ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು | ನಿರ್ವಹಣೆ ಕೊರತೆ: ಪಾಳುಬಿದ್ದ ಬಸ್‌ ನಿಲ್ದಾಣ

Published 4 ಮಾರ್ಚ್ 2024, 4:55 IST
Last Updated 4 ಮಾರ್ಚ್ 2024, 4:55 IST
ಅಕ್ಷರ ಗಾತ್ರ

ಹಿರೇಕೆರೂರು: ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ. ಆದರೆ, ಬಸ್‌ ಪ್ರಯಾಣಿಕರಿಗೆ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಅವಶ್ಯವಿರುವ ಪ್ರಯಾಣಿಕರ ತಂಗುದಾಣ ಮತ್ತು ಬಸ್‌ ನಿಲ್ದಾಣಗಳ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ. 

ತಾಲ್ಲೂಕಿನ ಹಂಸಭಾವಿ, ಚಿಕ್ಕೇರೂರು, ಮಡ್ಲೂರು, ಬುರುಡಿಕಟ್ಟಿ, ಮಡ್ಲೂರು ಕ್ರಾಸ್‌ನಲ್ಲಿ ಲಕ್ಷಾಂತರ ಹಣ ಸುರಿದು ನಿರ್ಮಿಸಿರುವ ಪ್ರಯಾಣಿಕರ ತಂಗುದಾಣಗಳು ನಿಷ್ಪ್ರಯೋಜಕವಾಗಿವೆ. ಕೆಲವು ಆಗಲೋ, ಈಗಲೋ ಕುಸಿದು ಬಿಳುವ ಹಂತದಲ್ಲಿವೆ. ಸರಿಯಾದ ನಿರ್ವಹಣೆ ಇಲ್ಲದೇ ಇರುವುದು ಶಿಥಿಲಗೊಳ್ಳಲು ಕಾರಣವಾಗಿದೆ.

ಮುಳ್ಳುಕಂಟಿಗಳಿಂದ ಆವೃತವಾದ ನಿಲ್ದಾಣ: ಮಡ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗವಿರುವ ಬಸ್ ನಿಲ್ದಾಣ ಮುಳ್ಳುಕಂಟಿಗಳಲ್ಲಿ ಮುಚ್ಚಿಹೋಗಿದ್ದು, ಪ್ರಯಾಣಿಕರಿಗೂ ಬಳಕೆಗೆ ಬಾರದಂತಾಗಿದೆ. ಅಲ್ಲದೆ ಮದ್ಯ ವ್ಯಸನಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಮಡ್ಲೂರು ಕ್ರಾಸ್‌ನಲ್ಲಿ ದಶಕದ ಆಚೆ ನಿರ್ಮಿಸಿರುವ ಬಸ್ ನಿಲ್ದಾಣವೂ ಉಪಯೋಗಕ್ಕೆ ಬಾರದಂತಾಗಿದೆ. ಅಲ್ಲದೆ‌ ಚಾವಣಿ ಕುಸಿವ ಹಂತದಲ್ಲಿದ್ದು ಇಲ್ಲಿ ಕುಳಿತುಕೊಳ್ಳುವ ಕಟ್ಟೆ ಕೂಡ ಕುಸಿದು ಬಿದ್ದಿದೆ. ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳದೆ ಹೊರಗಡೆ ನಿಂತುಕೊಂಡೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ನಾಗರಿಕರು.

ಚಿಕ್ಕೇರೂರು ಗ್ರಾಮದ ಹಿರೇಕೆರೂರು ಹಾಗೂ ಶಿರಾಳಕೊಪ್ಪ ರಸ್ತೆ ಪಕ್ಕದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ನಿರ್ಮಿಸಿರುವ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಇಲ್ಲ ಹಾಗೂ ಬಸ್ ಶೆಲ್ಟರ್ ಜಾಹೀರಾತುಗಳ ಗೋಡೆಗಳಾಗಿ ಬದಲಾಗಿದೆ.

ಹಿರೇಕೆರೂರು ಹಾಗೂ ಹಾವೇರಿ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾದ ಬಸ್ ತಂಗುದಾಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದು ದ್ವಿಚಕ್ರ ವಾಹನ ಹಾಗೂ ನೀರಿನ ಗಾಡಿ ನಿಲ್ಲಿಸುವ ತಾಣವಾಗಿ ಮಾರ್ಪಟ್ಟಿದೆ.

ಮೂಲಸೌಕರ್ಯ ಕೊರತೆ: ಪಟ್ಟಣದ ವಾಯವ್ಯ ಕರ್ನಾಟಕ ರಸ್ತೆ ನಿಲ್ದಾಣದಲ್ಲಿ ಮೂಲಸೌಕರ್ಯಗಳಿಲ್ಲದೇ ಪಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈಗಿರುವ ಬಸ್ ನಿಲ್ದಾಣ ಹಳೆಯದು ಹಾಗೂ ಚಿಕ್ಕದಾಗಿದ್ದು, ಬಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಬಸ್ ನಿಲ್ಲಿಸಲು ಜಾಗ ಸಾಲುತ್ತಿಲ್ಲ. ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ.

ಡಿಪೋದಲ್ಲಿ ಸದ್ಯ 90 ಬಸ್‌ಗಳಿದ್ದು, ಒಟ್ಟು 86 ಮಾರ್ಗಗಳಿವೆ. ಅದರಲ್ಲಿ 2 ಸ್ಲೀಪರ್ ಕೋಚ್ ಬಸ್‌ಗಳಿವೆ. ಮಣಿಪಾಲ, ಬೆಂಗಳೂರು, ಭಟ್ಕಳ, ಮಂಗಳೂರು, ಮೈಸೂರು, ಬೆಳಗಾವಿ, ಮುಂಬೈ, ಗೋವಾ, ಶಿರಾಳಕೊಪ್ಪ, ರಾಣೆಬೆನ್ನೂರು, ಹಾವೇರಿ ಸೇರಿದಂತೆ ವಿವಿಧ ಮಾರ್ಗಗಳಿಂದ ಕೊಂಚ ಮಟ್ಟಿಗೆ ಉತ್ತಮ ಆದಾಯ ಬರುತ್ತಿದೆ.

ಇನ್ನುಳಿದಂತೆ ಸ್ಥಳೀಯ ಮಾರ್ಗಗಳಲ್ಲಿ ಟಂಟಂ ಹಾಗೂ ತ್ರಿಚಕ್ರ ವಾಹನ ಸೇರಿದಂತೆ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದೆ. ರಜಾ ದಿನಗಳಲ್ಲಿ ಕಲೆಕ್ಷನ್ ನೆಪ ಒಡ್ಡಿ ಗ್ರಾಮೀಣ ಭಾಗದ ಹಳ್ಳಿಗಳಿಗೆ ಬಸ್ ಸಂಚಾರವನ್ನು ರದ್ದು ಮಾಡುತಿದ್ದು, ಇಂತಹ ದಿನಗಳಲ್ಲಿ ಸಾರ್ವಜನಿಕರು ತಮ್ಮ ಅಗತ್ಯ ಕೆಲಸ ಕಾರ್ಯಗಳಿಗೆ ಖಾಸಗಿ ವಾಹನಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಹಾಳಾದ ನೀರಿನ ಘಟಕ: ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕ ಇದ್ದರೂ ನೀರು ಕುಡಿಯಲಾಗದಂತಹ ಪರಿಸ್ಥಿತಿ ಇದೆ ನಿಲ್ದಾಣದ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ನಿರ್ವಹಣೆ ಇಲ್ಲದೆ ಕೆಟ್ಟು ವರ್ಷಗಳೇ ಆಗಿವೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಪ್ರಯಾಣಿಕರಾದ ರಂಗಸ್ವಾಮಿ, ಶಿವರಾಜು ದೂರಿದರು. 

ಆಸನಗಳ ಕೊರತೆ: ಪ್ರತಿ ದಿನ ಸಾವಿರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತಿದ್ದು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಆಸನಗಳಿಲ್ಲ. ಆಸನಗಳ ಕಡಿಮೆ ಇರುವ ಕಾರಣ ವಯೋವೃದ್ದರು ಬಸ್ಸುಗಳು ಬರುವ ತನಕ ನಿಲ್ಲಬೇಕಾದ ಪರಿಸ್ಥಿತಿ ಇದೆ. ಆಸನಗಳ ಸಂಖ್ಯೆ ಹೆಚ್ಚಿಸಬೇಕಾದ ಅವಶ್ಯಕತೆ ಇದ್ದು ಅಧಿಕಾರಿಗಳು ಆಸನಗಳ ಹೆಚ್ಚಳ ಮಾಡುವತ್ತ ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಪ್ರಯಾಣಿಕರಾದ ಮಂಗಳಮ್ಮ ಮತ್ತು ಸುಶೀಲ. 

ಪಾರ್ಕಿಂಗ್ ವ್ಯವಸ್ಥೆ ಇಲ್ಲ: ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಬಸ್ ನಿಲ್ದಾಣದ ಎದುರಿಗೆ ಮತ್ತು ಅಕ್ಕಪಕ್ಕ ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಾರೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿಕ್ಕೇರೂರು ಮಡ್ಲೂರು ಹಾಗೂ ಹಂಸಭಾವಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಹಲವು ಬಸ್ ತಂಗುದಾಣಗಳು ನಿರುಪಯುಕ್ತವಾಗಿವೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ.
ಭರಮಪ್ಪ ಡಮ್ಮಳ್ಳಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ (ಪ್ರವೀಣ್ ಶೆಟ್ಟಿ ಬಣ)
ಶುದ್ದ ಕುಡಿಯುವ ನೀರಿನ ಘಟಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದು ಶಾಸಕರು ಹೊಸದಾಗಿ ಕೊಳವೆಬಾವಿ‌ ಕೊರೆಸುವ ಭರವಸೆ ನೀಡಿದ್ದಾರೆ. ಆಸನಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇನೆ.
ಮಂಜುನಾಥ ಹಡಪದ, ವ್ಯವಸ್ಥಾಪಕ, ಹಿರೇಕೆರೂರು ಸಾರಿಗೆ ಸಂಸ್ಥೆ ಘಟಕ 
ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದಲ್ಲಿರುವ ಬಸ್ ತಂಗುದಾಣದಲ್ಲಿ ಆಸನದ ವ್ಯವಸ್ಥೆ ಇಲ್ಲ ಹಾಗೂ ಬಸ್ ಶೆಲ್ಟರ್ ಜಾಹೀರಾತುಗಳ ಗೋಡೆಗಳಾಗಿ ಬದಲಾಗಿದೆ
ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದಲ್ಲಿರುವ ಬಸ್ ತಂಗುದಾಣದಲ್ಲಿ ಆಸನದ ವ್ಯವಸ್ಥೆ ಇಲ್ಲ ಹಾಗೂ ಬಸ್ ಶೆಲ್ಟರ್ ಜಾಹೀರಾತುಗಳ ಗೋಡೆಗಳಾಗಿ ಬದಲಾಗಿದೆ
ಮಡ್ಲೂರ ಗ್ರಾಮದಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣ ಮುಳ್ಳುಕಂಟಿಗಳಲ್ಲಿ ಪಾಳುಬಿದ್ದಿದ್ದು ನಿರುಪಯುಕ್ತವಾಗಿದೆ 
ಮಡ್ಲೂರ ಗ್ರಾಮದಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣ ಮುಳ್ಳುಕಂಟಿಗಳಲ್ಲಿ ಪಾಳುಬಿದ್ದಿದ್ದು ನಿರುಪಯುಕ್ತವಾಗಿದೆ 
ಮಡ್ಲೂರು ಕ್ರಾಸ್‌ನಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತುಕೊಳ್ಳುವ ಕಟ್ಟೆಯೇ ಕುಸಿದು ಬಿದ್ದಿದೆ
ಮಡ್ಲೂರು ಕ್ರಾಸ್‌ನಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತುಕೊಳ್ಳುವ ಕಟ್ಟೆಯೇ ಕುಸಿದು ಬಿದ್ದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT