ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ವಿಳಂಬವಾದರೆ ಕರೆ ಮಾಡಿ

ಅತಿವೃಷ್ಟಿ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಭೇಟಿ
Last Updated 22 ಮೇ 2022, 14:52 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅವರು ತ್ವರಿತವಾಗಿ ಸಮೀಕ್ಷೆ ಕಾರ್ಯ ಪೂರೈಸಿ ಸಂತ್ರಸ್ತರಿಗೆ ಪರಿಹಾರ ಹಣ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೇಸಿಗೆಯ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಮನೆ, ಬೆಳೆ, ರಸ್ತೆ ಸೇರಿ ಮೂಲಸೌಕರ್ಯಗಳ ಹಾನಿ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಂತ್ರಸ್ತರೊಂದಿಗೆ ಚರ್ಚಿಸಿ ತ್ವರಿತ ಪರಿಹಾರದ ಭರವಸೆ ನೀಡಿದರು.

ಸಂತ್ರಸ್ತರಿಗೆ ವಿಸಿಟಿಂಗ್‌ ಕಾರ್ಡ್‌:

ವಿಳಾಸ ಮತ್ತು ಸಂಪರ್ಕ ಸಂಖ್ಯೆಯ ವಿಸಿಟಿಂಗ್ ಕಾರ್ಡ್ ನೀಡಿ, ಪರಿಹಾರ ವಿಳಂಬವಾದರೆ ಯಾವುದೇ ಸಂದರ್ಭದಲ್ಲಿ ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ. ನಿಮ್ಮ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಸಂತ್ರಸ್ತರಿಗೆ ಭರವಸೆಯ ಮಾತುಗಳನ್ನಾಡಿ ಆತ್ಮವಿಶ್ವಾಸ ತುಂಬಿದರು.

ರಾಣೆಬೆನ್ನೂರು ತಾಲ್ಲೂಕಿನ ಕೃಷ್ಣಾಪೂರ, ಮಾಗೋಡ, ಇಟಗಿ, ಮುಷ್ಟೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತ್ವರಿತವಾಗಿ ದುರಸ್ತಿಗೆ ಕ್ರಮವಹಿಸುವಂತೆ ಪಂಚಾಯತ್ ರಾಜ್ ಎಂಜಿನಿಯರ್‌ಗೆ ಸೂಚನೆ ನೀಡಿದರು. ಕೃಷ್ಣಾಪೂರದ ಅಂಗನವಾಡಿ, ಕೆರೆ ಕೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದ ಹಾನಿಯಾಗಿರುವ ಹಳೆ ಬಂಕಾಪುರ ರಸ್ತೆ, ಹೋತನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ತ್ವರಿತವಾಗಿ ಶಾಲಾ ಕಟ್ಟಡ ದುರಸ್ತಿಗೊಳಿಸಲು ಕ್ರಮವಹಿಸಬೇಕು. ರಸ್ತೆ, ಕಟ್ಟಡಗಳ ಹಾನಿ ಕುರಿತಂತೆ ತ್ವರಿತವಾಗಿ ಸರ್ವೆ ಮಾಡಿ ದುರಸ್ತಿಗೆ ಕ್ರಮವಹಿಸಬೇಕು. ಮನೆಹಾನಿ ಮತ್ತು ಬೆಳೆಹಾನಿ ಪರಿಹಾರ ಹಣವನ್ನು ಸಂತ್ರಸ್ತ ಫಲಾನುಭವಿಗಳಿಗೆ ತ್ವರಿತವಾಗಿ ಪಾವತಿಸುವಂತೆ ಸೂಚನೆ ನೀಡಿದರು.

ದಾಖಲೆ ಪರಿಶೀಲನೆ:

ಶಿಗ್ಗಾವಿ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ಮಣಿವಣ್ಣನ್, ಮನೆಹಾನಿ ಸಮೀಕ್ಷೆ, ಯಾವ ಯಾವ ದಾಖಲೆ ಸಂಗ್ರಹಿಸಿದ್ದಾರೆ ಹಾಗೂ ಅಧಿಕಾರಿಗಳ ವರದಿ ಹಾಗೂ ಫೋರ್ಟೆನಲ್ಲಿ ದಾಖಲೀಕರಣ ಪ್ರಕ್ರಿಯೆ ಕುರಿತಂತೆ ವಿವರವಾಗಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪರಿಹಾರ ವಿಳಂಬ: ತೀವ್ರ ಅಸಮಾಧಾನ

ಹಾವೇರಿ ತಾಲ್ಲೂಕಿನ ಕೋಳೂರ ಗ್ರಾಮದ ರೈತ ಜಯಪ್ಪ ಹೋಳಗಿ ಅವರ ಜಮೀನಿನಲ್ಲಿ ಮಳೆಗಾಳಿಗೆ ಉರುಳಿ ಬಿದ್ದಿರುವ ಪಪ್ಪಾಯ ಹಾಗೂ ತೆಂಗಿನ ಮರಗಳ ವೀಕ್ಷಣೆ ಮಾಡಿದರು. ಇದೇ ಗ್ರಾಮದ ಜಮೀನಿನ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಹಾನಿಯನ್ನು ಪರಿಶೀಲನೆ ನಡೆಸಿ ರೈತರ ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್ ಸ್ವೀಕರಿಸಿದರು.

ತೆಂಗಿನ ತೋಟಹಾನಿಯಾಗಿ ಮೂರು ದಿನ ಕಳೆದರೂ ಸಮೀಕ್ಷೆ ಪೂರೈಸಿ ಪರಿಹಾರ ಪಾವತಿಸದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ 3 ದಿನದೊಳಗಾಗಿ ಪರಿಹಾರ ಪಾವತಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT