ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಂಕುಗಳ ಸಾಲ ಬೆಂಕಿ ಇದ್ದಂತೆ’

ವಿಜಯಾ ಬ್ಯಾಂಕ್‌ ಸಾಲ ಮೇಳ, 45 ಫಲಾನುಭವಿಗಳಿಗೆ ₹ 75 ಲಕ್ಷ ಸಾಲ
Last Updated 25 ಜೂನ್ 2018, 14:03 IST
ಅಕ್ಷರ ಗಾತ್ರ

ಹಾವೇರಿ: ‘ಬ್ಯಾಂಕುಗಳ ಸಾಲ ಬೆಂಕಿ ಇದ್ದಂತೆ. ಮಿತವಾಗಿ ತೆಗೆದುಕೊಂಡರೆ ಮಾತ್ರ ಅದರಿಂದ ಅಡುಗೆ ಮಾಡಿಕೊಂಡು ಊಟ ಮಾಡಬಹುದು, ಇಲ್ಲವಾದರೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ’ ಎಂದು ವಿಜಯಾ ಬ್ಯಾಂಕಿನ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಚಿದಾನಂದ ಹೆಗಡೆ ಹೇಳಿದರು.

ಸಮೀಪದ ದೇವಗಿರಿಯ ವಿಜಯಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ವಿಜಯಾ ಬ್ಯಾಂಕ್‌ ಸಾಲ ಮೇಳದಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಸಾಮಾಜಿಕ ಭದ್ರತೆ ಯೋಜನೆಗಳನ್ನು ರೈತರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ರೈತರು ತಾವು ಪಡೆದ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಹೇಳಿದರು.

ರೈತರು ಬ್ಯಾಂಕ್‌ಗಳೊಂದಿಗೆ ವ್ಯವಹಾರ ಮಾಡುವುದರಿಂದ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅವರು ಪಡೆಯಬಹುದು ಎಂದರು.

ವಿಜಯಾ ಬ್ಯಾಂಕ್‌ ಕೇಂದ್ರ ಕಚೇರಿಯ ಸಹಾಯಕ ವ್ಯವಸ್ಥಾಪಕ ಬಿ.ವಿ.ನಾಗರಾಜ, ‘ವಿಜಯಾ ಬ್ಯಾಂಕ್‌ ತನ್ನ ಠೇವಣಿಯ ಶೇ 60ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದು, ಶೇ 18ರಷ್ಟು ಕೃಷಿಗೆ ಹಾಗೂ ಶೇ 40ರಷ್ಟನ್ನು ಆದ್ಯತಾ ರಂಗಗಳಿಗೆ ನೀಡುತ್ತಿದೆ’ ಎಂದು ಹೇಳಿದರು.

ಶೇ 18ರಷ್ಟು ಕೃಷಿ ಸಾಲದಲ್ಲಿ ಶೇ 8ರಷ್ಟನ್ನು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರದ ನಿರ್ದೇಶನವಿದೆ. ಆದರೆ, ಈ ಹಿಂದೆ ಅದು ನಮ್ಮಿಂದ ಸಾಧ್ಯವಾಗಿರಲಿಲ್ಲ. ಈಗ ಐ.ಡಿ.ಎಫ್‌. ಸಂಸ್ಥೆಯ ಸಹಯೋಗದಲ್ಲಿ ಅವರಿಗೂ ಕೂಡಾ ಸಾಲವನ್ನು ನೀಡಲಾಗುತ್ತಿದೆ ಎಂದರು.

ರೈತರು ತಾವು ತೆಗೆದುಕೊಂಡ ಬೆಳೆಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂದು ಕಾದು ಕುಳಿತುಕೊಳ್ಳದೇ ಅದನ್ನು ಚಾಲ್ತಿ ಮಾಡಿಸಿ. ಇದರಿಂದ, ರೈತರು ಸುಸ್ತಿ ಬಡ್ಡಿಯಿಂದ ತಪ್ಪಿಸಿಕೊಳ್ಳಬಹುದು ಎಂದರು.

ಒಂದು ವೇಳೆ ಒಂದು ವರ್ಷದ ಒಳಗಾಗಿ ಬೆಳೆಸಾಲವನ್ನು ಚಾಲ್ತಿ ಮಾಡಿಸದಿದ್ದರೆ, ಸುಸ್ತಿ ಬಡ್ಡಿಯನ್ನು ರೈತರೇ ಕಟ್ಟಬೇಕಾಗುತ್ತದೆ. ₹ 25 ಸಾವಿರ ಒಳಗೆ ಸಾಲ ಪಡೆದ ರೈತರಿಗೆ ಮಾತ್ರ ಸುಸ್ತಿ ಬಡ್ಡಿ ಇರುವುದಿಲ್ಲ ಎಂದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ನ ಅಧಿಕಾರಿ ಮಾದೇವ ಕೀರ್ತಿ ಮಾತನಾಡಿ, ವಿಜಯಾ ಬ್ಯಾಂಕ್‌ನಲ್ಲಿ ಹಿಂದುಳಿದ ವರ್ಗದ ರೈತರು ಶೇ 25ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಶೇ 35ರಷ್ಟಿ ರಿಯಾಯ್ತಿಯಲ್ಲಿ ಸಾಲ ಪಡೆಯಬಹುದು ಎಂದರು.

ಜಿಲ್ಲೆಯೆ ಮೂರು ತಾಲ್ಲೂಕಿನ ಒಟ್ಟು 45 ಫಲಾನುಭವಿಗಳಿಗೆ ₹ 75 ಲಕ್ಷ ಸಾಲವನ್ನು, ಹೈನುಗಾರಿಕೆ ಹಾಗೂ ಬೆಳೆಸಾಲವನ್ನು ನೀಡಲಾಯಿತು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್. ಕದರಪ್ಪ, ನಿರ್ಮಲಾ ಜಿ. ಇದ್ದರು.

ರೈತರು ಯಾವುದೇ ಕಾರಣಕ್ಕೂ ಕೈ ಸಾಲದ ರೂಪದಲ್ಲಿ ಶೇ 2ಕ್ಕಿಂತ ಹೆಚ್ಚಿಗೆ ಬಡ್ಡಿಯಲ್ಲಿ ಹಣ ಪಡೆಯಬೇಡಿ. ಇದರಿಂದ ನಿಮ್ಮ ಅಭಿವೃದ್ಧಿ ಅಸಾಧ್ಯ.
ಬಿ.ವಿ.ನಾಗರಾಜ,ಸಹಾಯಕ ವ್ಯವಸ್ಥಾಪಕ, ವಿಜಯಾ ಬ್ಯಾಂಕ್‌ ಕೇಂದ್ರ ಕಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT