ಬುಧವಾರ, ನವೆಂಬರ್ 13, 2019
28 °C
ಅನರ್ಹ ಶಾಸಕರ ಭವಿಷ್ಯ ನಾಳೆ ನಿರ್ಧಾರ * ಟಿಕೆಟ್‌ಗಗಿ ಶುರುವಾಯ್ತು ಕಸರತ್ತು

ರಾಣೆಬೆನ್ನೂರು, ಹಿರೇಕೆರೂರಿಗೆ ಮತ್ತೆ ಚುನಾವಣೆ ರಂಗು!

Published:
Updated:
Prajavani

ಹಾವೇರಿ: ಉಪ ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ರಾಣೆಬೆನ್ನೂರು ಹಾಗೂ ಹಿರೇಕೆರೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯ ಲೆಕ್ಕಚಾರಗಳು ಗರಿಗೆದರಿವೆ. ಇನ್ನು ಒಂದು ತಿಂಗಳು ಬೀದಿ ಬೀದಿಯಲ್ಲೂ ಜೈಕಾರ ಹಾಗೂ ಅಬ್ಬರದ ಪ್ರಚಾರಗಳಿಂದ ಈ ಕಣಗಳು ಕಳೆಕಟ್ಟಲಿವೆ. ಇದರ ನಡುವೆಯೇ ಎಲ್ಲರ ನೋಟ ಅನರ್ಹ ಶಾಸಕರ ಭವಿಷ್ಯ ನಿರ್ಧರಿಸಲಿರುವ ‘ಸುಪ್ರೀಂ’ ತೀರ್ಮಾನದ ಕಡೆಗೆ ನೆಟ್ಟಿದೆ.

ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ ಹಾಗೂ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಅನರ್ಹಗೊಂಡಿದ್ದರಿಂದ, ಅ.21ರಂದು ಈ ಕ್ಷೇತ್ರಗಳಲ್ಲೂ ಉಪ ಚುನಾವಣೆ ನಡೆಯಲಿದೆ. ‘ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ’ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ, ಸೋಮವಾರ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅವರಿಬ್ಬರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.   

ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲುಕಂಡಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರ ಮೊಗದಲ್ಲಿ ‘ಉಪ ಚುನಾವಣೆ’ ಎಂಬ ಪದ ಸಂತಸದ ಚಿಲುಮೆಯನ್ನು ತಂದಿದೆ. ಆದರೆ, ಕೋರ್ಟ್ ತೀರ್ಪು ಅನರ್ಹ ಶಾಸಕರ ಪರವಾಗಿಯೇ ಬಂದರೆ ಏನು ಮಾಡುವುದು? ವಿರುದ್ಧವಾಗಿ ಬಂದರೂ ಹೈಕಮಾಂಡ್ ಈ ಸಲ ನಮಗೇ ಟಿಕೆಟ್ ಕೊಡುತ್ತದೆ ಎಂಬ ಗ್ಯಾರಂಟಿ ಏನು? ಅನರ್ಹ ಶಾಸಕರ ಕುಟುಂಬ ಸದಸ್ಯರಿಗೆ ಮಣೆ ಹಾಕಿಬಿಟ್ಟರೆ... ಎಂಬ ಪ್ರಶ್ನೆಗಳು ಅವರ ಮೊಗದಲ್ಲಿ ಆತಂಕದ ಗೆರೆಗಳನ್ನೂ ಎಳೆದಿವೆ.

ಹಿರೇಕೆರೂರಿನ ಚಿತ್ರಣ:

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಸಿ.ಪಾಟೀಲ, ಕೇವಲ 555 ಮತಗಳ ಅಂತರದಿಂದ ಬಿಜೆಪಿಯ ಯು.ಬಿ.ಬಣಕಾರ ವಿರುದ್ಧ ಗೆಲುವು ಸಾಧಿಸಿದ್ದರು. ಆ ನಂತರ ಕಾಂಗ್ರೆಸ್ ವಿರುದ್ಧವೇ ಬಂಡಾಯವೆದ್ದು, ರಾಜ್ಯದಲ್ಲಿ ಕಮಲ ಅರಳಲು ನೆರವಾಗಿದ್ದರು.

ಈಗ ಕೋರ್ಟ್ ಆದೇಶ ಪಾಟೀಲರ ಪರವಾಗಿ ಬಂದರೆ, ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಪಾಟೀಲರಿಗೆ ಬಿಜೆಪಿಯಿಂದಲೇ ಟಿಕೆಟ್ ನೀಡುವ ಸಂದರ್ಭ ಬಂದರೆ, ಅದೇ ಪಕ್ಷದ ಪ್ರಭಾವಿ ಮುಖಂಡ ಯು.ಬಿ.ಬಣಕಾರ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು. ಒಂದು ವೇಳೆ ಪಾಟೀಲರು ಸ್ಪರ್ಧಿಸುವ ಅವಕಾಶ ಕಳೆದುಕೊಂಡರೂ, ತಮ್ಮ ಮಗಳು ಅಥವಾ ಪತ್ನಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

‘ಬಿಜೆಪಿ ನಾಯಕರು ಕೈಕೊಟ್ಟರೂ, ಪಾಟೀಲರು ‘ಸ್ವತಂತ್ರ’ರಾಗಿ ಬಲ ತೋರಿಸುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಅವರ ಆಪ್ತ ಮೂಲಗಳೇ ಹೇಳುತ್ತವೆ.

ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಲು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಹಿರಿಯ ಮುಖಂಡ ಬಿ.ಎಚ್.ಬನ್ನಿಕೋಡ ಹಾಗೂ ಅವರ ಮಗ ಪ್ರಕಾಶ್ ಬನ್ನಿಕೋಡ ಸ್ಪರ್ಧೆಯಲ್ಲಿದ್ದಾರೆ. ಹೊರಗಿನ ಲಿಂಗಾಯತ ನಾಯಕರನ್ನೂ ಕರೆತರುವ ಬಗ್ಗೆ ಚರ್ಚೆಗಳು ನಡೆದಿವೆ.

ಈ ಕ್ಷೇತ್ರದಲ್ಲಿ 1957ರಿಂದ 2018 ರವರೆಗೆ ಜರುಗಿದ 14 ಸಾರ್ವತ್ರಿಕ ಚುನಾವಣೆಗಳಲ್ಲಿ ಜಿ.ಬಿ.ಶಂಕರರಾವ್, ಬಿ.ಜಿ.ಬಣಕಾರ, ಬಿ.ಎಚ್.ಬನ್ನಿಕೋಡ, ಯು.ಬಿ.ಬಣಕಾರ, ಬಿ.ಸಿ.ಪಾಟೀಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇದೊಂದೇ ಕಾರಣದಿಂದ ಕುರುಬ ಸಮುದಾಯದ ಕರಿಯಣ್ಣನವರ ಅವರಿಗೆ ಟಿಕೆಟ್ ತಪ್ಪಬಹುದು . ಹಿರಿಯರಾದ ಬನ್ನಿಕೋಡ ಅವರನ್ನೇ ಕಣಕ್ಕಿಳಿಸಬಹುದು ಎಂದೂ ಹೇಳಲಾಗುತ್ತಿದೆ.

‘ನಾನು ಪೈಪೋಟಿಗೆ ಬಿದ್ದು ಟಿಕೆಟ್ ಕೇಳಲ್ಲ. ಪಕ್ಷದ ನಾಯಕರು ವಿಶ್ವಾಸವಿಟ್ಟು ಆಯ್ಕೆ ಮಾಡಿದರೆ ಸ್ಪರ್ಧಿಸುತ್ತೇನೆ’ ಎಂದು ಬಿ.ಎಚ್.ಬನ್ನಿಕೋಡ ಹೇಳಿದರು. ಪ‍್ರತಿಕ್ರಿಯೆ ಪಡೆಯಲು ಬಿ.ಸಿ.ಪಾಟೀಲರಿಗೆ ಕರೆ ಮಾಡಿದಾಗ, ‘ಸಾಹೇಬ್ರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಅವರ ಆಪ್ತಸಹಾಯಕರು ಹೇಳಿದರು.

ರಾಣೆಬೆನ್ನೂರಿನ ಚಿತ್ರಣ:

ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಆರ್.ಶಂಕರ್ ವಿರುದ್ಧ 4,338 ಮತಗಳ ಅಂತರದಿಂದ ಸೋಲು ಕಂಡಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ, ಉಪ ಚುನಾವಣೆಯ ಮುನ್ಸೂಚನೆ ಅರಿತು ತಿಂಗಳಿನಿಂದಲೇ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲೂ ಸುತ್ತಾಟ ನಡೆಸಿದ್ದಾರೆ. ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಿಂದ ಟಿಕೆಟ್ ಕೇಳಲು ಇಲ್ಲಿ ಯಾರೂ ಇಲ್ಲ. ಪಕ್ಷ ನನ್ನನ್ನೇ ಆಯ್ಕೆ ಮಾಡಿದರೆ ಖಂಡಿತ ಗೆದ್ದು ಬರುತ್ತೇನೆ’ ಎಂದರು. 

ಆದರೆ, ಶಂಕರ್ ಕೂಡ ಸುಮ್ಮನೆ ಕೂರವವರಲ್ಲ. ಚುನಾವಣೆಗೆ ಸ್ಪರ್ಧಿಸಲು ತಮಗೆ ಅವಕಾಶ ಸಿಗದಿದ್ದರೂ, ಬಿಜೆಪಿಗೆ ಬೆಂಬಲ ಕೊಟ್ಟು ರಾಜಕೀಯ ಎದುರಾಳಿ ಕೋಳಿವಾಡ ಅವರನ್ನು ಹಣಿಯಲು ನಿರ್ಧರಿಸಿದ್ದಾರೆ. ಇಲ್ಲವೇ, ಕುಟುಂಬ ಸದಸ್ಯರನ್ನಾದರೂ ರಾಜಕೀಯಕ್ಕೆ ತರುವ ಇಚ್ಛೆ ಹೊಂದಿದ್ದಾರೆ. ಆದರೆ, ‘ತಿಂಗಳಲ್ಲಿ ಮೂರು ಸಲ ಪಕ್ಷ ಬದಲಿಸಿದ್ದಕ್ಕೆ, ಅವರಿಗೆ ಜನಬೆಂಬಲ ಸಿಗುವ ಸಾಧ್ಯತೆ ಕಷ್ಟ’ ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ‘ಸೋಮವಾರದ ತೀರ್ಪು ನೋಡಿ ನಿರ್ಧಾರ ಹೇಳುತ್ತೇನೆ’ ಎಂದು ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಡಾ.ಬಸವರಾಜ ಎಸ್.ಕೇಲಗಾರ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಸಜ್ಜನ್ ಸಹ ಪೈಪೋಟಿಯಲ್ಲಿದ್ದಾರೆ. 2.32 ಲಕ್ಷ ಮತದಾರಿರುವ ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವೇ ಹೆಚ್ಚಿದ್ದರೂ, ಕುರುಬ ಹಾಗೂ ಮುಸ್ಲಿಂ ಮತಗಳೂ ನಿರ್ಣಾಯಕ ಪಾತ್ರ ತೋರಲಿವೆ.

ಚರ್ಚಿಸಿ ಒಮ್ಮತದ ನಿರ್ಧಾರ

‘ಎರಡೂ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ ಪಕ್ಷ ಸಂಘಟನೆ ಮಾಡಿದ್ದೇವೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಹಿರೇಕೆರೂರಿನಲ್ಲಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದರೂ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ. ಸೆ.26ರಂದು ಬೆಂಗಳೂರಿನಲ್ಲಿ ಪಕ್ಷದ ನಾಯಕರು ಸಭೆ ಕರೆದಿದ್ದು, ಅಂದೇ ಆಯ್ಕೆ ಅಂತಿಮವಾಗಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಹೇಳಿದರು.

ಪ್ರತಿಕ್ರಿಯಿಸಿ (+)