ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಸಾರಿಗೆ ನೌಕರರ ಮುಷ್ಕರ

ಬಸ್‌ ಸಂಚಾರ ಸ್ಥಗಿತ: ಖಾಸಗಿ ವಾಹನಗಳ ಮೊರೆ ಹೋದ ಪ್ರಯಾಣಿಕರು
Last Updated 12 ಡಿಸೆಂಬರ್ 2020, 15:34 IST
ಅಕ್ಷರ ಗಾತ್ರ

ಹಾವೇರಿ: ‘ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಎರಡನೇ ದಿನವಾದ ಶನಿವಾರವೂ ನಗರದಲ್ಲಿ ಮುಂದುವರಿಯಿತು. ಬಸ್‌ ಸಂಚಾರ ಸಂಪೂರ್ಣ ರದ್ದುಗೊಂಡ ಪರಿಣಾಮ ಖಾಸಗಿ ವಾಹನಗಳಲ್ಲಿ ಜನರು ಪ್ರಯಾಣ ಬೆಳೆಸಿದರು.

ನಗರ ಬಸ್‌ ನಿಲ್ದಾಣದಲ್ಲಿ ಗುಂಪುಗೂಡಿದ ಸಾರಿಗೆ ನೌಕರರು ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಭಟನೆ ನಡೆಸಿದರು. ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ರೈತ ಸಂಘದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಾರಿಗೆ ನೌಕರರು ಸ್ಥಳದಲ್ಲೇ ಅಡುಗೆ ಮಾಡಿ, ಊಟ ಮಾಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಎಸ್‌.ಅಕ್ಕಿ ಮಾತನಾಡಿ,ಸಾರಿಗೆ ಸಂಸ್ಥೆಯಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು 12 ತಾಸು ದುಡಿದರೂ ಅವರ ಸಂಬಳ ಕೇವಲ ₹10 ಸಾವಿರವಿದೆ. ವೇತನದಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಈ ಕನಿಷ್ಠ ವೇತನದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚು, ಆಸ್ಪತ್ರೆ ಖರ್ಚು, ಮನೆ ಬಾಡಿಗೆ ಭರಿಸುವುದಾದರೂ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾರಿಗೆ ನೌಕರರಿಗೆ ವಸತಿ ಸೌಲಭ್ಯ, ಮಕ್ಕಳಿಗೆ ಉಚಿತ ಶಿಕ್ಷಣ, ಸಕಾಲದಲ್ಲಿ ವೇತನ ನೀಡುವ ಮೂಲಕ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಸರ್ಕಾರಕ್ಕೆ ಆದಾಯದ ಮೂಲವಾದ ಸಾರಿಗೆ ಸಂಸ್ಥೆಯನ್ನು ಕಡೆಗಣಿಸಬಾರದು ಎಂದು ಮನವಿ ಮಾಡಿದರು.ಜಿಲ್ಲಾ ಸಂಚಾಲಕಿ ಸುಮಾ ಪುರದ ಸೇರಿದಂತೆ ಹಲವಾರು ರೈತರ ಮುಖಂಡರು ಪಾಲ್ಗೊಂಡಿದ್ದರು.

ದುಪ್ಪಟ್ಟು ದರ:

ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಟೆಂಪೋ ಟ್ರ್ಯಾಕ್ಸ್‌, ಮಿನಿ ಬಸ್‌, ಕಾರುಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದರು. ಹಾವೇರಿಯಿಂದ ಶಿಗ್ಗಾವಿಗೆ ₹100, ಹುಬ್ಬಳ್ಳಿಗೆ ₹200 ಹಾಗೂ ರಾಣೆಬೆನ್ನೂರಿಗೆ ₹80ರಂತೆ ದುಪ್ಪಟ್ಟು ದರವನ್ನು ಖಾಸಗಿ ವಾಹನಗಳು ನಿಗದಿಪಡಿಸಿದ್ದವು. ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚು ಹಣ ಕೊಟ್ಟು ಊರುಗಳಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT