ಗುರುವಾರ , ಮಾರ್ಚ್ 30, 2023
21 °C

ಅಕ್ರಮ ಕಲ್ಲುಗಣಿಗಾರಿಕೆ ತಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ತಾಲ್ಲೂಕಿನ ಕಜ್ಜರಿ ಗ್ರಾಮದ ಹದ್ದಿಗೊಳಪಟ್ಟ ಸರ್ಕಾರಿ ರಿ.ಸ.ನಂ; 67 ರಿಂದ 72 ರಿಂದ 76, 82 ರಿಂದ 85, ಮತ್ತು 94 ರಿಂದ 95 ನೇ ಸರ್ಕಾರಿ ಹುಲ್ಲುಗಾವಲು ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಂಡು ಸಂಪೂರ್ಣ ಗಣಿಗಾರಿಕೆ ಬಂದ್‌ ಮಾಡಬೇಕೆಂದು ಗ್ರಾಮದ ಯುವ ಮುಖಂಡ ನಿಂಗಪ್ಪ ಉಮೇಶ ಮೋಟೆಬೆನ್ನೂರು ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್‌ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಅನೇಕ ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಬೇಕು ಎಂದರು.

ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಚಿಕ್ಕಪ್ಪ ಮೋಟೆಬೆನ್ನೂರು ಹಾಗೂ ಪಿಡಿಒ ಅವರು ಅಕ್ರಮ ಕಲ್ಲುಗಣಿಕಾರಿಕೆ ತಡೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದರು.

ಸಿಆರ್‌ಪಿಎಫ್‌ ಯೋಧ ವಿಠೋಬ ಮಾಕಣ್ಣನವರ ಮಾತನಾಡಿ, ನಾನೊಬ್ಬ ಸಿಆರ್‌ಪಿಎಫ್‌ ಯೋಧ, ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತದೆ. ಗ್ರಾಮದ ಯುವಕರ ಜೊತೆಗೆ ನಾನೂ ಕೂಡ ಹೋರಾಟಕ್ಕೆ ಕೈ ಜೋಡಿಸುತ್ತೇನೆ. ಇಲ್ಲಿ 325 ಎಕರೆ ಹುಲ್ಲುಗಾವರು ಪ್ರದೇಶವಿದ್ದು, ಇಲ್ಲಿ ಗಣಿಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಸುತ್ತಮುತ್ತಲಿನ ರೈತರು ಬೆಳೆದ ಪೈರುಗಳು ಹಾಳಾಗುತ್ತಿವೆ. ರಸ್ತೆಗಳು ಹದಗೆಟ್ಟು ಹೋಗಿವೆ. ಕುರಿ ಮತ್ತು ಜಾನುವಾರುಗಳಿಗೆ ಮೇಯಿಸಲು ಹುಲ್ಲಾಗಾವಲು ಪ್ರದೇಶ ಇಲ್ಲದಂತಾಗಿದೆ. ಸುತ್ತಲೂ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿವೆ. ಕೃಷ್ಣಮೃಗಗಳ, ಮೊಲ, ತೋಳ, ನರಿ, ಜಿಂಕೆ, ನವಿಲು, ಕಾಡು ಹಂದಿ ಸಂತತಿ ನಾಶವಾಗುತ್ತಿದೆ ಎಂದರು.

ಪರವಾನಗಿ ಪಡೆದು ಮತ್ತು ಪರವಾನಿಗೆ ಇಲ್ಲದೇ ಕಲ್ಲು ಗಣಿಗಾರಿಕೆ ನಡೆಸುತ್ತಿರುವದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಒಂದು ವಾರದೊಳಗೆ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.