ಗುರುವಾರ , ಜನವರಿ 27, 2022
27 °C
ಮಾನ್ಯತೆ ನವೀಕರಣ ಕಡ್ಡಾಯ ಆದೇಶ ಹಿಂಪಡೆಯಿರಿ: ಆರ್‌.ಎಂ. ಕುಬೇರಪ್ಪ

ಖಾಸಗಿ ಶಾಲೆ ಮುಚ್ಚುವ ಹುನ್ನಾರ: ಆರ್‌.ಎಂ. ಕುಬೇರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಖಾಸಗಿ ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ ನವೀಕರಣ ನೆಪದಲ್ಲಿ ಖಾಸಗಿ ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸಿದೆ. ಆಗಸ್ಟ್‌ ತಿಂಗಳಲ್ಲಿ ಹೊರಡಿಸಿರುವ ಕಾನೂನು ಬಾಹಿರ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ಘಟಕದ ರಾಜ್ಯ ಘಟಕದ ಅಧ್ಯಕ್ಷ ಆರ್‌.ಎಂ.ಕುಬೇರಪ್ಪ ಒತ್ತಾಯಿಸಿದರು. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಖಾಸಗಿ ಶಾಲೆಗಳು ಕಡ್ಡಾಯವಾಗಿ ನ್ಯಾಷನಲ್‌ ಬಿಲ್ಡಿಂಗ್‌ ಕೋಡ್‌ ಮತ್ತು ಅಗ್ನಿ ಸುರಕ್ಷತೆ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಹಾಗೂ ಶಾಲೆಗಳ ಸ್ಥಿರನಿಧಿಯನ್ನು ₹1 ಲಕ್ಷದಿಂದ ₹10 ಲಕ್ಷದವರೆಗೆ ಹೆಚ್ಚು ಮಾಡಲಾಗಿದೆ. ಶಿಕ್ಷಣ ಇಲಾಖೆಯ ಈ ಅವೈಜ್ಞಾನಿಕ ಕ್ರಮವನ್ನು ಖಂಡಿಸುತ್ತೇವೆ ಎಂದರು. 

ಮಾನ್ಯತೆ ನವೀಕರಣವಾಗಬೇಕಾದರೆ, ಪ್ರತಿಯೊಂದು ಶಾಲಾ ಆಡಳಿತ ಮಂಡಳಿಯವರು ಅಗ್ನಿನಂದಕ ಅಳವಡಿಸುವುದು, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದು, ಮಣ್ಣು ಪರೀಕ್ಷೆ ಮಾಡಿಸುವುದು, ಕಟ್ಟಡದ ನಕ್ಷೆ ಮತ್ತು ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಪಡೆಯುವುದು, ಇದೆಲ್ಲದರ ಖರ್ಚು–ವೆಚ್ಚ ಹತ್ತಾರು ಲಕ್ಷ ತಗಲುತ್ತದೆ. ವಾಸ್ತವಿಕವಾಗಿ ಯಾವ ಖಾಸಗಿ ಆಡಳಿತ ಮಂಡಳಿಗಳು ಈ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದರು. 

ಈ ಆದೇಶವನ್ನು ಜಾರಿಗೊಳಿಸಿದರೆ, ರಾಜ್ಯದ ಶೇ 90ರಷ್ಟು ಶಾಲೆಗಳನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ. ಸರ್ಕಾರಿ ಶಾಲಾ–ಕಾಲೇಜುಗಳಿಗೆ ಇಲ್ಲದ ಈ ನಿಬಂಧನೆ, ಕೇವಲ ಖಾಸಗಿ ಶಾಲೆಗಳಿಗೆ ಏಕೆ? ಈ ತಾರತಮ್ಯ ಸರಿಯಲ್ಲ. ಶಿಕ್ಷಣ ಇಲಾಖೆಯ ಈ ಆದೇಶವನ್ನು ಖಂಡಿಸಿ, ಜ.6ರಂದು ಎಲ್ಲ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಮುಚ್ಚಿ, ಶಿಕ್ಷಕರು ಮತ್ತು ಖಾಸಗಿ ಆಡಳಿತ ಮಂಡಳಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. 

ಶಿಕ್ಷಕರು ಬೀದಿಗಿಳಿದು ಹೋರಾಟ ಮಾಡುವುದನ್ನು ತಪ್ಪಿಸಿ, ಖಾಸಗಿ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಯಾವುದೇ ಷರತ್ತುಗಳಿಲ್ಲದೆ, ಈ ಕರಾಳ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು