ಬುಧವಾರ, ಜನವರಿ 26, 2022
26 °C

ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಲಿ: ಪ್ರಾಧ್ಯಾಪಕಿ ಡಾ.ಪುಷ್ಪಾ ಶಲವಡಿಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಇತಿಹಾಸದುದ್ದಕ್ಕೂ ಮಹಿಳೆಯನ್ನ ಅಬಲೆಯಂತೆ ಬಿಂಬಿಸಿ ಅಡುಗೆ ಮನೆಗೆ ಸೀಮಿತಗೊಳಿಸಿದ್ದಾರೆ. ಅವಳ ಮೇಲೆ ಇನ್ನಿಲ್ಲದ ಕಟ್ಟುಪಾಡುಗಳನ್ನು ಹಾಕಿ ದೌರ್ಜನ್ಯ, ಶೋಷಣೆಗೆ ಗುರಿ ಮಾಡಿರುವುದು ಶೋಚನೀಯ. ಸ್ತ್ರೀಯರ ನಿಜವಾದ ಅಂತಃಸತ್ವ ಅರಳಬೇಕಾದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ’ ಎಂದು ಹಾವೇರಿಯ ಶಿವಲಿಂಗೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಪುಷ್ಪಾ ಶಲವಡಿಮಠ ನುಡಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ‘ರಾಷ್ಟ್ರೀಯ ಏಕತಾ ಸಪ್ತಾಹ’ದ ಅಂಗವಾಗಿ ಹಮ್ಮಿಕೊಂಡಿದ್ದ ‘ಮಹಿಳಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು. 

ಗಂಡು– ಹೆಣ್ಣು ಈ ಸೃಷ್ಟಿ ಕಲ್ಪಿಸಿದ ಅದ್ಭುತ ಜೋಡಿ. ಇಲ್ಲಿ ಯಾರೋ ಒಬ್ಬರು ಇಲ್ಲದಿದ್ದರೂ ಮಾನವ ಜನಾಂಗದ ಉಳಿವನ್ನು ಊಹಿಸಲೂ ಸಾಧ್ಯವಿಲ್ಲ. ಅದರಲ್ಲೂ ಮಹಿಳೆ ಇಲ್ಲದ ಜಗತ್ತು ಕಲ್ಪನೆಗೆ ನಿಲುಕುವುದಿಲ್ಲ. ಭಾರತೀಯ ಸಮಾಜದಲ್ಲಿ ಮಹಿಳೆಯ ಪಾತ್ರ ಅದ್ವಿತೀಯವಾದದ್ದು. ‘ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ತೂಗಬಲ್ಲವು’ ಎಂಬಂತೆ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ತೋರಿದ್ದಾರೆ ಎಂದರು. 

ಸಾಹಿತಿ ಶೇಖರ್ ಭಜಂತ್ರಿ ಮಾತನಾಡಿ, ಮಹಿಳೆಯರ ಶಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆಯನ್ನು ನಮ್ಮ ಕೌಟುಂಬಿಕ ವ್ಯವಸ್ಥೆ ಮತ್ತು ಸಮಾಜ ಬೆಳೆಸುವಲ್ಲಿ ಸೋತಿವೆ. ಶತಮಾನಗಳಿಂದಲೂ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ಮುಂದುವರಿಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಂತ್ವನ ಕೇಂದ್ರದ ಪರಿಮಳಾ ಜೈನ್‌ ಅವರನ್ನು ಸನ್ಮಾನಿಸಲಾಯಿತು. ಸುನಂದಾ ಶಿಲೆ ಮಾತನಾಡಿದರು. ಪುಷ್ಪಲತಾ ಡಿ.ಎಲ್. ಅಧ್ಯಕ್ಷತೆ ವಹಿಸಿದ್ದರು. ತನಿಷಾ ಸ್ವಾಗತಿಸಿ, ಶಾರದಾ ಮತ್ತು ಸಹನಾ ನಿರೂಪಿಸಿ, ಕ್ಯಾತ್ಯಾಯಿನಿ ಇಟಗಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು