ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಗಾಗಿ ದೇವಸ್ಥಾನ ನಿರ್ಮಿಸಿದ ಮಕ್ಕಳು; ಅಮ್ಮನ ಮೂರ್ತಿಗೆ ನಿತ್ಯ ಪೂಜೆ

ಬಾಳೂರಿನಲ್ಲೊಂದು ಮಾತಾ ದೇವಾಲಯ
Last Updated 20 ಮೇ 2021, 16:19 IST
ಅಕ್ಷರ ಗಾತ್ರ

ಅಕ್ಕಿಆಲೂರ: ಅಭಿಮಾನಿಗಳು ನೆಚ್ಚಿನ ನಟ–ನಟಿಯರಿಗಾಗಿ ದೇವಸ್ಥಾನ ಕಟ್ಟಿಸಿದ ಉದಾಹರಣೆಗಳು ಸಾಕಷ್ಟಿವೆ. ಆದರೆ, ಹೆತ್ತ ತಾಯಿಯನ್ನೇ ದೇವರನ್ನಾಗಿಸಿ, ದೇಗುಲ ನಿರ್ಮಿಸಿರುವ ಉದಾಹರಣೆಗಳು ವಿರಳ.

ಹಾನಗಲ್ ತಾಲ್ಲೂಕಿನ ಬಾಳೂರು ಗ್ರಾಮದಲ್ಲಿ ಅಣ್ಣಪ್ಪ ಲಮಾಣಿ ಎಂಬುವರು ತಮ್ಮ ತಾಯಿಗಾಗಿ ದೇವಸ್ಥಾನ ನಿರ್ಮಿಸುವ ಮೂಲಕ ಮಾತೃಪ್ರೇಮವನ್ನು ಮೆರೆದಿದ್ದಾರೆ.ಇಲ್ಲಿ ನಿತ್ಯವೂ ತಾಯಿ ದೇವರಿಗೆ ಪೂಜೆ, ಪುನಸ್ಕಾರಗಳು ಸಲ್ಲುತ್ತಿವೆ.

ದೇವತೆಯ ಸ್ಥಾನದಲ್ಲಿರುವ ಈ ತಾಯಿಯ ಹೆಸರೇ ಹೇಮಲವ್ವ ಲಮಾಣಿ. ತನ್ನ ತಾಯಿಯ ದೇವಸ್ಥಾನವನ್ನು ನಿರ್ಮಿಸುವ ಯೋಚನೆ ಹುಟ್ಟಿದ್ದಕ್ಕೂ ಒಂದು ಕಾರಣವಿದೆ.ಅಣ್ಣಪ್ಪ ಲಮಾಣಿ ಎಂಬುವರ ಸ್ವಂತ ಊರು ಹಾನಗಲ್‌ ತಾಲ್ಲೂಕಿನ ಮಾವಕೊಪ್ಪ ಗ್ರಾಮ. ಇಲ್ಲಿ ಅರ್ಚಕ ವೃತ್ತಿಯ ಮನೆತನ ಯಾವುದೋ ಕಾರಣದಿಂದ ಪೂಜೆಯ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿ ಆ ಊರನ್ನು ಬಿಟ್ಟು ತನ್ನ ತವರೂರಾದ ಬಾಳೂರಿಗೆ ಬಂದು ನೆಲೆಸಿದ ಹೇಮಲವ್ವಳ ಕುಟುಂಬ ಅಲ್ಪ ಸ್ವಲ್ಪ ಜಮೀನಿನಲ್ಲಿ ವ್ಯವಸಾಯವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿತ್ತು.

ಹೇಮಲವ್ವಳಿಗೆ ನಾಲ್ವರು ಗಂಡು ಮಕ್ಕಳು. ಇವರಲ್ಲಿ ಮಾರಪ್ಪ ಲಮಾಣಿ, ತಾವರೆಪ್ಪ ಲಮಾಣಿ, ವೀರಪ್ಪ ಲಮಾಣಿ ಇದೇ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇನ್ನೊಬ್ಬ ಪುತ್ರ ಅಣ್ಣಪ್ಪ ಲಮಾಣಿ ಬೆಂಗಳೂರಿನ ವಿಧಾನ ಪರಿಷತ್ ಸಚಿವಾಲಯದಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೇಮಲವ್ವ ಒಬ್ಬ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳು. ಪೂಜೆಯ ಸಮಯದಲ್ಲಿ ನೂರಕ್ಕೂ ಹೆಚ್ಚು ಲಂಬಾಣಿ ಭಾಷೆಯ ನುಡಿಗಟ್ಟುಗಳನ್ನು ಹೇಳುತ್ತಿದ್ದರು. ಅಲ್ಪ ಸಲ್ಪ ಗಿಡಮೂಲಿಕೆ ಔಷಗಳ ಬಗ್ಗೆ ಮಾಹಿತಿ ಇದ್ದ ಹೇಮಲವ್ವ ಏನಾದರೂ ಕಾಯಿಲೆ ಬಂದರೆ ಗಿಡಮೂಲಿಕೆ ಔಷಧಿಯನ್ನು ಕೊಡುತ್ತಿದ್ದರು. ಹಬ್ಬ ಹರಿದಿನ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ ಲೆಕ್ಕವಿಲ್ಲದಷ್ಟು ಲಂಬಾಣಿ ಭಾಷೆಯ ಜನಪದ ಮತ್ತು ಇನ್ನಿತರೆ ಹಾಡುಗಳನ್ನು ಹಾಡುತ್ತಿದ್ದರು.

ಈ ಕಾರಣದಿಂದ ಸುತ್ತಮುತ್ತಲಿನ ಹಲವು ತಾಂಡಾಗಳ ಜನರಿಗೆ ಹೇಮಲವ್ವ ಅವರನ್ನು ಕಂಡರೆ ಅಚ್ಚು ಮೆಚ್ಚು. ಯಾರಿಗೂ ಕೇಡನ್ನು ಬಯಸದ ಈ ಹೇಮಲವ್ವ ಯಾವುದೇ ಕಾರ್ಯಕ್ರಮವಿರಲಿ ಇರಲೇಬೇಕು. ಹೀಗಾಗಿ ತಾಂಡದ ಎಲ್ಲರ ಜನರ ಮನದಲ್ಲಿ ಹೇಮಲವ್ವ ತಾಯಿ ಸ್ವರೂಪಿಯಾದಳು. ಮಕ್ಕಳಿಗೆ ಅಚ್ಚುಮೆಚ್ಚಿನ ತಾಯಿಯಾಗಿದ್ದ ಹೇಮಲವ್ವ. 1998ರಲ್ಲಿ ಮರಣ ಹೊಂದಿದಳು.

ತನ್ನ ತಾಯಿಯ ನಿಸ್ವಾರ್ಥ ಸೇವೆಯನ್ನು ಕಂಡ ಮಕ್ಕಳು ಆಕೆಯನ್ನು ದೇವತೆಯ ಸ್ಥಾನದಲ್ಲಿ ಕಾಣಬೇಕು ಎನ್ನುವ ಉದ್ದೇಶದಿಂದ 2010ರಲ್ಲಿ ₹3 ಲಕ್ಷ ವೆಚ್ಚದಲ್ಲಿ ಅಣ್ಣಪ್ಪ ಲಮಾಣಿ ಮತ್ತು ಸಹೋದರರು ಜೊತೆಗೂಡಿ ದೇವಸ್ಥಾನವನ್ನು ನಿರ್ಮಿಸಿದರು. ಈ ದೇವಸ್ಥಾನದಲ್ಲಿ ತಮ್ಮ ಸಂಪ್ರದಾಯಸ್ಥ ಉಡುಗೆಯಲ್ಲಿಯೇ ಹೇಮಲವ್ವಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ಈಗ ಈ ದೇವಸ್ಥಾನಕ್ಕೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಇವರ ಮನೆಯವರೇ ಪೂಜೆಯನ್ನು ಮಾಡುತ್ತಿದ್ದಾರೆ.

ವಿಜಯದಶಮಿ ಹಬ್ಬದಲ್ಲಿ ಐದು ದಿನ ಈ ದೇವಸ್ಥಾನದಲ್ಲಿ ದೀಪ ಹಾಕುವುದು ಮತ್ತು ಭಜನೆ ಕಾರ್ಯಕ್ರಮಗಳು ನಡೆಯುತ್ತವೆ. ಮರಣ ಹೊಂದಿದ ಕೆಲವೇ ದಿನಗಳಲ್ಲಿ ಹೆತ್ತವರನ್ನು ಮರೆಯುವ ಇಂದಿನ ದಿನಗಳಲ್ಲಿ ತಾಯಿಯ ಅಕ್ಕರೆಯ ಮಕ್ಕಳು ಅಮ್ಮನ ನೆನಪಿಗೋಸ್ಕರ ದೇವಸ್ಥಾನ ನಿರ್ಮಿಸಿರುವುದು ವಿಶೇಷ ಎಂದು ಬಾಳೂರು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT