿಲ್ಲೆಯ ಸುಮಾರು 1.30 ಲಕ್ಷ ರೈತರು ಪಂಪ್‌ಸೆಟ್‌ ಹೊಂದಿದ್ದು, ಶೇ 75ರಷ್ಟು ವಿದ್ಯುತ್‌ ಕೃಷಿಗೆ ಬಳಕೆಯಾಗುತ್ತದೆ. ಖಾಸಗೀಕರಣ ಮಾಡಿದರೆ, ರೈತರ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸುವ ಸಾಧ್ಯತೆ ಇರುತ್ತದೆ. ರೈತರ ಹಿತ ಬಲಿಕೊಡುವ ಕ್ರಮ ಕೂಡಲೇ ಕೈಬಿಡಿ ಎಂದು ಆಗ್ರಹಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು, ನೆರೆಯಿಂದ ಬೆಳೆ ಹಾನಿಯಾದ ಶೇ 60 ರೈತರಿಗೆ ಮಾತ್ರ ಪರಿಹಾರ ಸಿಕ್ಕಿದ್ದು, ಉಳಿದ ಶೇ 40ರಷ್ಟು ರೈತರಿಗೆ ಕೂಡಲೇ ಪರಿಹಾರ ನೀಡಬೇಕು. 2019–20ನೇ ಸಾಲಿನಲ್ಲಿ ಮಂಜೂರಾದ ₹49 ಕೋಟಿ ಬೆಳೆವಿಮೆ ಹಣ ಸಮರ್ಪಕವಾಗಿ ರೈತರ ಖಾತೆಗೆ ಜಮಾ ಆಗಿಲ್ಲ. ಇದನ್ನು ಸರಿಪಡಿಸಬೇಕು. ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೂ ಪ್ರೋತ್ಸಾಹಧನ ವಿತರಿಸಬೇಕು. ರೇಷ್ಮೆ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಪ್ರತಿ ಕೆ.ಜಿ.ಗೆ ₹400 ನಿಗದಿ ಮಾಡಿ, ಸರ್ಕಾರವೇ ತುಂಬಿಕೊಡಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹಮದ್‌ ಗೌಸ್‌ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಬ.ಪ್ಯಾಟಿ, ಕರಬಸಪ್ಪ ಅಗಸಿಬಾಗಿಲು, ಮರಿಗೌಡ ಪಾಟೀಲ, ಶಂಕ್ರಪ್ಪ ಶಿರಗಂಬಿ, ದಿಳ್ಳೇಪ್ಪ ಮಣ್ಣೂರ, ಮಾಲತೇಶ ಪರಪ್ಪನವರ, ಸುರೇಶ ಚಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT