ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಪೈಪ್‌ ಪೂರೈಕೆ: ಬಡ್ಡಿಸಹಿತ ಹಣ ಪಾವತಿಸಿ

ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ
Published 1 ನವೆಂಬರ್ 2023, 8:03 IST
Last Updated 1 ನವೆಂಬರ್ 2023, 8:03 IST
ಅಕ್ಷರ ಗಾತ್ರ

ಹಾವೇರಿ: ಗುಣಮಟ್ಟದ ಪಿವಿಸಿ ಪೈಪ್‍ಗಳನ್ನು ಪೂರೈಸದೇ ಇರುವ ಹುಬ್ಬಳ್ಳಿಯ ರಾಮದೇವ ಪ್ಲಾಸ್ಟಿಕ್ ಅಂಗಡಿ ಮಾಲೀಕರಿಗೆ ಖರೀದಿ ಮಾಡಿದ ರೈತನಿಗೆ ಉತ್ತಮ ಗುಣಮಟ್ಟದ ಪೈಪ್‍ಗಳನ್ನು ಪೂರೈಸಬೇಕು ಇಲ್ಲವಾದರೆ ಅದರ ಮೊತ್ತವನ್ನು ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಹಾನಗಲ್ ತಾಲ್ಲೂಕು ಮಾಸನಕಟ್ಟಿ ಗ್ರಾಮದ ಮಲ್ಲಿಕಾರ್ಜುನ ರಾಯಪ್ಪ ಬಿಜಾಪುರ ಅವರು ತಮ್ಮ ಜಮೀನಲ್ಲಿ ಕೊಳವೆ ಬಾವಿ ಕೊರೆಸುವ ಉದ್ದೇಶದಿಂದ ಹುಬ್ಬಳ್ಳಿಯ ರಾಮದೇವ ಪ್ಲಾಸ್ಟಿಕ್‍ನಲ್ಲಿ 16 ಡಿಸೆಂಬರ್ 2022ರಂದು 180 ಎಂ.ಎಂ. ಅಳತೆಯ 6 ಕೆ.ಜಿ. ಸಾಮರ್ಥ್ಯದ ಐದು ಪಿವಿಸಿ ಪೈಪ್‍ಗಳನ್ನು ಹಾಗೂ 90 ಎಂ.ಎಂ.ಅಳತೆಯ ಆರು ಕೆ.ಜಿ.ಸಾಮರ್ಥ್ಯದ 50 ಪಿವಿಸಿ ಪೈಪ್‍ಗಳನ್ನು ₹ 37 ಸಾವಿರಕ್ಕೆ ಖರೀದಿಸಿದ್ದರು. ಆದರೆ ರಾಮದೇವ ಪ್ಲಾಸ್ಟಿಕ್‍ನವರು ₹ 19,470ಕ್ಕೆ ಮಾತ್ರ ಬಿಲ್ ನೀಡಿದ್ದರು. ಇದನ್ನು ವಿಚಾರಿಸಲಾಗಿ ನಮ್ಮ ಪೈಪ್‍ಗಳಿಗೆ ಏನೂ ಆಗುವುದಿಲ್ಲ ನಿಮಗೆ ಬಿಲ್ಲಿನ ಅವಶ್ಯಕತೆ ಬರುವುದಿಲ್ಲ ಎಂದು ಹೇಳಿದ್ದರು.

ಮಲ್ಲಿಕಾರ್ಜುನ ರಾಯಪ್ಪ ಬಿಜಾಪುರ ಅವರು ತಮ್ಮ ಜಮೀನಿನಲ್ಲಿ ಪೈಪ್ ಅಳವಡಿಸಿ ನೀರು ಸರಬರಾಜು ಮಾಡಲು ಕೊಳವೆ ಬಾವಿ ಚಾಲು ಮಾಡಿದಾಗ ಎಲ್ಲಾ ಪೈಪ್‍ಗಳು ಒಡೆದು ಹೋಗಿದ್ದವು. ಅವರು ಒಡೆದ ಪೈಪ್‍ಗಳನ್ನು ತೋರಿಸಿ ಉತ್ತಮ ಗುಣಮಟ್ಟದ ಪೈಪ್ ಕೊಡುವಂತೆ ಕೇಳಿದಾಗ ರಾಮದೇವ ಪ್ಲಾಸ್ಟಿಕ್‍ನವರು ಸ್ಪಂದಿಸದ ಹಿನ್ನಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಬಿ.ಎಸ್. ಈಶ್ವರಪ್ಪ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ. ಎಸ್.ಹಿರೇಮಠ ನೇತೃತ್ವದ ತಂಡ, ಗ್ರಾಹಕನಿಗೆ ಉತ್ತಮ ಗುಣಮಟ್ಟದ ಪಿವಿಸಿ ಪೈಪ್‍ಗಳನ್ನು ನೀಡಬೇಕು ಅಥವಾ ಪೈಪ್ ಖರೀದಿಗೆ ಪಾವತಿಸಿದ ₹37 ಸಾವಿರವನ್ನು ಶೇ 6ರ ಬಡ್ಡಿ ಸಹಿತ 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ.

ಮಾನಸಿಕ, ದೈಹಿಕ ವ್ಯಥೆಗಾಗಿ ₹3 ಸಾವಿರ ಹಾಗೂ ಪ್ರಕರಣದ ಖರ್ಚು ₹3 ಸಾವಿರಗಳನ್ನು ಪಾವತಿಸಬೇಕು. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT