ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹12 ಸಾವಿರ ಗೌರವಧನಕ್ಕೆ ಆಗ್ರಹ

ಹಾವೇರಿ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಸುರಕ್ಷತಾ ಸಾಮಗ್ರಿ ನೀಡಲು ಒತ್ತಾಯ
Last Updated 13 ಜುಲೈ 2020, 13:37 IST
ಅಕ್ಷರ ಗಾತ್ರ

ಹಾವೇರಿ: ಮಾಸಿಕ ₹12 ಸಾವಿರ ಗೌರವಧನ ಸೇರಿದಂತೆವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಗ್ರಾಮ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗಳ ಎದುರು ಜಿಲ್ಲೆಯಾದ್ಯಂತ ಸೋಮವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ರಾಜ್ಯದಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ, ಅನಿರ್ದಿಷ್ಟ ಅವಧಿಯವರೆಗೆ ಕೈಗೊಂಡಿರುವ ಹೋರಾಟವನ್ನು ತೀವ್ರಗೊಳಿಸುವ ಭಾಗವಾಗಿ ಸೋಮವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ, ಹಕ್ಕೊತ್ತಾಯಗಳನ್ನು ಮಂಡಿಸಿದರು.

ಜನವರಿಯಿಂದ ಸರ್ಕಾರಕ್ಕೆ 10 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಜೂನ್‌ 30ರಂದು ಪ್ರತಿಭಟನೆ ನಡೆಸಿ, ಬೇಡಿಕೆ ಈಡೇರಿಸಲು ಮನವಿ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ, ನಮ್ಮ ಹೋರಾಟವನ್ನು ಮುಂದುವರಿಸಿದ್ದೇವೆ. ಜುಲೈ 10ರಿಂದ ರಾಜ್ಯವ್ಯಾಪಿ ಕೆಲಸ ಸ್ಥಗಿತಗೊಳಿಸಿ, ಚಳವಳಿಗೆ ಕಾಲಿಡುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದೇವೆ. ಅದರ ಭಾಗವಾಗಿಯೇ ಗ್ರಾಮ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗಳ ಮುಂಭಾಗ ಪ್ರತಿಭಟನೆ ನಡೆಸಿದ್ದೇವೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದರು.

ಇತ್ತೀಚೆಗೆ ಗುತ್ತಿಗೆ ವೈದ್ಯರ ಸಂಬಳವನ್ನು ₹20 ಸಾವಿರದಿಂದ ₹40 ಸಾವಿರಕ್ಕೆ ಏರಿಸಿದ ಸರ್ಕಾರ, ಆಶಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸುತ್ತಿಲ್ಲ. ಈಗಾಗಲೇ ₹7ರಿಂದ ₹9 ಸಾವಿರ ಪಡೆಯುತ್ತಿರುವ ಆಶಾಗಳಿಗೆ ಮಾಸಿಕ ₹12 ಸಾವಿರ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೋವಿಡ್–19‌ ತುರ್ತು ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಸುರಕ್ಷತಾ ಸಾಮಗ್ರಿಗಳನ್ನು ಸಮರ್ಪಕವಾಗಿ ನೀಡಬೇಕು, ಕೋವಿಡ್‌–19ಗೆ ತುತ್ತಾದ ಆಶಾಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ಹಾವೇರಿ, ಹಾನಗಲ್, ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿ, ಸವಣೂರು, ರಾಣೇಬೆನ್ನೂರು, ರಟ್ಟೀಹಳ್ಳಿ.. ಎಲ್ಲ ತಾಲ್ಲೂಕುಗಳ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಆಶಾ ಕಾರ್ಯಕರ್ತೆಯರು ತೆರಳಿ, ಪ್ರತಿಭಟನೆ ಮಾಡಿ ಮನವಿ ಪತ್ರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT