ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 291 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಸಿಎಂ ಶಂಕುಸ್ಥಾಪನೆ

Last Updated 15 ಮಾರ್ಚ್ 2023, 14:39 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ತಡಸದ ಸಮೀಪ ಕೈಗಾರಿಕಾ ವಲಯ ಮಾಡಬೇಕು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೂಚನೆ ಕೊಟ್ಟಿದ್ದೇನೆ. 500 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಿ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆ ಶಿಗ್ಗಾವಿ, ಸವಣೂರು, ಹಾವೇರಿ ಹಾಗೂ ಹಾನಗಲ್‌ ತಾಲ್ಲೂಕುಗಳ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಲಜೀವನ್‌ ಮಿಷನ್‌ ಯೋಜನೆಯಡಿ 291 ಗ್ರಾಮಗಳ ₹840 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶಿಗ್ಗಾವಿ ಬಳಿ ಈಗಾಗಲೇ ಟೆಕ್ಸ್‌ಟೈಲ್‌ ಪಾರ್ಕ್ ಮಾಡಿ, ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ. 10 ಸಾವಿರ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ಶಿಗ್ಗಾವಿಯನ್ನು ಮಾದರಿ ತಾಲ್ಲೂಕು ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನಂ.1 ತಾಲ್ಲೂಕನ್ನಾಗಿ ಮಾಡಲಾಗುವುದು ಎಂದು ಹೇಳಿದರು.

40 ಲಕ್ಷ ಮನೆಗಳಿಗೆ ನೀರು:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 3 ವರ್ಷಗಳ ಹಿಂದೆ ಪ್ರತಿ ಮನೆಗೆ ಪ್ರತಿ ವ್ಯಕ್ತಿಗೆ 50 ಲೀಟರ್ ನೀರು ನೀಡುವುದಾಗಿ ಹೇಳಿದ್ದರು. ಇಂದು ಇಡೀ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರು ನೀಡಿದ್ದಾರೆ. ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ರಾಜ್ಯದ 25 ಲಕ್ಷ ಮನೆಗಳಿಗೆ ಮಾತ್ರ ನೀರು ನೀಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ 40 ಲಕ್ಷ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿದೆ. ಇದು ಡಬಲ್ ಇಂಜಿನ್ ಸರ್ಕಾರದ ಕೆಲಸ ಎಂದರು.

₹12 ಸಾವಿರ ಕೋಟಿ ಮೀಸಲು:

ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು, ಹರ ಘರ್ ಗಂಗಾ ಯೋಜನೆಗೆ ಬಜೆಟ್‍ನಲ್ಲಿ ₹12 ಸಾವಿರ ಕೋಟಿ ಮೀಸಲಿಡಲಾಗಿದೆ. ಜನರಿಗೆ ಮೂಲಭೂತ ಹಕ್ಕು ಮತ್ತು ಸೌಕರ್ಯ ಒದಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದ 12 ಸೇತುಗಳನ್ನು ಮಂಜೂರು ಮಾಡಲಾಗಿದೆ. ಮತ್ತೆ ಎಂಟು ಸೇತುವೆಗಳನ್ನು ಮಂಜೂರು ಮಾಡಲಾಗುವುದು ಎಂದರು.

ಕೆರೆಗಳ ಅಭಿವೃದ್ಧಿಗೆ ₹30 ಕೋಟಿ:

ಕೆರೆಗಳ ಅಭಿವೃದ್ಧಿಗೆ ₹30 ಕೋಟಿ ನೀಡಲಾಗಿದೆ. ಮಳೆಯಿಂದ ಹಾನಿಯಾದ ಕೆರೆಗಳ ದುರಸ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶಿಗ್ಗಾವಿ ಏತ ನೀರಾವರಿ ಯೋಜನೆ ತಡಸದವರೆಗೆ, ಸವಣೂರು ಏತ ನೀರಾವರಿ ಯೋಜನೆ ಹಿರೇಬೆಂಡಿಗೇರಿವರೆಗೆ ವಿಸ್ತರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ, ಸಿಇಒ ಅಕ್ಷಯ ಶ್ರೀಧರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಧಾರವಾಡದ ಅಧೀಕ್ಷಕ ಎಂಜಿನಿಯರ್‌ ಆರ್‌.ಪಿ. ಅರವಿಂದ, ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಚ್‌. ಉದಗಟ್ಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಕಿರಣ್‌ ಔರಾದಿ, ಗ್ರಾ.ಪಂ.ಅಧ್ಯಕ್ಷೆ ರಾಮವ್ವ ಲಮಾಣಿ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

ತಡಸಕ್ಕೆ ಡಿಗ್ರಿ ಕಾಲೇಜು: ಸಿಎಂ ಭರವಸೆ

ತಡಸಕ್ಕೆ ಬರುವ ದಿನಗಳಲ್ಲಿ ಡಿಗ್ರಿ ಕಾಲೇಜು ಮಂಜೂರು ಮಾಡಲಾಗುವುದು ಹಾಗೂ ಐಟಿಐ ಮಂಜೂರು ಮಾಡುವ ಇಚ್ಛೆ ಸಹ ಇದೆ. ತಡಸದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಲಾಗುವುದು. ಒಂದೇ ವರ್ಷದಲ್ಲಿ ಕ್ಷೇತ್ರದಲ್ಲಿ 150 ಶಾಲಾ ಕೊಠಡಿ ಕಟ್ಟಲಾಗಿದೆ. ಸರ್ಕಾರಿ ತರಬೇತಿ ಕೇಂದ್ರ (ಜಿಟಿಟಿಸಿ) ಆರಂಭಿಸಲಾಗುತ್ತಿದೆ. ಶಿಗ್ಗಾವಿಯ ಐಟಿಐ ಕಾಲೇಜನ್ನು ಉನ್ನತೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT