ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆಗೆ ಹಾವೇರಿ ಜಿಲ್ಲಾಡಳಿತ ಸನ್ನದ್ಧ

ಜಿಲ್ಲೆಯಲ್ಲಿ ಇಂದಿನಿಂದಲೇ ನೀತಿಸಂಹಿತೆ ಜಾರಿ: ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ
Last Updated 29 ಮಾರ್ಚ್ 2023, 15:43 IST
ಅಕ್ಷರ ಗಾತ್ರ

ಹಾವೇರಿ: ಭಾರತ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 29ರ ಬುಧವಾರದಿಂದಲೇ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನೀತಿಸಂಹಿತೆ ಜಾರಿಯಾಗಿರುವುದರಿಂದ ಜಿಲ್ಲೆಯಾದ್ಯಂತ 24 ಗಂಟೆಯೊಳಗಾಗಿ ಫ್ಲೆಕ್ಸ್‌, ಬ್ಯಾನರ್, ಹೋರ್ಡಿಂಗ್ಸ್‌ ತೆರವುಗೊಳಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೇ 10ರಂದು ಚುನಾವಣೆ:

ಏಪ್ರಿಲ್‌ 13ರ ಗುರುವಾರ ಅಧಿಸೂಚನೆ ಪ್ರಕಟಣೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಏಪ್ರಿಲ್‌ 20 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ‍ಪ್ರಿಲ್‌ 21ರ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.24ರ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 10 ಬುಧವಾರ ಮತದಾನ ಜರುಗಲಿದೆ. ಮೇ 13 ಶನಿವಾರ ಮತ ಎಣಿಕೆ ನಡೆಯಲಿದೆ ಹಾಗೂ ಮೇ 15 ಸೋಮವಾರ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಹಿರೇಕೆರೂರು ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ 1,84,534 ಮತದಾರರಿದ್ದಾರೆ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅಧಿಕ 2,35,074 ಮತದಾರರಿದ್ದಾರೆ. 18ರಿಂದ 19 ವರ್ಷದ 31,384 ಮತದಾರರು ಹಾಗೂ ಏಪ್ರಿಲ್‌ 1ಕ್ಕೆ 18 ವರ್ಷ ಪೂರೈಸುವ 2,725 ಮತದಾರರು ಇದ್ದಾರೆ.

ಮನೆಯಲ್ಲೇ ಮತದಾನ ಅವಕಾಶ:

ಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನ ಮತದಾರರಿಗೆ ಅವರು ಇಚ್ಛೆಪಟ್ಟರೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಈ ಪ್ರಯೋಗ ಜಿಲ್ಲೆಯಲ್ಲಿ ಹಾನಗಲ್ ಉಪ ಚುನಾವಣೆ ಸಂದರ್ಭದಲ್ಲಿ ನಡೆಸಲಾಗಿತ್ತು. ಈ ಮತದಾರರು ಆಯೋಗಕ್ಕೆ ಮಾಹಿತಿ ನೀಡಿದರೆ ಚುನಾವಣೆ ಅಧಿಸೂಚನೆ ಹೊರಡುವ ದಿನಾಂಕ ಐದು ದಿನಗಳವರೆಗೆ 11ಡಿ ಫಾರಂ ನೀಡಲಾಗುವುದು. ಈ ಫಾರಂನಲ್ಲಿ ಭರ್ತಿ ಮಾಡಿಕೊಟ್ಟರೆ ಚುನಾವಣಾ ಅಧಿಕಾರಿಗಳ ತಂಡ ಮನೆಯಲ್ಲೇ ಮತದಾನ ಪ್ರಕ್ರಿಯೆ ವ್ಯವಸ್ಥೆ ಮಾಡಲಿದೆ ಎಂದರು.

ಸಖಿ ಮತಗಟ್ಟೆ:

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ ಎರಡು ಸಖಿ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನರ ಮತಗಟ್ಟೆ, ಯುವಕರ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆ ಸೇರಿ ಐದು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.

₹40 ಲಕ್ಷ ವೆಚ್ಚದ ಮಿತಿ:

ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಗೆ ₹40 ಲಕ್ಷಗಳ ವೆಚ್ಚದ ಮಿತಿಯನ್ನು ವಿಧಿಸಲಾಗಿದೆ. ಅಭ್ಯರ್ಥಿಗಳು ಪ್ರಕಟಿಸಲು ಇಚ್ಚಿಸುವ ಎಲ್ಲ ವಿಧದ ಜಾಹೀರಾತುಗಳನ್ನು ಎಂ.ಸಿ.ಸಿ. ಹಾಗೂ ಎಂ.ಸಿ.ಎಂ.ಸಿ ಸಮಿತಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಕಳೆದ 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 80.47ರಷ್ಟು ಮತದಾನವಾಗಿದೆ. ಈ ಚುನಾವಣೆಯಲ್ಲಿ ಸಹ ಹೆಚ್ಚಿನ ಮತದಾನಕ್ಕೆ ಮತದಾರರ ಜಾಗೃತಿಗೆ ಸ್ವೀಪ್ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಇದ್ದರು.

****

//ಗ್ರಾಫಿಕ್‌ ಟೇಬಲ್‌//

ಮತದಾರರ ವಿವರ

6,60,270
ಪುರುಷ ಮತದಾರರು

6,30,879
ಮಹಿಳಾ ಮತದಾರರು

32,043
ಎಂಬತ್ತು ವರ್ಷ ಮೇಲ್ಪಟ್ಟ ಮತದಾರರು

22,297
ಅಂಗವಿಕಲ ಮತದಾರರು

909
ಸೇವಾ ಮತದಾರರು

12,91,194
ಒಟ್ಟು ಮತದಾರರು

****

ಮತಗಟ್ಟೆಗಳ ವಿವರ

ಹಾವೇರಿ ಜಿಲ್ಲೆಯಲ್ಲಿ 998 ಸ್ಥಳಗಳಲ್ಲಿ 1471 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಪೈಕಿ 18 ದುರ್ಬಲ ಹಾಗೂ 321 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಶೇ 90ರಷ್ಟು ಮತದಾನವಾದ ಹಾಗೂ ಒಬ್ಬರೇ ಅಭ್ಯರ್ಥಿಗೆ ಶೇ 75ಕ್ಕಿಂತ ಹೆಚ್ಚು ಮತದಾನವಾದ ಮತಗಟ್ಟೆಗಳನ್ನು ‘ಸೂಕ್ಷ್ಮ ಮತಗಟ್ಟೆ’ ಎಂದು ಪರಿಗಣಿಸಲಾಗಿದೆ.

ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು. 2804 ಬ್ಯಾಲೆಟ್ ಯುನಿಟ್‌, 1965 ಕಂಟ್ರೋಲ್ ಯುನಿಟ್ ಹಾಗೂ 2126 ವಿವಿಪ್ಯಾಟ್ ಲಭ್ಯವಿವೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT