ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ| ಲಿಂಗಾನುಪಾತದ ವ್ಯತ್ಯಯ ತಗ್ಗಲಿ: ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ

Last Updated 22 ಜನವರಿ 2020, 14:29 IST
ಅಕ್ಷರ ಗಾತ್ರ

ಹಾವೇರಿ: ‘ಹೆಣ್ಣು ಮಕ್ಕಳ ರಕ್ಷಣೆಯ ಜಾಗೃತಿ ಕೇವಲ ಸಮಾರಂಭಗಳಿಗೆ ಸೀಮಿತವಾಗದೆ, ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಅರಿವು ಮೂಡಬೇಕು. ಸ್ವಜಾಗೃತಿ ಮೂಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಹೇಳಿದರು.

‘ಮಗಳನ್ನು ಉಳಿಸಿ ಮಗಳನ್ನು ಓದಿಸಿ’ ಯೋಜನೆಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಗರದ ಜಿಲ್ಲಾ ಭಾಲಭವನ ಉದ್ಯಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಲಿಂಗಾನುಪಾತದಲ್ಲಿರುವ ವ್ಯತ್ಯಾಸ ಗಮನಿಸಿದಾಗ ಭವಿಷ್ಯದ ದಿನಗಳಲ್ಲಿ ನಾಗರಿಕ ಸಮಾಜಕ್ಕೆ ದೊಡ್ಡ ಪ್ರಮಾಣದ ಪೆಟ್ಟುಬೀಳುವ ಸಂಭವವಿದೆ. 2011ರ ಜನಗಣತಿ ಪ್ರಕಾರ ಒಂದು ಸಾವಿರ ಪುರುಷರಿಗೆ 954 ಮಹಿಳೆಯರಿದ್ದಾರೆ. ಚುನಾವಣೆ ಮತದಾರರ ಪಟ್ಟಿಯನ್ನು ಅವಲೋಕಿಸಿದಾಗ ಒಂದು ಸಾವಿರ ಪುರುಷರಿಗೆ 850 ಮಹಿಳೆಯರಿದ್ದಾರೆ. ಈ ವ್ಯತ್ಯಯ ಕಡಿಮೆಯಾಗಬೇಕು. ಸಮಾಜದಲ್ಲಿ ಭ್ರೂಣ ಹತ್ಯೆ ಹೆಚ್ಚಾಗಿದ್ದರಿಂದ ಮಹಿಳೆಯರ ಕೊರತೆ ಕಾಣುತ್ತಿದೆ. ಈ ನ್ಯೂನತೆಯನ್ನು ಸರಿಪಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಣ್ಣು ಮಗುವಿನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವಮೂಲಕ ಆಚರಿಸಲಾಯಿತು. ಕುಮಾರಿ ಅನ್ವಿತಾಳ ಹುಟ್ಟುಹಬ್ಬದ ಪ್ರಯುಕ್ತ ಉದ್ಯಾನದಲ್ಲಿ ಸಸಿಗಳನ್ನು ನೆಡಲಾಯಿತು. ಸಮಾಜ ಸುಧಾರಕಿ ಹಸೀನಾ ಹೆಡಿಯಾಲ ಅವರನ್ನು ಸನ್ಮಾನಿಸಲಾಯಿತು. ಭಾಗ್ಯಲಕ್ಷ್ಮೀ ಬಾಂಡ್‍ಗಳನ್ನು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಉಳಿತಾಯ ಖಾತೆ ಪುಸ್ತಕಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ ಶೆಟ್ಟೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿನಿ ಕೊಂಡಿ, ಸೋಮನಗೌಡ ಗಾಳಿಗೌಡ್ರ, ಅಂಗನವಾಡಿಯ ಕಾರ್ಯಕರ್ತೆಯರು, ಮಕ್ಕಳು ಹಾಗೂ ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT