ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ಅಭಿವೃದ್ಧಿ ಕಂಡ ಚಿಕ್ಕಬಾಸೂರ

Published 14 ಜನವರಿ 2024, 8:22 IST
Last Updated 14 ಜನವರಿ 2024, 8:22 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಮಲೆನಾಡು ಭಾಗದ ಕೊನೆಯ ಗ್ರಾಮವಾಗಿರುವ ಚಿಕ್ಕಬಾಸೂರ 6 ಸಾವಿರ ಜನಸಂಖ್ಯೆ ಹೊಂದಿದೆ.

ಚಿಕ್ಕ ಭೂಸೂರರು ಎಂಬ ಸಾಮಂತ ಅರಸರು ಈ ಗ್ರಾಮವನ್ನು ಆಳುತ್ತಿದ್ದರು. ಹೀಗಾಗಿ ಚಿಕ್ಕಭೂಸೂರ ಕ್ರಮೇಣ ಚಿಕ್ಕಬಾಸೂರ ಎಂದಾಯಿತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

949.47 ಹೆಕ್ಟೇರ್‌ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಗ್ರಾಮವು ಕೆಂಪು ಮತ್ತು ಮಸಾರಿ ಮಣ್ಣಿನ ಲಕ್ಷಣ ಹೊಂದಿದೆ. ಖಾಸಗಿ ಅನುದಾನಿತ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಉರ್ದು ಪ್ರೌಢ ಶಾಲೆಗಳಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಿದೆ.

ಮೆಟ್ರಿಕ್‌ ನಂತರದ ಸರ್ಕಾರಿ ಬಾಲಕಿಯರ ವಸತಿ ನಿಲಯ ಆರಂಭವಾದ ಬಳಿಕ ಹೆಣ್ಣು ಮಕ್ಕಳು 30 ಕಿ.ಮೀ ಅಂತರದಲ್ಲಿರುವ ತಾಲ್ಲೂಕು ಕೇಂದ್ರಕ್ಕೆ ಹೋಗದೆ ಪದವಿ ಶಿಕ್ಷಣದಿಂದ ವಂಚಿತರಾಗುವುದು ತಪ್ಪಿದಂತಾಗಿದೆ.

ಈ ಹಿಂದೆ ಮೆಣಸಿನಕಾಯಿ ಇಲ್ಲಿಯ ಪ್ರಮುಖ ಬೆಳೆಯಾಗಿತ್ತು. ಕ್ರಮೇಣ ಜೋಳ, ಭತ್ತ, ರಾಗಿ,ಕಬ್ಬು, ಇತ್ತೀಚೆಗೆ ಶುಂಠಿ ಹಾಗೂ ಅಡಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಎಪಿಎಂಸಿ ಸಬ್‌ ಯಾರ್ಡ್‌ ತಲೆ ಎತ್ತಿದ್ದು, ಗೋವಿನಜೋಳ ಹಾಗೂ ಇನ್ನಿತರ ವಹಿವಾಟು ನಡೆಯುತ್ತಿದೆ ಎಂದು ಸ್ಥಳೀಯರಾದ ಪ್ರಭುಲಿಂಗ ದೊಡ್ಮನಿ ಹೇಳಿದರು.

ಗ್ರಾಮದ ಸುತ್ತಲೂ ದ್ಯಾಮವ್ವನಗುಡ್ಡ, ಮಸಾರಿಗುಡ್ಡ, ಹಳ್ಳಳ್ಳಗುಡ್ಡಗಳಿದ್ದು, ದೊಡ್ಡಕೆರೆ, ಅಣ್ಣನಕೆರೆ, ತಮ್ಮನಕೆರೆಗಳಿವೆ. ಅಲ್ಲದೆ ಬೋಮ್ಮನಕಟ್ಟೆ, ಲಿಂಗನಕಟ್ಟೆ, ಬಸವನಕಟ್ಟೆ, ನಾಯಕನ ಕಟ್ಟೆ, ಸಾಪನ ಕಟ್ಟೆ, ಹೊಸಕಟ್ಟೆ, ಮುತ್ತಲಕಟ್ಟೆ, ಮಾದಾರನ ಕಟ್ಟೆ, ಕಾಗಿಕಟ್ಟೆ, ಗೌರವ್ವನ ಕಟ್ಟೆ ಎಂಬ ಹೆಸರಿನ ನೂರಾರು ಕೆರೆ ಕಟ್ಟೆಗಳಿವೆ.

ಚಿಕ್ಕಬಾಸೂರ ಗ್ರಾಮದಲ್ಲಿ ಅತ್ಯಂತ ಪ್ರಾಚೀನ ಕೋಟೆ ಇದ್ದು, ಕ್ರಿ.ಶ 12ನೇ ಶತಮಾನದ ಈಶ್ವರ (ರಾಮಲಿಂಗೇಶ್ವರ) ದೇವಸ್ಥಾನ ಹಾಗೂ ತಿಳವಳ್ಳಿಗೆ ಹೋಗುವ ಮಾರ್ಗದಲ್ಲಿ ಸಿದ್ಧರಾಮೇಶ್ವರ ದೇವಸ್ಥಾನಗಳನ್ನು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ.

8ನೇ ಶತಮಾನದ ಈಶ್ವರ (ಸಿದ್ಧೇಶ್ವರ) ಗುಹಾ ದೇವಾಲಯವಿದ್ದು, ‘ಗುರು ಸಿದ್ಧರಾಮೇಶ್ವರ’ರು ಕೆಲವು ವರ್ಷಗಳ ಕಾಲ ಇಲ್ಲಿಯೇ ತಂಗಿದ್ದರು. ಹೀಗಾಗಿ ‘ಸಿದ್ಧೇಶ್ವರ ಗುಹೆ’ ಎಂದು ಕರೆಯಲಾಗುತ್ತಿದೆ. ಕೋಟೆಯೊಳಗಡೆ ಕಲ್ಲಿನಿಂದ ಸುಂದರವಾಗಿ ನಿರ್ಮಿಸಿದ ರಾಮಲಿಂಗೇಶ್ವರ ದೇವಸ್ಥಾನವಿದ್ದು, ಬೃಹದಾಕಾರದ ಈಶ್ವರ ಹಾಗೂ ನಂದಿ ವಿಗ್ರಹಗಳು ಮುಖಾಮುಖಿಯಾಗಿ ಸ್ಥಾಪಿತಗೊಂಡಿವೆ.

ಗ್ರಾಮದ ಮಧ್ಯಭಾಗದಲ್ಲಿ ವೀರಭದ್ರೇಶ್ವರ, ದೊಡ್ಡಕೆರೆಯ ಏರಿಯ ಮೇಲೆ ಕೋಡಿ ಬಸವೇಶ್ವರ, ದ್ಯಾಮವ್ವ ದೇವಿ, ಉಡಚಲವ್ವ ದೇವಿ, ಗಜಲಕ್ಷಿದೇವಿ, ಆದಿಶಕ್ತಿ, ಗಣೇಶ, ಬ್ರಹ್ಮಲಿಂಗೇಶ್ವರ, ಬೀರಲಿಂಗೇಶ್ವರ, ಮಾತಂಗಿದೇವಿ, ಗಂಗಾ ಪರಮೇಶ್ವರಿ, ಚೌಡೇಶ್ವರಿ, ಆಂಜನೇಯ, ಮೈಲಾರಲಿಂಗೇಶ್ವರ ಹಾಗೂ ಭಗವಾನ ಸಂಕಟ ಪರಿಹಾರ ಮುನಿಸುವೃತ ತೀರ್ಥಂಕರ ಬಸದಿಗಳಿರುವುದು ಪ್ರಾಚೀನ ಇತಿಹಾಸವನ್ನು ಸಾರುತ್ತದೆ.

ತ್ಯಾಗ ಜೀವನಕ್ಕೆ ಸಾಕ್ಷಿ: ಮುಸಲ್ಮಾನರ ಮಸೀದಿ, ಹಜರತ್ ಮೆಹಬೂಬ್ ಸುಬಾನಿ ಹಾಗೂ ಹಜರತ್ ಚಮನ್‌ಸಾವಲಿ ದರ್ಗಾಗಳಿವೆ. ದೇವಸ್ಥಾನಗಳಲ್ಲಿ ಐತಿಹಾಸಿಕ ಸುಂದರ ಸ್ಮಾರಕಗಳು ಕಂಡುಬರುತ್ತವೆ. ಅವುಗಳನ್ನು ನೊಳಂಬ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ರಾಮಲಿಂಗೇಶ್ವರ ಗುಡಿಯ ಬೃಹತ್ ಶಿವಲಿಂಗ ಅದರ ಮುಮ್ಮಖದಲ್ಲಿ ನಿಂತ ನವಿಲಿನ ಮೇಲೆ ಕುಳಿತಿರುವ ಕಾರ್ತಿಕೇಯನ ಶಿಲ್ಪ, ಕಿಟಕಿಯ ಜಾಲಂದ್ರಗಳು, ನವಗ್ರಹ, ಬೃಹದಾಕಾರದ ನಂದಿ ಹಾಗೂ ನವರಂಗದಲ್ಲಿರುವ ನಾಲ್ಕು ಕಂಬಗಳು ಆಕರ್ಷಕವಾಗಿವೆ. ಮಹಾಸತಿ ಕಲ್ಲು, ವೀರಗಲ್ಲು, ನಿಷದಿ ಕಲ್ಲುಗಳು ವೀರ ಪರಂಪರೆ ಹಾಗೂ ತ್ಯಾಗ ಜೀವನಕ್ಕೆ ಸಾಕ್ಷಿಯಾಗಿವೆ ಎಂದು ಇಲ್ಲಿನ ಸಿದ್ಧರಾಮೇಶ್ವರ ಅಜಗೊಂಡ್ರ ಹೇಳುತ್ತಾರೆ.

ಚನ್ನಬಸವಣ್ಣನವರು ವಚನ ಸಾಹಿತ್ಯವನ್ನು ತೆಗೆದುಕೊಂಡು ಕಾಡುಮೇಡು ಅಲೆಯುತ್ತಾ ಉಳಿವಿಯನ್ನು ತಲುಪಿದರೆ. ಲೋಕಕಲ್ಯಾಣಕ್ಕಾಗಿ ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ದಕ್ಷಿಣ ಕರ್ನಾಟಕದ ಕಡೆಗೆ ಸಂಚರಿಸುತ್ತಾ ಗುರು ಸಿದ್ಧರಾಮೇಶ್ವರರು ಚಿಕ್ಕಬಾಸೂರಿಗೆ ಆಗಮಿಸಿ ಸುತ್ತಲಿನ ಹಳ್ಳಿಗಳಲ್ಲಿ ಕೆರೆ, ಕಟ್ಟೆಗಳನ್ನು ನಿರ್ಮಿಸುತ್ತಾ ರೈತರ ಪಾಲಿಗೆ ದೈವರೂಪವಾಗುತ್ತಾರೆ.

ಆಗ ನೊಳಂಬರು ಕದಂಬರನ್ನು ಸೋಲಿಸಿ ಹಾನಗಲ್‌ನ್ನು ವಶಪಡಿಸಿಕೊಂಡು 32 ಸಾವಿರ ಗ್ರಾಮಗಳನ್ನು ಆಳುತ್ತಾರೆ. ಆ ಸಂದರ್ಭದಲ್ಲಿ ಗುರು ಸಿದ್ಧರಾಮೇಶ್ವರರು ಗುಹೆಯಲ್ಲಿಯೇ ವಾಸವಾಗಿ ಅದರ ಮುಂದೆ ಬನ್ನಿಮರದಕಟ್ಟೆ ಮತ್ತು ಗ್ರಾಮದ ಮಧ್ಯಭಾಗದಲ್ಲಿರುವ ಗದ್ದಿಕಲ್ಲು ಮೇಲೆ ಕುಳಿತು ಜನರಿಗೆ ಉಪದೇಶ ಮಾಡುತ್ತಿದ್ದರು. ಇದೇ ರೀತಿ ಸುತ್ತಮುತ್ತಲಿನ ಬಡಮಲ್ಲಿ, ಹಿರೇಹಳ್ಳಿ, ಕಿರವಾಡಿ, ಶಡಗರವಳ್ಳಿ, ಮಲ್ಲಿಗಾರ ಮುಂತಾದ ಗ್ರಾಮಗಳಿಗೆ ತೆರಳಿ ಉಪದೇಶ ಮಾಡಿದರು.

ಬ್ಯಾಡಗಿ ತಾಲ್ಲೂಕು ಚಿಕ್ಕಬಾಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ
ಬ್ಯಾಡಗಿ ತಾಲ್ಲೂಕು ಚಿಕ್ಕಬಾಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ
ಸೊಂದೆ ಅರಸರಿಗೆ ಸಂತಾನ ಕರುಣಿಸಿದ ಗುರು ಸಿದ್ಧರಾಮೇಶ್ವರ
ಉತ್ತರ ಕನ್ನಡ ಜಿಲ್ಲೆಯ ಸಾಮಂತ ಸೊಂದೆಯ ಅರಸರು ಬೇಟೆಯಾಡುತ್ತಾ ಈ ಭಾಗಕ್ಕೆ ಬಂದಾಗ ಗುಹೆಯಲ್ಲಿ ದೊರೆಗೆ ಊಟ ಮಾಡಿಸಿ ಯೋಗಕ್ಷೇಮ ವಿಚಾರಿಸಿದಾಗ ಅರಸನಿಗೆ ಪುತ್ರ ಸಂತಾನವಿಲ್ಲದ್ದು ತಿಳಿದುಬರುತ್ತದೆ. ವರ್ಷದೊಳಗೆ ಗಂಡು ಸಂತಾನವಾಗುತ್ತದೆ ಎಂದು ಆಶೀರ್ವದಿಸಿದ್ದರಂತೆ. ಹೀಗಾಗಿ ಭಕ್ತನ ಒತ್ತಾಯವನ್ನು ತಿರಸ್ಕರಿಸಲಾಗದೇ ಸಿದ್ಧರಾಮೇಶ್ವರರು ಲಿಂಗಪೂಜೆಗಾಗಿ ಕಲ್ಲಿನ ಬಾವಿಯನ್ನು ನಿರ್ಮಿಸಿ ಹೂವಿನ ತೋಟ ವಾಸವಾಗಿರಲು ಕಲ್ಲಿನ ಮಂಟಪ ಹಾಗೂ ಮಂಚವೊಂದನ್ನು ಸಿದ್ಧರಾಮೇಶ್ವರಿಗೆ ನಿರ್ಮಿಸಿಕೊಟ್ಟಿದ್ದರೆನ್ನುವುದು ಶಾಸನದಿಂದ ತಿಳಿದು ಬರುತ್ತದೆ. 14ರಿಂದ ಜಯಂತಿ: ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಸಿದ್ಧರಾಮೇಶ್ವರರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮ ಜ.14ರಿಂದ ಎರಡು ದಿನಗಳ ವರೆಗೆ ನಡೆಯಲಿದೆ.

Cut-off box

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT