ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯ ರಾಜಕಾರಣದಿಂದ ಪ್ರಗತಿ ಸಾಧ್ಯವಿಲ್ಲ: ಸಂಸದ ಶಿವಕುಮಾರ ಉದಾಸಿ

‘ಶತಾಬ್ದಿ ಸಂಭ್ರಮ’ ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ ಉದಾಸಿ ಅಭಿಮತ
Last Updated 1 ಮಾರ್ಚ್ 2021, 8:16 IST
ಅಕ್ಷರ ಗಾತ್ರ

ಹಾವೇರಿ: ‘ಎಲ್ಲರಿಗೂ ಈಗ ಜನಪ್ರಿಯ ರಾಜಕಾರಣ ಬೇಕಿದೆ. ಇದು ದೇಶದಲ್ಲಿ ಕೆಟ್ಟ ಅರ್ಥವ್ಯವಸ್ಥೆ ಸೃಷ್ಟಿಸುತ್ತದೆ. ಜನಪ್ರಿಯ ರಾಜಕಾರಣದಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ಅಭಿವೃದ್ಧಿಪರ ರಾಜಕಾರಣ ಇಂದಿನ ಅಗತ್ಯವಾಗಿದೆ’ ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯಪಟ್ಟರು.

ನಗರದ ರಜನಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಾವೇರಿ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ನ ‘ಶತಾಬ್ದಿ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು ದಶಕಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದೆ. ‘ಆರ್ಥಿಕ ಸೇರ್ಪಡೆ’ಯು ದೇಶದ ಆರ್ಥಿಕ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಇದನ್ನು ಅರಿತ ಕೇಂದ್ರ ಸರ್ಕಾರ ಸಾಮಾನ್ಯ ಜನರು, ಆರ್ಥಿಕ ದುರ್ಬಲರು ‘ಜನಧನ’ ಖಾತೆಯನ್ನು ತೆರೆಯಲು ಯೋಜನೆ ರೂಪಿಸಿತು. ಇದರ ಪರಿಣಾಮ ದೇಶದಲ್ಲಿ ಇಂದು 42 ಕೋಟಿ ಜನಧನ ಖಾತೆಗಳಿದ್ದು, ₹1.25 ಲಕ್ಷ ಕೋಟಿ ಠೇವಣಿ ಇದೆ’ ಎಂದರು.

ಡಿಜಿಟಲ್‌ ವಹಿವಾಟು:ದೇಶದಲ್ಲಿ 2025ರ ವೇಳೆಗೆ ನಿತ್ಯ ₹15 ಲಕ್ಷ ಕೋಟಿ ‘ಡಿಜಿಟಲ್‌ ವಹಿವಾಟು’ ನಡೆಯಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 2010ರಲ್ಲಿ ₹48 ಲಕ್ಷ ಕೋಟಿ ಠೇವಣಿ ಇದ್ದದ್ದು, 2020ರ ವೇಳೆಗೆ ₹145 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಸಹಕಾರ ಬ್ಯಾಂಕ್‌ಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಅಪಪ್ರಚಾರ ಸಲ್ಲ:ಮೂರು ಕೃಷಿ ಕಾಯ್ದೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಅಪಪ್ರಚಾರ ಮಾಡಲಾಗುತ್ತಿದೆ. ಎಂ.ಎಸ್‌.ಪಿ. ತೆಗೆದು ಹಾಕುತ್ತಾರೆ ಎಂದು ವದಂತಿ ಹರಡಿಸುತ್ತಿದ್ದಾರೆ. ಕಾಯ್ದೆಗಳಲ್ಲಿ ಲೋಪ ದೋಷಗಳಿದ್ದರೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಹೀಗಾಗಿ ಕಾಯ್ದೆ ಯಶಸ್ವಿಯಾಗಿ ಜಾರಿಯಾಗಲು ಅವಕಾಶ ಮಾಡಿಕೊಡಿ. ಸಶಕ್ತ ಕೃಷಿಗೆ ಈ ಕಾಯ್ದೆಗಳು ಪೂರಕವಾಗಿದೆ ಎಂದು ಸಮರ್ಥಿಸಿಕೊಂಡರು.

ಶಾಸಕ ನೆಹರು ಓಲೇಕಾರ ಮಾತನಾಡಿ, ‘ ಕೆಲವು ಬ್ಯಾಂಕುಗಳ ಆರಂಭವಾದ ಕೆಲವೇ ವರ್ಷಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತವೆ. ಆರ್ಥಿಕ ಶಿಸ್ತು ಮತ್ತು ಗ್ರಾಹಕರ ನಂಬಿಕೆ ಉಳಿಸಿಕೊಂಡಿರುವ ಹಾವೇರಿ ಅರ್ಬನ್‌ ಬ್ಯಾಂಕ್‌ ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

‘₹1 ಕೋಟಿ ನಿವ್ವಳ ಲಾಭ’

ಬ್ಯಾಂಕ್‌ ಅಧ್ಯಕ್ಷ ಗುರುಬಸಪ್ಪ ಎಸ್‌.ಮಾಗಾವಿ (ಅಜಿತ್‌) ಪ್ರಾಸ್ತಾವಿಕ ನುಡಿಗಳನ್ನಾಡಿ, ಹಾವೇರಿಯಲ್ಲಿ 1918ರಲ್ಲಿ ಸಹಕಾರ ತತ್ವದಡಿ ಬಸಪ್ಪ ಚನ್ನಬಸಪ್ಪ ಚಕ್ಕಿ ಅಧ್ಯಕ್ಷತೆಯಲ್ಲಿ ಸೊಸೈಟಿಯನ್ನು ಆರಂಭಿಸಲಾಯಿತು. 1946ರಲ್ಲಿ ಬ್ಯಾಂಕಿನ ಪ್ರವರ್ತಕ ಅಧ್ಯಕ್ಷ ಗುರುಶಾಂತಪ್ಪ ಮಾಗಾವಿ ಅಧ್ಯಕ್ಷತೆಯಲ್ಲಿ ಸೊಸೈಟಿಯು ಅರ್ಬನ್‌ ಬ್ಯಾಂಕ್‌ ಎಂದು ಪರಿವರ್ತನೆಗೊಂಡಿತು. ಹಾವೇರಿ ನಗರದಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೊದಲ ಸಹಕಾರಿ ಬ್ಯಾಂಕ್‌ ಇದಾಗಿದೆ. 2019–20ನೇ ಸಾಲಿಗೆ ₹1 ಕೋಟಿಗೂ ಹೆಚ್ಚು ನಿವ್ವಳ ಲಾಭ ಗಳಿಸಿದೆ’ ಎಂದರು.

ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಮತ್ತು ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಬೆಳ್ಳಿ ನಾಣ್ಯಗಳನ್ನು ಸದಸ್ಯರಿಗೆ ನೀಡಲಾಯಿತು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬ್ಯಾಂಕ್‌ ಉಪಾಧ್ಯಕ್ಷ ಎ.ಎಸ್‌.ಹೇರೂರ, ನಿರ್ದೇಶಕರಾದ ಎನ್‌.ಬಿ.ಯರೇಶೀಮಿ, ಎಸ್‌.ಎಸ್‌. ಹುರಳಿಕುಪ್ಪಿ, ಎಂ.ಕೆ. ಕುರುಬಗೊಂಡ, ಎಸ್‌.ಎಸ್‌.ಕುದರಿ, ಆರ್.ಸಿ. ಮಾಗಾವಿ, ಪಿ.ಡಿ. ಹಂದ್ರಾಳ, ಎಸ್‌.ಜಿ.ಮಹಾಂತ, ಕೆ.ಎಂ. ಸ್ವಾದಿ, ಎಸ್‌.ಎಚ್‌.ಭೀಮಕ್ಕನವರ, ಎ.ಸಿ. ನೀರಲಗಿ, ಆರ್‌.ಬಿ. ಹಿಂಚಿಗೇರಿ, ವ್ಯವಸ್ಥಾಪಕ ಎಂ.ಎಂ. ಶಿವಶೆಟ್ಟರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT