ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪ್ರಾಣಿಬಲಿ ತಡೆಗೆ ಜಾಗೃತಿ ಯಾತ್ರೆ

Last Updated 4 ಫೆಬ್ರುವರಿ 2023, 7:01 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಹಾವನೂರಿನಲ್ಲಿ ಜ.30ರಿಂದ ಫೆ.2ರವರೆಗೆ ನಡೆದ ದ್ಯಾಮವ್ವ ದೇವಿ ಜಾತ್ರೆಯಲ್ಲಿ ಪ್ರಾಣಿಗಳನ್ನು ಬಲಿ ನೀಡದೆ ಅಹಿಂಸಾತ್ಮಕವಾಗಿ ಸಾತ್ವಿಕ ರೀತಿಯಲ್ಲಿ ಧಾರ್ಮಿಕ ಸೇವಾ ಕೈ೦ಕರ್ಯ ನಡೆಸುವಂತೆ ಭಕ್ತರಿಗೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಯಾತ್ರೆಯು ಹಾವೇರಿ ನಗರ, ಕನಕಾಪುರ, ಅಗಡಿ, ಗಾಂಧಿಪುರ, ಗುತ್ತಲ ಹಾಗೂ ಹಾವನೂರಿನ ಸುತ್ತಮುತ್ತಲಿನ ಜಾತ್ರಾ ಪರಿಸರಗಳಲ್ಲಿ ಸಂಚರಿಸಿ ‘ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯಗಳಾಗಬೇಕು, ಧ್ಯಾನಾಲಯಗಳಾಗಬೇಕು, ಜಾತ್ರಾ ಪರಿಸರಗಳು ಕಟುಕರ ಕೇರಿಗಳಾಗದೆ ಸದ್ಭಕ್ತಿ - ಸುಜ್ಞಾನ - ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು. ‘ದಯವಿಲ್ಲದ ಧರ್ಮ ಅದಾವುದಾಯ್ಯ’ ಎಂದು ಜೀವದಯಾ ಸಂದೇಶಗಳನ್ನು ಸಾರಿದರು.

ಕರ್ನಾಟಕದಲ್ಲಿ ಸಂಪೂರ್ಣ ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಗೆ ಬಂದು 63 ವರ್ಷಗಳು ಗತಿಸಿದರೂ, ಪ್ರತಿವರ್ಷ ರಾಜ್ಯದ ಸಾವಿರಾರು ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಪರಿಸರಗಳಲ್ಲಿ ಸುಮಾರು 1.5 ಕೋಟಿಗೂ ಹೆಚ್ಚು ಆಡು, ಕುರಿ, ಕೋಳಿ, ಕೋಣ, ಟಗರು, ಹಂದಿ, ಹಸು, ಕರು, ಎತ್ತು ಮುಂತಾದ ಪ್ರಾಣಿಗಳ ಮಾರಣಹೋಮ ರಾಜಾರೋಷವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.

ದ್ಯಾಮವ್ವ ದೇವಿಗೆ ಬಲಿಗೆಂದು ಸಮರ್ಪಿಸಿದ್ದ 15 ಕೋಣಗರುಗಳನ್ನು ದೇವಾಲಯದ ಆವರಣದಲ್ಲಿ ಕೂಡಿಹಾಕಿದ್ದು ಅವುಗಳನ್ನು ಬಲಿ ನೀಡದೆ ಅವುಗಳ ಯಾವುದಾದರೊಂದು ಕರುವಿನಿಂದ ಇಂಜೆಕ್ಷನ್ ಸಿರೆಂಜ್ ಮೂಲಕ ಸ್ವಲ್ಪ ರಕ್ತವನ್ನು ತೆಗೆದುಕೊಂಡು ದೇವಿಗೆ ಹರಕೆ ತೀರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಕ್ಷಿಸಲ್ಪಟ್ಟ ಕೋಣಗರುಗಳನ್ನು ಗೋಶಾಲೆಗೆ ಕಳುಹಿಸಿ ಅವುಗಳನ್ನು ಸಂರಕ್ಷಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದರು.

ರಾಜ್ಯ ಮಹಿಳಾ ಸಂಚಾಲಕಿ ಸುನಂದಾ ದೇವಿ, ಕಾರ್ಯದರ್ಶಿ ಭರತ್ ಸೇನ್ ಕುಮಾರ್, ಕಾರ್ಯಕರ್ತರಾದ ಪ್ರದೀಪ್ ಮತ್ತು ಅನಿಲ್ ಹಾಗೂ ಸಂಗಡಿಗರ ತಂಡ ಅಹಿಂಸಾ- ಪ್ರಾಣಿದಯಾ- ಅಧ್ಯಾತ್ಮ ಸಂದೇಶಯಾತ್ರೆಯ ಮೂಲಕ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT