ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಕೇಂದ್ರ ಬರ ಅಧ್ಯಯನ ತಂಡ ಭೇಟಿ: ಕರ್ಜಗಿ, ನೆಲೋಗಲ್, ಬುಡಪನಹಳ್ಳಿ, ಗಂಗಾಪುರಕ್ಕೆ ಭೇಟಿ

ನರೇಗಾ: ಸರಿಯಾಗಿ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಕೇಂದ್ರ ಬರ ಅಧ್ಯಯನ ತಂಡವು ಸಲಹೆ ನೀಡಿತು.

ಜಿಲ್ಲೆಗೆ ಗುರುವಾರ ಭೇಟಿ ನೀಡಿದ ತಂಡವು, ಬ್ಯಾಡಗಿ ತಾಲ್ಲೂಕಿನ ಬುಡಪನಹಳ್ಳಿಯ ಕೆರೆಯಲ್ಲಿ ನಡೆಯುತ್ತಿರುವ ‘ನರೇಗಾ’ ಕಾಮಗಾರಿ ಪರಿಶೀಲಿಸಿ ಹೇಳಿತು. 

‘ಕೆರೆಯ ಪಾತ್ರ, ನೀರು ಬರುವ ದಾರಿ, ನೀರು ಶೇಖರಣೆ ಮತ್ತಿತರ ತಾಂತ್ರಿಕ ವಿಚಾರಗಳ ಅಧ್ಯಯನ ನಡೆಸಬೇಕು. ಬಿರು ಬೇಸಿಗೆಯಲ್ಲೂ ನೀರು ಒಂದೆಡೆ ಶೇಖರಣೆಯಾಗಿ ನಿಲ್ಲುವ ಮಾದರಿಯಲ್ಲಿ ಹೂಳೆತ್ತಬೇಕು. ಇಲ್ಲಿ ವೈಜ್ಞಾನಿಕ ಮಾನದಂಡಗಳು ಕಾಣುತ್ತಿಲ್ಲ’ ಎಂದು ತಂಡದ ನೇತೃತ್ವ ವಹಿಸಿದ್ದ ಕೇಂದ್ರದ ಕೃಷಿ, ಸಹಕಾರ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಅಭಿಲಾಕ್ಷ್‌ ಲಿಖಿ ಹೇಳಿದರು.

‘ತಾಂತ್ರಿಕ ಅಧ್ಯಯನ ನಡೆಸಿ ಕ್ರಿಯಾಯೋಜನೆ ರೂಪಿಸಬೇಕು. ಕೆಲಸಕ್ಕಾಗಿ ಕೆಲಸದಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು ತಂಡದ ಸದಸ್ಯ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಹಿರಿಯ ಸಮಾಲೋಚಕ ಎಸ್.ಸಿ.ಶರ್ಮಾ ಹೇಳಿದರು.

ಏಪ್ರಿಲ್–ಮೇ ತಿಂಗಳಲ್ಲಿ ಕೂಲಿಕಾರರು ತೀವ್ರ ಸಮಸ್ಯೆ ಎದುರಿಸುತ್ತಾರೆ. ಅವರಿಗೆ 100 ಬದಲಾಗಿ, 150 ದಿನಗಳ ಕೂಲಿ ನೀಡಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.

ತಕ್ಷಣವೇ ಕೂಲಿಕಾರರ ಮಾಹಿತಿ ತೆಗೆದ ತಂಡದ ಸದಸ್ಯ, ಕೇಂದ್ರ ಕೃಷಿ ಮತ್ತು ಸಹಕಾರ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಬಿ.ಕೆ.ಶ್ರೀವಾಸ್ತವ, ‘ಇನ್ನೂ 50 ದಿನಗಳ ಕೂಲಿಯನ್ನೇ ನೀಡಿಲ್ಲ. ಮಾರ್ಚ್‌ 31ಕ್ಕೆ ವಾರ್ಷಿಕ ಗುರಿ ಮುಗಿಯುತ್ತದೆ. ಇದ್ದ ಕೂಲಿಯನ್ನೇ ಸಮರ್ಪಕವಾಗಿ ನಿರ್ವಹಿಸಿಲ್ಲ’ ಎಂದು ಪ್ರಶ್ನಿಸಿದರು.

‘ಈಗಾಗಲೇ, ಒಂದು ತಂಡ ಮಾನವ ದಿನಗಳನ್ನು ಪೂರ್ಣಗೊಳಿಸಿದೆ. ಇದು ಬೇರೆಯೇ ತಂಡ’ ಎಂದು ಅಧಿಕಾರಿಗಳು ಸಬೂಬು ನೀಡಲು ಮುಂದಾದರು. ‘ಎಲ್ಲರಿಗೂ ಸಮಾನಾಂತರವಾಗಿ ಕೆಲಸ ಕಲ್ಪಿಸಬಹುದಲ್ಲವೇ?’ ಎಂದು ತಂಡವು ಪ್ರಶ್ನಿಸಿದಾಗ ಅಧಿಕಾರಿಗಳು ಮೌನವಾದರು.

ಕ್ಲುಪ್ತ ಸಮಯಕ್ಕೆ ಕೂಲಿ ಪಾವತಿಯಾಗಿದೆಯೇ? ಎಂದು ತಂಡವು ಕೂಲಿಕಾರರನ್ನು ಪ್ರಶ್ನಿಸಿತು. ಇದಕ್ಕೆ ಹಲವರು ‘ಹೌದು’ ಎಂದರು. ಆದರೆ, ದೂರದಲ್ಲಿದ್ದ ಕೆಲವು ಕೂಲಿಕಾರು, ‘ಇಲ್ಲ’ ಎಂದರು.

ಈ ವರ್ಷ ನರೇಗಾ ಅಡಿಯಲ್ಲಿ 393 ಕೆರೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ವರ್ಷದ ಕಾರ್ಯ ಯೋಜನೆಯನ್ನು ಪೂರ್ವ ಯೋಜಿತ, ತಾಂತ್ರಿಕ ಸಲಹೆಯೊಂದಿಗೆ ಮಾಡುವುದಾಗಿ ಜಿಲ್ಲಾ ಪಂಚಾಯ್ತಿ ಸಿಇಒ ಕೆ. ಲೀಲಾವತಿ ತಿಳಿಸಿದರು.

ಕರ್ಜಗಿ: ನೀರಿನ ಸಮಸ್ಯೆ ಎದುರಿಸುತ್ತಿರುವ ಕರ್ಜಗಿ ಗ್ರಾಮಕ್ಕೆ ವೃಷಭೇಂದ್ರಗೌಡ ಪಾಟೀಲ ಹಾಗೂ ಉದಯಗೌಡ ಪಾಟೀಲ  ಹೊಲದಲ್ಲಿನ ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದ್ದು, ತಂಡವು ವೀಕ್ಷಿಸಿತು.

‘ನೀವು ಯಾವ ಬೆಳೆಯನ್ನು ಬೆಳೆಯುತ್ತೀರಿ?’ ಎಂಬ ತಂಡದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೈತರು, ‘ಮುಂಗಾರಿನಲ್ಲಿ ಜೋಳ ಹಾಗೂ ಹಿಂಗಾರಿನಲ್ಲಿ ಹತ್ತಿ’ ಎಂದರು. ‘ಜೋಳ 4ರಿಂದ 5 ಕ್ವಿಂಟಲ್ ಇಳುವರಿ ಬಂದಿದೆ. ಹತ್ತಿ ಮೊಗ್ಗು ಚಿಕ್ಕ ಗಾತ್ರದಲ್ಲಿತ್ತು. ನಾಲ್ಕರಿಂದ ಐದು ಬಾರಿ ಆಯ್ದರೂ, ಕೇವಲ 4ರಿಂದ 5 ಕ್ವಿಂಟಲ್ ಇಳುವರಿ ಇತ್ತು’ ಎಂದು ಖಾಸಿಂ ಸಾಹೇಬ್ ಮತ್ತಿತರರು ತಿಳಿಸಿದರು. ಸ್ಥಿತಿಗತಿ ಬಗ್ಗೆ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾಹಿತಿ ನೀಡಿದರು.

ನೆಲೋಗಲ್: ಬಳಿಕ ತಾಲ್ಲೂಕಿನ ನೆಲೋಗಲ್ ಗ್ರಾಮದ ನಾಗಪ್ಪ ಬಣಕಾರ ಬಿಳಿ ಜೋಳದ ಹೊಲಕ್ಕೆ ತಂಡ ಭೇಟಿ ನೀಡಿತು. ರೈತ ನಾಗಪ್ಪ ಬಣಕಾರ ಹಾಗೂ ಶಾಂತಪ್ಪ ಬಣಕಾರ ಮಾತನಾಡಿ, ‘ಪ್ರತಿ ವರ್ಷ ಎಕರೆಗೆ 10 ರಿಂದ 15 ಕ್ವಿಂಟಲ್ ಜೋಳ ಬೆಳೆಯಲಾಗುತ್ತಿತ್ತು. ಮಳೆ ಇಲ್ಲದೇ, ಕಾರಣ ತೆನೆ ಕಾಳು ಕಟ್ಟುವ ಹಂತದಲ್ಲಿ ಒಣಗಿದ್ದು, ಒಂದೂವರೆ ಕ್ವಿಂಟಲ್ ಇಳುವರಿ ಸಿಗುವುದೇ ಕಷ್ಟ. ಇದರಿಂದ  ಮೇವಿನ ಸಮಸ್ಯೆ ಉಂಟಾಗಿದೆ ಎಂದರು. 

ರಾಣೆಬೆನ್ನೂರಿನ ಗಂಗಾಪುರದ ಮಲ್ಲಪ್ಪ ರಾಜೇನಹಳ್ಳಿ ಜಮೀನಿಗೆ ಭೇಟಿ ನೀಡಿ, ಹಸಿರು ಮೇವು ಬೆಳೆಯನ್ನು ವೀಕ್ಷಿಸಿದರು. ಹುಲ್ಲತ್ತಿಯ ರೈತ ಪ್ರವೀಣ ಪಾಟೀಲ ಡೇರಿಗೆ ಭೇಟಿ ನೀಡಿ, ಒಣಮೇವು ಹಾಗೂ ಹಸಿರು ಮೇವನ್ನು ವೀಕ್ಷಿಸಿದರು.

ಬೆಳಿಗ್ಗೆ ಆರಂಭದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳಿಂದ ಜಿಲ್ಲೆಯ ಬರಪರಿಸ್ಥಿತಿ ಕುರಿತು ಮಾಹಿತಿ ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು