ಭಾನುವಾರ, ಏಪ್ರಿಲ್ 2, 2023
33 °C

ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗೆ ₹1 ಕೋಟಿ ಅನುದಾನ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಡ (ಹಾವೇರಿ): ‘ಕಂದಾಯ ಸಚಿವರು ಎಲ್ಲೆಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾರೋ ಆ ಗ್ರಾಮಕ್ಕೆ ₹1 ಕೋಟಿ ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಪ್ರಕಾರ ಕನಕದಾಸರ ಜನ್ಮಭೂಮಿಯಾದ ಬಾಡ ಗ್ರಾಮಕ್ಕೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ವಿರೋಧ ಪಕ್ಷದವರು ಪದೇ ಪದೇ ಪ್ರಶ್ನಿಸುತ್ತಾರೆ. ಈ ವರ್ಷ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪಿಎಚ್‌ಸಿಯನ್ನಾಗಿ ಮೇಲ್ದರ್ಜೆಗೇರಿಸುತ್ತಿದ್ದೇವೆ. ಆಸ್ಪತ್ರೆಗಳ ಉನ್ನತೀಕರಣ ಮಾಡುತ್ತಿದ್ದೇವೆ. ನೀರಾವರಿ ಯೋಜನೆಗಳಿಗೆ ಅತಿ ಹೆಚ್ಚು ಅನುದಾನ ನೀಡಿದ್ದೇವೆ. ರೈಲ್ವೆ ಯೋಜನೆಗೆ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುತ್ತಿದ್ದೇವೆ. ಇವೆಲ್ಲವೂ ಸಾಧನೆ ಅಲ್ಲವೇನೂ ಎಂದು ಸಿಎಂ ಪ್ರಶ್ನಿಸಿದರು.

ಭಾವುಕರಾದ ಸಿಎಂ: ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ (ಶಿಗ್ಗಾವಿ ಕ್ಷೇತ್ರ) ಹೂಳಬೇಕು ಅಂತ ಘೋಷಣೆ ಮಾಡಿದ್ದೇನೆ ಎಂದು ಭಾವುಕರಾಗಿ ಮಾತು ನಿಲ್ಲಿಸಿದರು. 

ಸಿದ್ದರಾಮಯ್ಯಗೆ ತಿರುಗೇಟು: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಂಬಳಿ ಹಾಕಿಕೊಂಡು ನಾಟಕ ಮಾಡಿದವರು, ಅಹಿಂದ ಎಂದು ಘೋಷಣೆ ಮಾಡಿದವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ. ನಮ್ಮ ಬೊಮ್ಮಾಯಿ ಅವರು ಕುರಿಗಾಹಿಗಳಿಗೆ ಕುರಿಯನ್ನು ಉಚಿತವಾಗಿ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಟೀಕಿಸಿದರು.

 ರೈತಪರ ಸರ್ಕಾರ: ಸರ್ಕಾರಿ ಜಮೀನು ಒತ್ತುವರಿ ಮಾಡುವ ರೈತರ ವಿರುದ್ಧ ಕೇಸ್‌ ಹಾಕಿ, ಜೈಲಿಗೆ ಕಳುಹಿಸಲಾಗುತ್ತಿತ್ತು. ಇದನ್ನು ತಪ್ಪಿಸಲು ಕಾನೂನು ತಿದ್ದುಪಡಿ ಮಾಡಿ, ನಮ್ಮ ಸರ್ಕಾರ ನಿಜವಾಗಿಯೂ ರೈತ ಪರ ಎಂದು ಸಾಬೀತು ಮಾಡಿದ್ದೇವೆ ಎಂದು ಹೇಳಿದ್ದಾರೆ.

2790 ಗ್ರಾಮ ವಾಸ್ತವ್ಯ
ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಅಲೆದಾಡಿ, ಚಪ್ಪಲಿ ಸವೆಯುತ್ತವೆಯೇ ಹೊರತು ನಮಗೆ ಪರಿಹಾರ ಸಿಗುವುದಿಲ್ಲ ಎಂಬ ಜನರ ಭಾವನೆ ಹೋಗಲಾಡಿಸಲು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ರೂಪಿಸಿದೆ. ಇದು ನನ್ನ 13ನೇ ಗ್ರಾಮ ವಾಸ್ತವ್ಯ. ಇದುವರೆಗೆ ರಾಜ್ಯದಲ್ಲಿ ವಿವಿಧ ಜಿಲ್ಲಾಧಿಕಾರಿಗಳು 350 ಕಡೆ, ಉಪವಿಭಾಗಾಧಿಕಾರಿಗಳು 351 ಕಡೆ, ತಹಶೀಲ್ದಾರ್‌ಗಳು 2089 ಕಡೆ ಸೇರಿದಂತೆ ಒಟ್ಟು 2790 ಗ್ರಾಮ ವಾಸ್ತವ್ಯ ಮಾಡಲಾಗಿದೆ. ಒಟ್ಟು 3,72,856 ಜನರಿಗೆ ಸ್ಥಳದಲ್ಲೇ ಪರಿಹಾರ ಕೊಡಲಾಗಿದೆ ಎಂದು ವಿವರ ನೀಡಿದರು.

ಜೋಶಿಯವರು ಎತ್ತಿದ ಕೈ: ಸಿಎಂ ವ್ಯಂಗ್ಯ
‘ಈ ದೇಶದಲ್ಲಿ ಯಾವುದೇ ಕಾರ್ಖಾನೆ ಬಂದ್ ಆಗಬಹುದು. ಮಕ್ಕಳು ಮಾಡುವ ಕಾರ್ಖಾನೆ ಎಂದೂ ಬಂದ್ ಆಗುವುದಿಲ್ಲ. ನೀವಂತೂ ಒಪ್ಪಿಕೊಳ್ಳುತ್ತೀರಾ ಅಂತ ನನಗೆ ಗೊತ್ತಿದೆ. ನಮ್ಮ ಜೋಶಿ ಸಾಹೇಬ್ರು ಅದರಲ್ಲಿ ಎತ್ತಿದ ಕೈ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕಾಲೆಳೆದರು. 

ಈ ಮಾತನ್ನು ಕೇಳಿದ ಸಭಿಕರು ಕೇಕೆ ಹಾಕಿ ಹರ್ಷೋದ್ಗಾರ ಮಾಡಿದರು. ಆದರೆ, ಜೋಶಿಯವರು ಮುಜುಗರಕ್ಕೆ ಒಳಗಾಗಿದ್ದು ಕಂಡು ಬಂತು. 

ಜನಸಂಖ್ಯೆ ಜಾಸ್ತಿಯಾಗುತ್ತಿದೆ, ಆದರೆ ಭೂಮಿ ಮಾತ್ರ ಅಷ್ಟೇ ಇದೆ. ಹೀಗಾಗಿ ರೈತರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಸಿಎಂ ಈ ರೀತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು