ಭಾನುವಾರ, ಜೂಲೈ 5, 2020
24 °C
ಕಳಪೆ ಬಿತ್ತನೆ ಬೀಜದ ಬೇರನ್ನು ಕಿತ್ತೊಗೆಯಬೇಕಿದೆ: ಕೃಷಿ ಸಚಿವ ಬಿ.ಸಿ.ಪಾಟೀಲ

ರೈತರಿಗೆ ವಿಷವುಣಿಸಲ್ಲ, ಒತ್ತಡಕ್ಕೆ ಮಣಿಯಲ್ಲ: ಬಿ.ಸಿ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಹಲವಾರು ರಾಜಕೀಯ ಒತ್ತಡಗಳು ಬಂದಿದ್ದರೂ, ಕಳಪೆ ಬಿತ್ತನೆ ಬೀಜದ ವಿರುದ್ಧ ಕೈಗೊಂಡಿರುವ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಖಚಿತವಾಗಿ ನುಡಿದರು. 

ಹಿರೇಕೆರೂರಿನಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಾವೇರಿ, ಧಾರವಾಡ, ಬಳ್ಳಾರಿ ಜಿಲ್ಲೆಯಿಂದ ಒಟ್ಟು 1 ಲಕ್ಷದ 685 ಕ್ವಿಂಟಲ್‌ ಕಳಪೆ ಮತ್ತು ಬಿಡಿ ಬಿತ್ತನೆ ಬೀಜಗಳನ್ನು ಕೃಷಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಕಸ್ಮಾತ್‌ ನಾನು ಕಳಪೆ ಬಿತ್ತನೆ ಬೀಜ ಮಾರಾಟಗಾರರ ಜತೆ ಕೈ ಜೋಡಿಸಿದರೆ ತಾಯಿಯೇ ಮಗುವಿಗೆ ವಿಷವುಣಿಸಿದಂತೆ ಆಗುತ್ತದೆ. ಹಾಗಾಗಿ ರೈತರಿಗೆ ವಿಷ ಹಾಕುವ ಆರೋಪಿಗಳ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುತ್ತೇನೆ. ಪೊಲೀಸರು ಇಂಥ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. 

ಕೃಷಿ ಅಧಿಕಾರಿಗಳಿಗೆ ಬೆಂಬಲ

ಕೃಷಿ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಕಳಪೆ ಬಿತ್ತನೆ ಬೀಜ ಇಡಲು ಅವಕಾಶ ನೀಡಿದ ಶೀತಲೀಕರಣ ಘಟಕಗಳ ಮಾಲೀಕರನ್ನೂ ಬಂಧಿಸಬೇಕು. ರೈತ ಸತ್ತರೂ ಪರವಾಗಿಲ್ಲ. ಲಾಭ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ಕೆಲವರು ತಿರಸ್ಕೃತ ಬಿತ್ತನೆ ಬೀಜಗಳಿಗೆ ಬಣ್ಣ ಹಾಕಿ, ಕಳಪೆ ಬೀಜಗಳನ್ನು ಉತ್ತಮ ಬೀಜಗಳ ಜತೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ನಾವು ಕೈಗೊಂಡಿರುವ ಹೋರಾಟವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ ಬೆಂಬಲಿಸಿದ್ದಾರೆ ಎಂದರು.

ಪ್ರಯೋಗಾಲಯದಿಂದ ವರದಿ ಬಂದ ನಂತರ ಸುಮಾರು 11 ಸಾವಿರ ಕ್ವಿಂಟಲ್‌ ಕಳಪೆ ಬಿತ್ತನೆ ಬೀಜವನ್ನು ಸುಟ್ಟು ಹಾಕಲಾಗುತ್ತದೆ. ತಿರಸ್ಕೃತ ಬೀಜಗಳನ್ನು ಆಂಧ್ರಪ್ರದೇಶದ ಕಾರ್ಖಾನೆಯಲ್ಲೇ ಸುಟ್ಟು ಹಾಕಬೇಕಿತ್ತು. ಆದರೆ ಅಂಥ ಕಳೆಪೆ ಬೀಜಗಳನ್ನು ನಮ್ಮ ರಾಜ್ಯಕ್ಕೆ ಕಳುಹಿಸುತ್ತಾರೆ. ಇಲ್ಲಿ ಕೆಲವು ವರ್ತಕರು ಅವುಗಳಿಗೆ ಬಣ್ಣ ಹಾಕಿ, ಉತ್ತಮ ಬೀಜಗಳೊಂದಿಗೆ ಮಿಶ್ರಣ ಮಾಡಿ ರೈತರಿಗೆ ಮೋಸ ಮಾಡುತ್ತಾರೆ ಎಂದರು. 

ಕಳಪೆ ಬೀಜಗಳನ್ನು ಖರೀದಿಸಬೇಡಿ

ರೈತರು ಕೂಡ ದರ ಕಡಿಮೆ ಎಂದು ಕಳಪೆ ಬಿತ್ತನೆ ಬೀಜಗಳಿಗೆ ಮಾರು ಹೋಗದೆ, ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಮಾತ್ರ ಖರೀದಿಸಬೇಕು ಎಂದು ಮನವಿ ಮಾಡುತ್ತೇನೆ. ಕಳಪೆ ಬೀಜದಿಂದ ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸಿದರೆ ವಿಮೆ ಸೌಲಭ್ಯ ಕೂಡ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

2019 ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ‘ಸಂರಕ್ಷಣೆ ತಂತ್ರಾಂಶ’ ಮುಖಾಂತರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಅನುಷ್ಠಾನ ವಿಮಾ ಸಂಸ್ಥೆಗಳು ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದು ಸದರಿ ಖಾತೆಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ‘ಇಂಟಿಗ್ರೇಟ್’‌ ಮಾಡಿ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯನ್ನು 2019ರ ಮುಂಗಾರು ಹಂಗಾಮಿನಲ್ಲಿ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿರುವುದರಿಂದ ವಿಮಾ ಪರಿಹಾರ ವಿತರಿಸುವ ಕಾರ್ಯ ಈಗ ಪ್ರಾರಂಭವಾಗಿದೆ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು